ಕೃಷಿ, ಕುಡಿಯುವ ನೀರು ಪೂರೈಕೆಗೆ ಸಮರ್ಪಕ ವಿದ್ಯುತ್ ಒದಗಿಸಿ

KannadaprabhaNewsNetwork | Published : Nov 7, 2023 1:30 AM

ಸಾರಾಂಶ

ಸಾರ್ವಜನಿಕರ ಅಹವಾಲು ಸ್ವೀಕಾರ

ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯದಿಂದ ಕೃಷಿ ಚಟುವಟಿಕೆ ಮತ್ತು ಕುಡಿಯುವ ನೀರಿನ ತೊಂದರೆ ಆಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಮೆಸ್ಕಾಂ ಅಧಿಕಾರಿಗಳು ತಕ್ಷಣ ಈ ಬಗ್ಗೆ ಜಾಗೃತರಾಗಿ ಸಮರ್ಪಕ ವಿದ್ಯುತ್ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.

ಪಟ್ಟಣದ ಡಾ. ರಾಜ್ ರಂಗಮಂದಿರಲ್ಲಿ ಹಮ್ಮಿಕೊಂಡಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು. ತಾಲೂಕಿನ ಹಲವು ಗ್ರಾಮಗಳಲ್ಲಿ ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗಿವೆ. ಸಕಾಲದಲ್ಲಿ ವಿದ್ಯುತ್ ಸರಬರಾಜಾಗುತ್ತಿಲ್ಲ ಎನ್ನುವ ಆರೋಪದ ಜೊತೆಗೆ ವಿದ್ಯುತ್ ಪರಿವರ್ತಕಗಳನ್ನು ದುರಸ್ತಿ ಮಾಡದಿರುವ ಬಗ್ಗೆ ಹಾಗೂ ಇಲಾಖೆ ಸೇವೆಗಳನ್ನು ಒದಗಿಸಲು ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗಂಭೀರ ಸ್ವರೂಪದ ಆರೋಪಗಳು ಕೇಳಿಬಂದಿವೆ ಎಂದರು.

ಸಾರ್ವಜನಿಕ ಸೇವೆ ಒದಗಿಸುವಲ್ಲಿ ಮೆಸ್ಕಾಂ ಅಧಿಕಾರಿಗಳು ಇನ್ನಾದರೂ ತಮ್ಮ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಬೆಟ್ಟದಕೂರ್ಲಿ ಗ್ರಾಮ ಸೇರಿದಂತೆ ಬಹುದಿನಗಳಿಂದ ದುರಸ್ತಿಯಾಗದೇ ಉಳಿದಿರುವ 14 ಟಿ.ಸಿ.ಗಳನ್ನು ಕೂಡಲೇ ದುರಸ್ತಿಗೊಳಿಸಿ, ತ್ರಿಫೇಸ್ ವಿದ್ಯುತ್ ನೀಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರರು ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಅಗತ್ಯವಿದ್ದಲ್ಲಿ ಖುದ್ದು ಭೇಟಿ ನೀಡಿ, ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಸಾಗರದ ಉಪವಿಭಾಗಾಧಿಕಾರಿ ಕಾರ್ಯಾಲಯದಲ್ಲಿ ಬಾಕಿ ಇರುವ 800ಕ್ಕೂ ಹೆಚ್ಚಿನ ಟ್ರಿಬ್ಯುನಲ್ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇಗೊಳಿಸಬೇಕು ಎಂದು ಉಪವಿಭಾಗಾಧಿಕಾರಿ ಅವರಿಗೆ ಸೂಚಿಸಿದರು.

ಗ್ರಾಪಂ ವ್ಯಾಪ್ತಿಗೆ ಸಂಬಂಧಿಸಿದಂತೆ ಗ್ರಾಮೀಣರ ಅಹವಾಲುಗಳನ್ನು ಸ್ಥಳೀಯವಾಗಿಯೇ ಇತ್ಯರ್ಥಗೊಳಿಸಬೇಕು. ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಕೂಡಲೇ ಗಮನಹರಿಸಬೇಕು. ತಾಲೂಕಿನ ಕುದುರೆಗಣಿ ಗ್ರಾಮದಲ್ಲಿ ವ್ಯಕ್ತಿಯೋರ್ವನಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ದೂರಿನ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಅವರು, ಆಧುನಿಕ ಯುಗದಲ್ಲೂ ಗ್ರಾಮೀಣ ಮಟ್ಟದಲ್ಲಿ ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ಕೇಳಿಬರುತ್ತಿರುವುದು ನಾಗರಿಕ ಸಮಾಜದ ಲಕ್ಷಣವಲ್ಲ. ತಹಸೀಲ್ದಾರರು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಪರಿಶೀಲಿಸಿ, ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಬೇಕು. ಈ ಘಟನೆಗಳು ಪುನರಾವರ್ತನೆ ಆಗದಂತೆ ಗಮನಿಸಬೇಕು. ಪದೇಪದೆ ಪ್ರಕರಣಗಳು ಗೋಚರಿಸಿದಲ್ಲಿ ಸಂಬಂಧಿಸಿದ ವ್ಯಕ್ತಿ ಅಥವಾ ಗುಂಪುಗಳ ಮೇಲೆ ನಿಯಮಾನುಸಾರ ಮೊಕದ್ದಮೆ ದಾಖಲಿಸುವಂತೆ ಅವರು ಸೂಚಿಸಿದರು.

ಜನತಾ ದರ್ಶನ ಆರಂಭಕ್ಕೂ ಮುನ್ನ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗ ರೆಡ್ಡಿ ಮಾತನಾಡಿ, ಅರ್ಜಿದಾರರು ತಮ್ಮ ಅರ್ಜಿಗಳ ಮೇಲೆ ಮೊಬೈಲ್ ನಂಬರನ್ನು ನಮೂದಿಸಿ. ಇದರಿಂದಾಗಿ ತಮ್ಮ ಅರ್ಜಿಯನ್ನು ಆನ್‌ಲೈನ್‌ನಲ್ಲಿ ದಾಖಲಿಸಿ, ಅರ್ಜಿಯ ಬಗ್ಗೆ ಕೈಗೊಳ್ಳಲಾದ ಕ್ರಮದ ಬಗ್ಗೆ ತಮಗೆ ಮಾಹಿತಿ ನೀಡಲಾಗುವುದು. ಹಿರಿಯ ನಾಗರಿಕರು, ಮಹಿಳೆಯರು, ಸಾರ್ವಜನಿಕರ ವೈಯಕ್ತಿಕ ಹಾಗೂ ಗುಂಪುಗಳಿಂದ ಅರ್ಜಿಗಳನ್ನು ನಿಯಮಾನುಸಾರ ಪಡೆದುಕೊಳ್ಳಲಾಗುವುದು ಎಂದರು.

ಸಾರ್ವಜನಿಕರಿಂದ ಮೆಸ್ಕಾಂ, ಕಂದಾಯ, ಲೋಕೋಪಯೋಗಿ, ಆಹಾರ, ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸುಮಾರು 102 ಅರ್ಜಿಗಳು ಜನತಾದರ್ಶನದಲ್ಲಿ ಸಲ್ಲಿಕೆಯಾದವು.

ಸಭೆಯಲ್ಲಿ ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ಶಿಕಾರಿಪುರ ಡಿವೈಎಸ್‌ಪಿ ಶಿವಾನಂದ್, ತಹಸೀಲ್ದಾರ್ ಹುಸೇನ್ ಸರಕಾವಸ್, ತಾಪಂ ಇಒ ಪ್ರದೀಪ್‌ಕುಮಾರ್, ಜಿಲ್ಲೆ ಮತ್ತು ತಾಲೂಕಿನ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

- - - ಬಾಕ್ಸ್

ಅಹವಾಲುಗಳು - ಸರ್ಕಾರದ ಯೋಜನೆಗಳಿಗೆ ಖಾಸಗಿ ವ್ಯಕ್ತಿಗಳ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಪ್ರಕರಣಗಳು ಇದ್ದಲ್ಲಿ ಅಂತಹ ಭೂ ಮಾಲೀಕರಿಗೆ ಪರಿಹಾರಧನ ನೀಡಬೇಕು

- ಖಾತೆ ಬದಲಾವಣೆ ಅರ್ಜಿಗಳನ್ನು ಕೂಡಲೇ ಇತ್ಯರ್ಥಪಡಿಸಿ.ವಿದ್ಯುತ್ ಲೈನ್ ಒದಗಿಸಿ. ಖಬರಸ್ತಾನಕ್ಕೆ ನಿವೇಶನ ಒದಗಿಸಿ. ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ಕಲ್ಪಿಸಬೇಕು

- ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆಯಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ

- ಕೆರೆ ಒತ್ತುವರಿ ತೆರವುಗೊಳಿಸಿ. ಬೇಸಿಗೆಯಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು

- - -

ಕೋಟ್ ಸೊರಬ ಪಟ್ಟಣದ ಪ್ರಮುಖ ಬೀದಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಭೂ ಮಾಲೀಕರ ನಿವೇಶನ ಸ್ವಾಧೀನಪಡಿಸಿಕೊಂಡು ದಶಕಗಳೇ ಉರುಳಿವೆ. ಈವರೆಗೆ ಕೈಗೊಂಡಿರುವ ಕಾಮಗಾರಿ ಅವೈಜ್ಞಾನಿಕತೆಯಿಂದ ಕೂಡಿದೆ. ಕೆಲವು ಸ್ಥಳಗಳಲ್ಲಿ ಅಗಲೀಕರಣ ನಿಯಮಾನುಸಾರ ನಡೆಯದೇ ಇನ್ನೂ ಕಾಮಗಾರಿ ಮುಂದುವರೆಯುತ್ತಿರುವುದು ಜನಸಾಮಾನ್ಯರಲ್ಲಿ ಅಕ್ರೋಶಕ್ಕೆ ಕಾರಣವಾಗಿದೆ. ಈ ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ, ಜೊತೆಗೆ ಖುದ್ದು ಭೇಟಿ ನೀಡಿ ವಾಸ್ತವವನ್ನು ಅರಿತು ಕ್ರಮ ಕೈಗೊಳ್ಳಿ

- ಎಚ್.ಎಸ್. ಮಂಜಪ್ಪ, ಹಿರಿಯ ಮುಖಂಡ- - - -06ಕೆಪಿಸೊರಬ03:

ಸೊರಬ ಪಟ್ಟಣದ ಡಾ. ರಾಜ್ ರಂಗಮಂದಿರಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

Share this article