ಸರ್ವರಿಗೂ ಶಿಕ್ಷಣ ಒದಗಿಸಬೇಕೆಂದರೆ ಶಾಲಾ-ಕಾಲೇಜು ಎಷ್ಟು ಅವಶ್ಯಕವೋ, ವ್ಯವಸ್ಥಿತ ಸಾರಿಗೆಯೂ ಅಷ್ಟೇ ಅವಶ್ಯಕ. ಅಂತೆಯೇ ಹಳೆ ತೇಗೋರಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಆಗಮಿಸುತ್ತಾರೆ. ಆದರೆ, ಶಾಲೆಗೆ ಬರಲು ವಿದ್ಯಾರ್ಥಿಗಳು ಹರಸಾಹಸ ಪಡುತ್ತಿದ್ದಾರೆ.
ಧಾರವಾಡ:
ತಾಲೂಕಿನ ಹಳೆ ತೇಗೂರು ಗ್ರಾಮಕ್ಕೆ ನೇರ ಬಸ್ ಸೌಲಭ್ಯ ಒದಗಿಸಲು ಆಗ್ರಹಿಸಿ ಬುಧವಾರ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಹಾಗೂ ಅಖಿಲ ಭಾರತ ಪ್ರಜಾಸತಾತ್ಮಕ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಕಲಾಭವನ ಮೈದಾನದಿಂದ ಹಳೆ ಬಸ್ ನಿಲ್ದಾಣದ ವರೆಗೆ ಮೆರವಣಿಗೆ ಮಾಡಿ ಹಳೆ ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒನ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ, ಸರ್ವರಿಗೂ ಶಿಕ್ಷಣ ಒದಗಿಸಬೇಕೆಂದರೆ ಶಾಲಾ-ಕಾಲೇಜು ಎಷ್ಟು ಅವಶ್ಯಕವೋ, ವ್ಯವಸ್ಥಿತ ಸಾರಿಗೆಯೂ ಅಷ್ಟೇ ಅವಶ್ಯಕ. ಅಂತೆಯೇ ಹಳೆ ತೇಗೋರಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಆಗಮಿಸುತ್ತಾರೆ. ಆದರೆ, ಶಾಲೆಗೆ ಬರಲು ವಿದ್ಯಾರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಬಸ್ಸಿನಲ್ಲಿ ಜೋತು ಬಿದ್ದು ಬರುವುದನ್ನು ನೋಡಿ ಪಾಲಕರು ಮಕ್ಕಳನ್ನು ಕಳಿಸಲು ಧೈರ್ಯ ಮಾಡುತ್ತಿಲ್ಲ. ಇನ್ನೂ ಹೆಣ್ಣು ಮಕ್ಕಳು ತುಂಬಿದ ಬಸ್‌ನಲ್ಲಿ ಬರಲು ಮುಜುಗರ ಪಟ್ಟುಕೊಳ್ಳುತ್ತಿದ್ದಾರೆ ಎಂದರು.
ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷೆ ದೀಪಾ ವಿ., ಮಾತನಾಡಿ, ಹಳೆ ತೇಗೂರಿನ ಜನಸಂಖ್ಯೆಗೆ ಸರಿಹೊಂದುವಷ್ಟು ಬಸ್ ಲಭ್ಯವಿಲ್ಲ. ಬಂದರೂ ಸಕಾಲಕ್ಕೆ ಬರುವುದಿಲ್ಲ. ಹೋರಾಟ ಮಾಡಿ ಪಡೆದ ಬಸ್ಸನ್ನು ಮತ್ತೊಮ್ಮೆ ಹೋರಾಟ ಮಾಡಿ ಉಳಿಸಿಕೊಳ್ಳುವ ಪರಿಸ್ಥಿತಿಗೆ ಸರ್ಕಾರ ಜನತೆಯನ್ನು ತಳ್ಳಿದೆ. ಆದ್ದರಿಂದ ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಹಳೆ ತೇಗೂರಿಗೆ ನೇರವಾದ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಸಂಘಟನೆಯ ಶರಣು ಗೋನವಾರ, ಹನುಮೇಶ ಹುಡೇದ, ಸಿಂಧು ಕೌದಿ, ಸ್ಫೂರ್ತಿ ಚಿಕ್ಕಮಠ, ಹರ್ಷಿತ ಹಾಗೂ ಗ್ರಾಮಸ್ಥರು, ವಿದ್ಯಾರ್ಥಿಗಳಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.