ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದ 22ನೇ ಕ್ರಸ್ಟ್‌ಗೇಟ್ ಹಾನಿಗೊಳಗಾಗಿ 4 ದಿನ ಕಳೆದಿದ್ದು, ಇನ್ನೂ ಸಂಪೂರ್ಣ ದುರಸ್ತಿಯಾಗಿಲ್ಲ. ಸುಮಾರು 3 ಟಿಎಂಸಿ ನೀರು ನದಿಪಾತ್ರಕ್ಕೆ ಹರಿದು ಹೋಗಿದೆ. ಗುರುವಾರ ತಡರಾತ್ರಿಯವರೆಗೆ 4 ಎಲಿಮೆಂಟ್ ಅಳವಡಿಸಿದ್ದರೂ ನೀರಿನ ಹರಿವು ಸಂಪೂರ್ಣವಾಗಿ ನಿಂತಿಲ್ಲ. ದಿನಕ್ಕೆ ಸುಮಾರು 300 ರಿಂದ 400 ಕ್ಯುಸೆಕ್ ನೀರು ಹರಿದು ಹೋಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಇನ್ನೊಂದು ವಾರದಲ್ಲಿ ಜಲಾಶಯ ಸಂಪೂರ್ಣ ಬರಿದಾಗಲಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಕಳವಳ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ಹಿಪ್ಪರಗಿ ಜಲಾಶಯದ 22ನೇ ಕ್ರಸ್ಟ್‌ಗೇಟ್ ಹಾನಿಗೊಳಗಾಗಿ 4 ದಿನ ಕಳೆದಿದ್ದು, ಇನ್ನೂ ಸಂಪೂರ್ಣ ದುರಸ್ತಿಯಾಗಿಲ್ಲ. ಸುಮಾರು 3 ಟಿಎಂಸಿ ನೀರು ನದಿಪಾತ್ರಕ್ಕೆ ಹರಿದು ಹೋಗಿದೆ. ಗುರುವಾರ ತಡರಾತ್ರಿಯವರೆಗೆ 4 ಎಲಿಮೆಂಟ್ ಅಳವಡಿಸಿದ್ದರೂ ನೀರಿನ ಹರಿವು ಸಂಪೂರ್ಣವಾಗಿ ನಿಂತಿಲ್ಲ. ದಿನಕ್ಕೆ ಸುಮಾರು 300 ರಿಂದ 400 ಕ್ಯುಸೆಕ್ ನೀರು ಹರಿದು ಹೋಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಇನ್ನೊಂದು ವಾರದಲ್ಲಿ ಜಲಾಶಯ ಸಂಪೂರ್ಣ ಬರಿದಾಗಲಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಕಳವಳ ವ್ಯಕ್ತಪಡಿಸಿದ್ದಾರೆ.ಶುಕ್ರವಾರ ಹಿಪ್ಪರಗಿ ಜಲಾಶಯಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರ ಕರ್ನಾಟಕದ ಜೀವನದಿಯಾಗಿರುವ ಕೃಷ್ಣೆಯನ್ನು ಸರ್ಕಾರ ನಿರ್ಲಕ್ಷಿಸುತ್ತ ಬಂದಿದೆ. 20 ವರ್ಷಗಳಿಂದ ಜಲಾಶಯಗಳ ನಿರ್ವಹಣೆಯಾಗದೇ ಹಳೆಯ ಕ್ರಸ್ಟ್‌ಗೇಟ್‌ಗಳು ತುಕ್ಕು ಹಿಡಿದು, ಸಾಮರ್ಥ್ಯ ಕಳೆದುಕೊಂಡಿವೆ. ಆದ್ದರಿಂದಲೇ 22ನೇ ಗೇಟ್ ಮುರಿದು ಹೋಗಿದೆ ಎಂದು ಹೇಳಿದರು.
ತುರ್ತಾಗಿ ನೀರಾವರಿ ಇಲಾಖೆಯ ಸಚಿವರು ಮುತುವರ್ಜಿ ವಹಿಸಿ ನೂತನ ಗೇಟ್ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು. ₹1 ಕೋಟಿ ವೆಚ್ಚದಲ್ಲಿ ಒಂದು ಗೇಟ್ ತಯಾರಿಸಿ ಅಳವಡಿಸಬಹುದಾಗಿದೆ ಎಂದು ತಜ್ಞರು ಮಾಹಿತಿ ನೀಡಿದ್ದು, ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡುವ ಮೂಲಕ ರೈತರಿಗೆ ಆಗಿರುವ ತೊಂದರೆ ಸರಿಪಡಿಸಬೇಕೆಂದು ಆಗ್ರಹಿಸಿದರು. 13.27 ಮೀ. ಅಗಲ ಹಾಗೂ 8.23 ಮೀ. ಎತ್ತರದ ಗೇಟ್ ವ್ಯವಸ್ಥೆಯಾದರೆ ಜಲಾಶಯ ಬರಿದಾಗದಂತೆ ಉಳಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಸಿಬ್ಬಂದಿ ಕೊರತೆ: ಜಲಾಶಯ ನಿರ್ವಹಣೆಗೆ ಸಿಬ್ಬಂದಿ, ಅಭಿಯಂತರರಿಲ್ಲ. ಬಿಲ್‌ಗಳನ್ನು ಮಾಡಲೂ ಸಹ ಸಿಬ್ಬಂದಿಯಿಲ್ಲದೇ ನೀರಾವರಿ ಇಲಾಖೆ ಸಿಬ್ಬಂದಿ ಕೊರತೆ ಅನುಭವಿಸುತ್ತಿದೆ. ಇದರಿಂದ ಸರ್ಕಾರಕ್ಕೆ ಸರಿಯಾದ ಸಮಯದಲ್ಲಿ ಮಾಹಿತಿ ನೀಡಲು ತೊಂದರೆ ಆಗುತ್ತಿದೆ. 20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಖಾಯಂಗೊಳಿಸಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಸರ್ಕಾರ ಕೂಡಲೇ ಬಗೆ ಹರಿಸಬೇಕೆಂದು ಆಗ್ರಹಿಸಿದರು.
ಇಂಜನಿಯರ್ ಶಿವಮೂರ್ತಿ, ಸಹಾಯಕ ಇಂಜಿನಿಯರ್ ಬಸು ಮಾಳಿ. ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಇಂಜಿನಿಯರ್ ವಿಶ್ವನಾಥ ಸುನಗಮಠ, ಮಲ್ಲುದಾನಗೌಡ, ಆಜಯ ಕಟಪಟ್ಟಿ, ಈಶ್ವರ ಆದೆಪ್ಪನವರ ಶ್ರೀಧರ ಕಂಬಿ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.