ಹೊರವಲಯ ಬಡಾವಣೆಗಳಿಗೆ ಮೂಲ ಸೌಲಭ್ಯ ಕಲ್ಪಿಸಿ: ಅಶೋಕ್‌ಕುಮಾರ್

KannadaprabhaNewsNetwork | Published : Mar 4, 2025 12:31 AM

ಸಾರಾಂಶ

ಮಂಡ್ಯ ನಗರದ ಹೊರ ವಲಯದಲ್ಲಿ ಸುಮಾರು ೧೮ಕ್ಕೂ ಹೆಚ್ಚು ಹೊಸ ಬಡಾವಣೆಗಳು ನಿರ್ಮಾಣಗೊಂಡಿದ್ದು, ಬಹುತೇಕ ಎಲ್ಲವೂ ಶ್ರೀರಂಗಪಟ್ಟಣ ತಾಲೂಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿವೆ. ಈ ಹೊರ ವಲಯದ ಬಡಾವಣೆಗಳ ನಿವಾಸಿಗಳು ಸಂಬಂಧಪಟ್ಟ ಗ್ರಾಮ ಪಂಚಾಯ್ತಿಗಳಿಗೆ ಅತಿ ಹೆಚ್ಚು ಕಂದಾಯ ಸಂದಾಯ ಮಾಡುತ್ತಿದ್ದರೂ, ಮೂಲಭೂತ ಸೌಲಭ್ಯಗಳಿಲ್ಲದೆ ವಂಚಿತರಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಹೊರವಲಯದಲ್ಲಿರುವ ಬಡಾವಣೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮಂಡ್ಯ ನಗರ ಹೊರವಲಯ ಬಡಾವಣೆಗಳ ಕ್ಷೇಮಾಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಎಚ್.ಆರ್. ಅಶೋಕ್‌ಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಹೊರ ವಲಯದಲ್ಲಿ ಸುಮಾರು ೧೮ಕ್ಕೂ ಹೆಚ್ಚು ಹೊಸ ಬಡಾವಣೆಗಳು ನಿರ್ಮಾಣಗೊಂಡಿದ್ದು, ಬಹುತೇಕ ಎಲ್ಲವೂ ಶ್ರೀರಂಗಪಟ್ಟಣ ತಾಲೂಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿವೆ. ಈ ಹೊರ ವಲಯದ ಬಡಾವಣೆಗಳ ನಿವಾಸಿಗಳು ಸಂಬಂಧಪಟ್ಟ ಗ್ರಾಮ ಪಂಚಾಯ್ತಿಗಳಿಗೆ ಅತಿ ಹೆಚ್ಚು ಕಂದಾಯ ಸಂದಾಯ ಮಾಡುತ್ತಿದ್ದರೂ, ಮೂಲಭೂತ ಸೌಲಭ್ಯಗಳಿಲ್ಲದೆ ವಂಚಿತರಾಗುತ್ತಿದ್ದಾರೆ. ಇತ್ತ ಪಂಚಾಯ್ತಿಗಳಿಂದ ಅಭಿವೃದ್ಧಿ ನಿರ್ಲಕ್ಷ್ಯಕ್ಕೊಳಗಾಗಿ, ಅತ್ತ ನಗರಸಭೆಗೂ ಸೇರ್ಪಡೆಯಾಗದೆ. ಬಡಾವಣೆಗಳ ಸರ್ವತೋಮುಖ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಅಳಲು ತೋಡಿಕೊಂಡರು.

ಜಿಲ್ಲೆಯಲ್ಲಿ ಕಾವೇರಿ ನದಿ ಹರಿಯುತ್ತಿದ್ದರೂ ನಮಗೆ ಕುಡಿಯಲು ಕಾವೇರಿ ನೀರು ಪೂರೈಕೆ ಆಗುತ್ತಿಲ್ಲ. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇದ್ದರೂ ಯೋಜನಾ ಬದ್ಧವಾಗಿ ಬಡಾವಣೆಗಳು ನಿರ್ಮಾಣವಾಗಿಲ್ಲ. ಬಡಾವಣೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾವೇರಿ ಕುಡಿಯುವ ನೀರು ಪೂರೈಕೆ, ರಸ್ತೆ, ಚರಂಡಿ ನಿರ್ಮಾಣ, ಸಮರ್ಪಕ ವಿದ್ಯುಚ್ಚಕ್ತಿ ಪೂರೈಕೆ ಹಾಗೂ ಕಸ ವಿಲೇವಾರಿ, ಬಡಾವಣೆ ನಿವಾಸಿಗಳ ಮತದಾನ, ಆಯಾ ಪಂಚಾಯಿತಿ ವ್ಯಾಪ್ತಿಗೆ ಬರುವಂತೆ ಮತಗಟ್ಟೆಗಳನ್ನು ಸ್ಥಾಪಿಸುವುದು, ೨೦೦೬ರ ನಿಯಮಾವಳಿಗಳ ಪ್ರಕಾರ ಗ್ರಾಮ ಠಾಣಾ ಗಡಿ ವಿಸ್ತರಣೆ ಮಾಡುವುದು, ಅಪೂರ್ಣಗೊಂಡಿರುವ ಜಲಜೀವನ್ ಮಿಷನ್ ಕಾಮಗಾರಿಗಳನ್ನು ಪೂರ್ಣಗೊಳಿಸುವುದು, ರಾಜಕಾಲುವೆ ಆಕ್ರಮಣಗಳನ್ನು ತೆರವುಗೊಳಿಸಿ ಗಡಿ ಗುರುತಿಸುವುದು, ಬಡಾವಣೆಗಳಲ್ಲಿರುವ ಉದ್ಯಾನಗಳ ಗಡಿ ಗುರುತಿಸಿ ಅಬಿವೃದ್ಧಿಪಡಿಸುವುದು, ಎಲ್ಲಾ ಬಡಾವಣೆಗಳನ್ನು ನಗರಸಭಾ ವ್ಯಾಪ್ತಿಗೆ ಸೇರಿಸಿ ವಾರ್ಡ್‌ಗಳನ್ನಾಗಿ ವಿಂಗಡಿಸುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ಕೆ. ಮಹಂತಪ್ಪ, ಎನ್. ರಾಮಚಂದ್ರ, ಎಚ್.ಎಂ. ಬಸವರಾಜು, ಶಿವರಾಂ, ಅಶೋಕ್ ಗೋಷ್ಟಿಯಲ್ಲಿದ್ದರು.

Share this article