ಕವಿತಾಳ ಬಾಲಕಿಯರ ಸರ್ಕಾರಿ ಶಾಲೆಗೆ ಮೂಲ ಸವಲತ್ತು ಕಲ್ಪಿಸಿ

KannadaprabhaNewsNetwork |  
Published : Mar 07, 2024, 01:49 AM IST
06ಕೆಪಿಕೆವಿಟಿ01:  | Kannada Prabha

ಸಾರಾಂಶ

ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸಿ ನಾಲ್ಕು ವರ್ಷ ಕಳೆದರೂ ಪ್ರತ್ಯೇಕವಾಗಿ ಶಿಕ್ಷಕರನ್ನು ನೇಮಿಸಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯ ಕನ್ನಡ ಮಾಧ್ಯಮದ ಶಿಕ್ಷಕರೇ ಇಂಗ್ಲೀಷ್ ಮಾಧ್ಯಮದ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ ಎಂದು ಆರೋಪ

ಕನ್ನಡಪ್ರಭ ವಾರ್ತೆ ಕವಿತಾಳ

ಪಟ್ಟಣದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಜೊತೆಗೆ ಇಂಗ್ಲೀಷ್ ಮಾಧ್ಯಮ ಕಲಿಯುವ ಮಕ್ಕಳಿಗೆ ಶಿಕ್ಷಕರ ಕೊರತೆ ಇದೆ. ಈ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸಿ ನಾಲ್ಕು ವರ್ಷ ಕಳೆದರೂ ಪ್ರತ್ಯೇಕವಾಗಿ ಶಿಕ್ಷಕರನ್ನು ನೇಮಿಸಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯ ಕನ್ನಡ ಮಾಧ್ಯಮದ ಶಿಕ್ಷಕರೇ ಇಂಗ್ಲೀಷ್ ಮಾಧ್ಯಮದ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

ಕನ್ನಡ ಮಾಧ್ಯಮದಲ್ಲಿ 241 ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ 35 ಮಕ್ಕಳು ಸೇರಿ ಒಟ್ಟು 276 ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆಯಲ್ಲಿ 12 ಶಿಕ್ಷಕರ ಹುದ್ದೆಗಳ ಮಂಜೂರಾತಿ ಇದೆ. ಈಗ 9 ಜನ ಶಿಕ್ಷಕರು ಇದ್ದಾರೆ, ಪಾಲಕರ ಒತ್ತಾಯದ ಮೇರೆಗೆ ಇತ್ತೀಚೆಗೆ ಇಂಗ್ಲಿಷ್ ಮಾಧ್ಯಮಕ್ಕೆ ಒಬ್ಬ ಅತಿಥಿ ಶಿಕ್ಷಕಿಯನ್ನು ನೇಮಕ ಮಾಡಲಾಗಿದೆ.

ಬಿಸಿಯೂಟದ ಕೊಠಡಿಯ ಮೇಲ್ಛಾವಣಿ ಸಿಮೆಂಟ್ ಪದರು ಕಳಚು ಬೀಳುತ್ತಿದ್ದು ದುರಸ್ತಿ ಅಥವಾ ಹೊಸ ಕೊಠಡಿಯ ನಿರ್ಮಾಣದ ಅಗತ್ಯವಿದೆ. ಶಾಲೆಯಲ್ಲಿ ಕೊಳವೆಬಾವಿ ನೀರು ಕುಡಿಯಲು ಯೋಗ್ಯವಿಲ್ಲದ ಕಾರಣ ಕೇವಲ ಶೌಚಾಲಯಗಳಿಗೆ ಮತ್ತು ಕೈ ತೊಳೆಯಲು ಬಳಕೆ ಮಾಡಲಾಗುತ್ತಿದೆ. ಉಳಿದಂತೆ ಅಲ್ಪಸ್ವಲ್ಪ ಪೂರೈಕೆಯಾಗುವ ನಲ್ಲಿ ನೀರನ್ನು ಬಿಸಿಯೂಟದ ಅಡುಗೆಗೆ ಬಳಸಲಾಗುತ್ತಿದೆ. ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಕೊರತೆ ಇದೆ. ಹೀಗಾಗಿ ಮಕ್ಕಳು ಮನೆಯಿಂದಲೇ ನೀರು ತರುವುದು ಅನಿವಾರ್ಯವಾಗಿದೆ.

ಶೌಚಾಲಯ ಸಮಸ್ಯೆ: 6 ಶೌಚಾಲಯಗಳಲ್ಲಿ ಒಂದನ್ನು ಶಿಕ್ಷಕರು ಉಪಯೋಗಿಸುತ್ತಾರೆ ಎರಡು ಶೌಚಾಲಯಗಳ ಮೇಲ್ಛಾವಣಿ ಉದುರುತ್ತಿದ್ದು ಬಳಕೆಗೆ ಯೋಗ್ಯವಾಗಿಲ್ಲ. ಹೀಗಾಗಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯದ ಅಗತ್ಯವಿದೆ. ಶಾಲಾ ಆವರಣ ಚಿಕ್ಕದಾಗಿರುವುದರಿಂದ ಮಕ್ಕಳಿಗೆ ಆಟ ಆಡಲು ಸಾಧ್ಯವಾಗುತ್ತಿಲ್ಲ ಮತ್ತು ಬೆಳಿಗಿನ ಸಮಯದಲ್ಲಿ ಪ್ರಾರ್ಥನೆಗೆ ನಿಂತುಕೊಳ್ಳಲೂ ಜಾಗ ಸಾಕಾಗುತ್ತಿಲ್ಲ ಆಟದ ಮೈದಾನ ಇಲ್ಲ ಎನ್ನುವ ಕಾರಣಕ್ಕೆ ಈ ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಯನ್ನೇ ಸರ್ಕಾರ ಮಂಜೂರು ಮಾಡಿಲ್ಲ. ಅದ್ದರಿಂದ ಶಾಲೆ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಪಾಲಕರಾದ ಸಂಗನಗೌಡ ಮತ್ತು ಹಂಪಣ್ಣ ಕಂದಗಲ್ ಆಗ್ರಹಿಸಿದ್ದಾರೆ.

ಶಾಲಾ ಕಾಂಪೌಂಡ್ ಎತ್ತಿರಿಸಬೇಕಿದೆ, ಶೌಚಾಲಯ ನಿರ್ಮಾಣ ಮತ್ತು ಬಿಸಿಯೂಟದ ಕೊಠಡಿ ನಿರ್ಮಾಣ ಮತ್ತು ಕಂಪ್ಯೂಟರ್ ಕಲಿಕೆಗೆ ಪ್ರತ್ಯೇಕ ಕೊಠಡಿ ಅವಶ್ಯವಿದೆ. ಅದೇ ರೀತಿ ಇಂಗ್ಲೀಷ ಮಾಧ್ಯಮಕ್ಕೆ ಪ್ರತ್ಯೇಕ ಶಿಕ್ಷಕರನ್ನು ನೇಮಿಸಬೇಕು, ನೀರಿನ ವ್ಯವಸ್ಥೆ ಮಾಡುವ ಅಗತ್ಯವಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಬಲವಂತ ಯಾದವ ತಿಳಿಸಿದ್ದಾರೆ.

ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಆರಂಭಿಸಿದ್ದು ವಿದ್ಯಾರ್ಥಿಗಳು ಸ್ಮಾರ್ಟ್ ಕ್ಲಾಸ್ ನಲ್ಲಿ ಹೆಚ್ಚಿನ ಆಸಕ್ತಯಿಂದ ಕಲಿಯುತ್ತಾರೆ ಎಂದು ಮುಖ್ಯಗುರುಗಳಾದ ರುದ್ರಪ್ಪ ಲೋಕಾಪುರ, ಶಿಕ್ಷಕ ಬಸವರಾಕ ಪಲಕನಮರಡಿ ಅವರು ತಿಳಿಸಿದ್ದಾರೆ.

ಈ ಕುರಿತ ಪ್ರತಿಕ್ರಿಯಿಸಿರುವ ಬಿಇಒ ಚಂದ್ರಶೇಖರ ದೊಡ್ಡಮನಿ ಮಾನ್ವಿ ತಾಲೂಕಿನ ಒಟ್ಟು 15 ಶಾಲೆಗಳು ಬಹುಭಾಷೆ ಶಾಲೆಗಳಾಗಿವೆ. ಅವುಗಳಿಗೆ ಶಿಕ್ಷಕ ಹುದ್ದೆಗಳನ್ನು ಮಂಜೂರು ಮಾಡಿಲ್ಲ. ಹೀಗಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ ಮತ್ತು ಕನ್ನಡ ಮಾಧ್ಯಮ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!