ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ದ್ವಜ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ನಮ್ಮ ಅರಿವಿಗೆ ಬಾರದೇ ಎಷ್ಟೋ ಉತ್ತಮ ಕೆಲಸಗಳನ್ನು ಮಾಡಿರುತ್ತೇವೆ, ಅವು ನಾವು ನಿವೃತ್ತರಾದ ಮೇಲೆಯೇ ಗೊತ್ತಾಗುವುದು ಎಂದರು.
ನಮ್ಮ ಶಿಸ್ತಿನ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ಸಲ್ಲಿಸುವಾಗ ಶ್ರದ್ಧೆ, ಶಿಸ್ತು, ವಿಧೇಯತೆಯನ್ನು ಮೈಗೂಡಿಸಿಕೊಂಡಾಗ ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾಗಬಹುದು ಎಂದರು.ಹಿಂದೆ ಪೊಲೀಸ್ ಇಲಾಖೆಯಲ್ಲಿ ಯಾವುದೇ ಯೋಜನೆಗಳಿರಲಿಲ್ಲ, ನಮ್ಮ ಮೇಲಾಧಿಕಾರಿಗಳ ಮನವಿ ಹಾಗೂ ಒತ್ತಡದ ಕಾರಣ ಇಂದು ಆರೋಗ್ಯ ಭಾಗ್ಯದಡಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸಾ ಸೇವೆ ಸಿಗುವಂತಾಗಿದೆ, ಕೆಲವು ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ, ಇದರ ಬಗ್ಗೆ ಮೇಲಾಧಿಕಾರಿಗಳು ಗಮನಹರಿಸಬೇಕು ಎಂದರು.
ಡಾ. ಬಿ.ಟಿ. ಕವಿತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಂದ ನಂತರ ಆಪ್ತ ಗೆಳತಿ, ಜನಸ್ನೇಹಿ ಪೊಲೀಸ್, ಗಡಿಭಾಗದಲ್ಲಿ ಗಸ್ತು ಹೆಚ್ಚು ಮಾಡಿ, ಶೀಘ್ರವಾಗಿ ಕಳ್ಳರ ಬಂಧನ, ಅಪಘಾತಗಳ ಪತ್ತೆ ಹಚ್ಚುವಿಕೆ ಸೇರಿ ಹಲವು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಸಿಬ್ಬಂದಿಯ ಕಲ್ಯಾಣಕೋಸ್ಕರ ವಿಶೇಷ ಗಮನಹರಿಸಿದ್ದಾರೆ ಎಂದರು.
ಎಸ್ಪಿ ಡಾ. ಬಿ.ಟಿ.ಕವಿತಾ ಪ್ರಸ್ತಾವಿಸಿ, ೧೯೮೪ ರ ಏಪ್ರಿಲ್ ೨ ರಂದು ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನ ಸಾರ್ವಜನಿಕ ಸೇವೆ ಸಲ್ಲಿಸಿದ ಉತ್ತಮ ನಿವೃತ್ತ ಪೊಲೀಸ್ ಅಧಿಕಾರಿಗಳ ಸೇವೆಯನ್ನು ಸ್ಮರಿಸಿ ಗೌರವಿಸಲಾಗುತ್ತದೆ ಎಂದರು.
ಪೊಲೀಸ್ ಸೇವೆಯನ್ನು ನಿರ್ವಹಿಸಿ ನಿವೃತ್ತಿಯಾಗಿ ಪುರಸ್ಕಾರ ಪಡೆಯುತ್ತಿರುವ ಪೊಲೀಸ್ ಅಧಿಕಾರಿಗಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುವುದರ ಮುಖಾಂತರ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ಮೋನಾರೋತ್, ಅಡಿಷನಲ್ ಎಸ್ಪಿ ಶಶಿಧರ್, ಡಿವೈಎಸ್ಪಿಗಳಾದ ಲಕ್ಷ್ಮಯ್ಯ, ಧರ್ಮೇಂದರ್, ಸೋಮಣ್ಣ, ಜಿಲ್ಲೆಯ ವಿವಿಧ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.