ಕನ್ನಡಪ್ರಭ ವಾರ್ತೆ ಬಾದಾಮಿ
ಇಲ್ಲಿಯ ಲೋಕೋಪಯೋಗಿ ಪ್ರವಾಸಿ ಮಂದಿರ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಬಾದಾಮಿ, ಗುಳೇದಗುಡ್ಡ ತಾಲೂಕುಗಳ ಜನಸ್ಪಂದನ ಕಾರ್ಯಕ್ರಮದಲ್ಲಿ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಬಹು ವರ್ಷಗಳಿಂದ ಅರಣ್ಯ ಭೂಮಿ ಉಳುಮೆ ಮಾಡಿಕೊಂಡು ಬಂದಿರುವ ರೈತರನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಡೆಯಬಾರದು. ಮೊದಲಿನಂತೆ ಉಳುಮೆಗೆ ಅವಕಾಶ ಕೊಡಬೇಕು. ಅಕ್ರಮವಾಗಿದ್ದರೆ ಕ್ರಮ ಕೈಗೊಳ್ಳಿ ಎಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.
ಬಾದಾಮಿ ಪಟ್ಟಣದ ರಾಜ ಕಾಲುವೆ ಸ್ವಚ್ಛತೆ, ನಿವೇಶನಗಳಲ್ಲಿನ ಅಭಿವೃದ್ಧಿ, ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಮಹಿಳಾ ಶೌಚಾಲಯ ನಿರ್ಮಾಣಕ್ಕಾಗಿ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂತು. ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕರು ತಕ್ಷಣ ಸ್ವಚ್ಛತೆಗೆ ಹಾಗೂ ಮಹಿಳಾ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ, ಎಪಿಎಂಸಿ ಯಾರ್ಡನಲ್ಲಿ ನಡೆಯುವ ಕಾಯಿಪಲ್ಲೆ ಸವಾಲನ್ನು ಬೆಳಗ್ಗೆ 6ಕ್ಕೆ ಆರಂಭಿಸಬೇಕು ಎಂದು ಸುತ್ತಲಿನ ನಿವಾಸಿಗಳು ಒತ್ತಾಯಿಸಿದರು.ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ನಾವು ಅರ್ಜಿ ಸಲ್ಲಿಸಿದ್ದೇವೆ. ಅದಕ್ಕೆ ಪ್ರತ್ಯುತ್ತರ ಬಂದಿಲ್ಲ. ಹಾಗಿದ್ದರೆ ಅರ್ಜಿ ಕೊಡಬೇಕಾ ಬೇಡಾ ಎಂದು ನಿಸರ್ಗ ಬಳಗ ಅಧ್ಯಕ್ಷ ಎಸ್.ಎಚ್. ವಾಸನ ಅಸಮಾಧಾನ ವ್ಯಕ್ತಪಡಿಸಿದರು. ವಾಸನ ಅವರ ಅರ್ಜಿ ಪರಿಶೀಲಿಸಿದ ಶಾಸಕರು ಒಂದೊಂದೇ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ತಾಲೂಕು ಆಡಳಿ ಭವನ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅಗ್ನಿಶಾಮಕ ಠಾಣೆ ಉದ್ಘಾಟನೆ ಆಗಿಲ್ಲ. ಸಾರ್ವಜನಿಕರಿಗೆ ಉಪಯೋಗವಾಗುವ ಎರಡನ್ನೂ ಕೂಡಲೇ ಮಾಡಲು ಶಾಸಕರಿಗೆ ಆಪ್ ಜಿಲ್ಲಾಧ್ಯಕ್ಷ ಆನಂದ ದೇವಾಡಿಗ ಒತ್ತಾಯಿಸಿದರು. ಹಿಂದೂ ರುದ್ರಭೂಮಿ ಮಂಜೂರಾತಿ, ಪುಲಿಕೇಶಿ, ಬಸವಣ್ಣ ಮೂರ್ತಿ ಪ್ರತಿಷ್ಠಾಪಣೆಗೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಹಿರೇಹಾಳ, ಚಂದ್ರು ಸೂಡಿ, ಸೋಮಣ್ಣ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ, ನಗರ ಯೋಜನ ಪ್ರಾಧಿಕಾರ ಅಧ್ಯಕ್ಷ ಶಿವು ಹಿರೇಮಠ, ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ಹೆಚ್ಚುವರಿ ಎಸ್ಪಿ ಮಹಾಂತೇಶ್ವರ ಜಿದ್ದಿ, ತಾಪಂ ಇಒ ಸುರೇಶ ಕೊಕ್ಕರೆ, ಕೆಎಂಎಫ್ ಅಧ್ಯಕ್ಷ ಈರನಗೌಡ ಕರಿಗೌಡ್ರ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಮಹಾಂತೇಶ ಹಟ್ಟಿ ಇದ್ದರು. ತಹಸೀಲ್ದಾರ್ ಮಧುರಾಜ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾಶಿವ ಮರಡಿ ನಿರೂಪಿಸಿ ವಂದಿಸಿದರು.
ಬೆಳಗ್ಗೆ 11ಕ್ಕೆ ಆವರಣದಲ್ಲಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಅವರ ಸಮ್ಮುಖದಲ್ಲಿ ಸಾರ್ವಜನಿಕರು ಹಲವು ಸಮಸ್ಯೆಗಳ ಕುರಿತು ಒಟ್ಟು 141 ಅರ್ಜಿಗಳು ಸ್ವೀಕೃತವಾದವು. ಬಸ್ ಸಂಚಾರ, ಗ್ರಾಮೀಣ ಹೊಲಗಳ ರಸ್ತೆ ಸಮಸ್ಯೆ, ಆಶ್ರಯ ಮನೆ, ನಿವೇಶನ, ಸಾರ್ವಜನಿಕ ಮತ್ತು ನಗರ ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಾದಾಮಿ ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶ ಜನತೆ ಅಹವಾಲು ಸಲ್ಲಿಸಿದರು. ಸುಧೀರ್ಘ 3 ಗಂಟೆಗಳ ಕಾಲ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಸಾರ್ವಜನಿಕರ ಅಹವಾಲು ಆಲಿಸಿ ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಸೂಚಿಸಿದರು. ಕಾನೂನು ಅಡಿಯಲ್ಲಿ ಬಗೆಯಹರಿಯಬುದಾದ ಅಹವಾಲುಗಳಿಗೆ ಸ್ಥಳದಲ್ಲೇ ಸ್ಪಂದಿಸಿದ ಅವರು, ಇತರ ಸಮಸ್ಯೆಗಳಿಗೆ ಕಾಲಾವಕಾಶ ನೀಡಿ ಬಗೆಹರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಕೈಗಾರಿಕೆ ಇಲಾಖೆಯಿಂದ ತಾಲೂಕಿನ ನಿರುದ್ಯೋಗಿ 44 ಮಹಿಳೆಯರಿಗೆ ಹಾಗೂ ದೇವರಾಜ ಅರಸು ನಿಗಮದಿಂದ 33 ಫಲಾನುಭವಿ ಮಹಿಳೆಯರಿಗೆ ಹೊಲಿಗೆ ಯಂತ್ರ, ಬಾದಾಮಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳಿಗೆ 22, ಗುಳೇದಗುಡ್ಡ ತಾಲೂಕಿನ 5 ಗ್ರಾಮಲೆಕ್ಕಾಧಿಕಾರಿಗಳಿಗೆ ಶಾಸಕರು, ಜಿಲ್ಲಾಧಿಕಾರಿಗಳು ಲ್ಯಾಪ್‌ಟ್ಯಾಪ್ ವಿತರಿಸಿದರು.