ಕುಷ್ಟಗಿ: ಉದ್ಯೋಗ ಅರಸಿ ಗ್ರಾಮೀಣ ಜನರು ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೇಳುವ ಪ್ರತಿಯೊಬ್ಬರಿಗೂ ಉದ್ಯೋಗ ಒದಗಿಸಬೇಕು. ಯೋಜನೆಯ ಪಟ್ಟಿಯಿಂದ ಕೈಬಿಟ್ಟಿರುವ ಅರ್ಹರ ಹೆಸರುಗಳನ್ನು ನಿಯಮಾನುಸಾರ ಪರಿಶೀಲಿಸಿ ಸೇರ್ಪಡೆಗೊಳಿಸುವುದರ ಜತೆಗೆ ತಾಂತ್ರಿಕ ತೊಡಕುಗಳನ್ನು ನಿವಾರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು.
ಕುಷ್ಟಗಿ ಪಟ್ಟಣದ ಪ್ರಮುಖ ರಸ್ತೆಗಳ ಅಗಲೀಕರಣ, ವಿಜಯನಗರ ಕಾಲದ ಗುಡಿ-ಗೋಪುರಗಳ ಒತ್ತುವರಿ ತಡೆ ಹಾಗೂ ಉದ್ಯಾನಗಳ ಒತ್ತುವರಿ ತೆರವುಗೊಳಿಸುವಂತೆ ನಗರ ಹಿತರಕ್ಷಣಾ ವೇದಿಕೆ ಸದಸ್ಯರು ಮನವಿ ಸಲ್ಲಿಸಿದರು.
ದೋಟಿಹಾಳ ಗ್ರಾಮದಲ್ಲಿ ಮುಖ್ಯ ರಸ್ತೆ ಅಗಲೀಕರಣ ಹಾಗೂ ಸೇತುವೆ ದುರಸ್ತಿಗೆ ಗ್ರಾಮಸ್ಥರು ಕೋರಿದರು.ಸಂದೀಪ ನಗರದ ನಿವಾಸಿಗಳು ನಿವೇಶನಗಳ ಹಕ್ಕುಪತ್ರ ವಿತರಿಸುವಂತೆ, ಬಸವರಾಜ ಗಾಣಿಗೇರ ಅವರು ವಿಶೇಷಚೇತನ ಮಕ್ಕಳ ಪುನರ್ವಸತಿಗೆ ಸಿಎ ನಿವೇಶನ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು. ಸೇಬಿನಕಟ್ಟಿ ಸೇರಿದಂತೆ ವಿವಿಧ ಗ್ರಾಮಸ್ಥರು ಪಹಣಿ ದೋಷ ಸರಿಪಡಿಸುವಂತೆ ಹಾಗೂ ಗುಡ್ಡದದೇವಲಾಪುರದವರು ವೃದ್ಧಾಪ್ಯ ವೇತನ ಮಂಜೂರಾತಿಗೆ ಮನವಿ ಮಾಡಿದರು.