ಚಿಕ್ಕಮಗಳೂರಿನಿಂದ ನರಸಿಂಹರಾಜಪುರಕ್ಕೆ ಸರ್ಕಾರಿ ಬಸ್ ಒದಗಿಸಿ

KannadaprabhaNewsNetwork |  
Published : Jul 26, 2025, 12:00 AM IST
ನರಸಿಂಹರಾಜಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಭೆಯಲ್ಲಿ ಯುವ ನಿಧಿ ಪ್ರಾರಂಭದ ಮಾಹಿತಿ ಇರುವ ಭಿತ್ತಿ ಫತ್ರವನ್ನು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಹಾಗೂ ಸದಸ್ಯರು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿನಿಂದ ತಾಲೂಕು ಕೇಂದ್ರವಾದ ಎನ್.ಆರ್.ಪುರಕ್ಕೆ ಸರ್ಕಾರಿ ಬಸ್ ಬಿಡುವಂತೆ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

- ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಸದಸ್ಯರ ಆಗ್ರಹ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿನಿಂದ ತಾಲೂಕು ಕೇಂದ್ರವಾದ ಎನ್.ಆರ್.ಪುರಕ್ಕೆ ಸರ್ಕಾರಿ ಬಸ್ ಬಿಡುವಂತೆ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ತಾಪಂ ಸಾಮರ್ಥ್ಯಸೌಧದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷೆ ಕು.ಚಂದ್ರಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರು ವಿಷಯ ಪ್ರಸ್ತಾಪಿಸಿ, ಜಿಲ್ಲಾ ಕೇಂದ್ರ ಚಿಕ್ಕಮಗಳೂರಿಗೆ ಹಾಗೂ ತಾಲೂಕು ಕೇಂದ್ರ ಎನ್.ಆರ್.ಪುರಕ್ಕೆ ಸರ್ಕಾರಿ ಬಸ್‌ಗಳ ಸಂಚಾರ ವಿರಳವಾಗಿದೆ. ಜಿಲ್ಲಾ ಕೇಂದ್ರಕ್ಕೆ ಸರ್ಕಾರಿ ಕೆಲಸ ಕಾರ್ಯಗಳಿಗೆ ಜನರು ದಿನಂಪ್ರತಿ ಸಂಚರಿಸುತ್ತಿರುತ್ತಾರೆ. ಆದರೆ, ಅವರಿಗೆ ಸರಿಯಾಗಿ ಬಸ್ಸಿನ ಸೌಕರ್ಯವಿಲ್ಲದೆ ಸರ್ಕಾರಿ ಕಚೇರಿ ಕೆಲಸ ಕಾರ್ಯಗಳಿಗೆ ಓಡಾಡುವ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಎನ್.ಆರ್.ಪುರದಿಂದ ಚಿಕ್ಕಮಗಳೂರು ಹಾಗೂ ಚಿಕ್ಕಮಗಳೂರಿನಿಂದ ಎನ್.ಆರ್.ಪುರಕ್ಕೆ ಸರ್ಕಾರಿ ಬಸ್ಸುಗಳನ್ನು ಹೆಚ್ಚು ಬಿಡುವಂತೆ ಸಭೆಯಲ್ಲಿ ಸದಸ್ಯರು ಕೆಎಸ್.ಆರ್.ಟಿ. ಬಸ್ ಡಿಪೋ ಅಧಿಕಾರಿಗಳಿಗೆ ಒತ್ತಾಯಿಸಿದರು.

ಚಿಕ್ಕಮಗಳೂರು ಡಿಪೋ ನಿಲ್ದಾಣಾಧಿಕಾರಿ ಬಿ.ಸುರೇಶ್‌ನಾಯ್ಕ ಮಾತನಾಡಿ, ಚಿಕ್ಕಮಗಳೂರಿನಿಂದ ಎನ್.ಆರ್.ಪುರಕ್ಕೆ ಬಸ್ಸು ಸಂಚರಿಸಲು ಈಗಾಗಲೇ ನಮ್ಮಲ್ಲಿ ಹಳೇ ಪರವಾನಗಿ ಇದೆ. ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ ಬಸ್ಸು ಸಂಚರಿ ಸಲು ಪತ್ರ ಬರೆದು ಅದರೊಂದಿಗೆ ಶಾಸಕರ ಶಿಫಾರಸ್ಸಿನ ಪತ್ರ ನೀಡಿದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿ ಚಿಕ್ಕಮಗಳೂರು ಹಾಗೂ ಎನ್.ಆರ್.ಪುರ ಮಾರ್ಗದಲ್ಲಿ ಬಸ್ಸುಗಳು ಸಂಚರಿಸಲು ಕ್ರಮವಹಿಸಲಾಗುವುದು. ಈಗಾಗಲೇ ಶೃಂಗೇರಿಯಲ್ಲಿ ಕೆಎಸ್.ಆರ್.ಟಿ.ಸಿ ಡಿಪೋ ಕಾಮಗಾರಿ ಪ್ರಗತಿಯಲ್ಲಿದೆ. ಅಧಿಕ ಮಳೆಯಾಗುತ್ತಿರುವುದರಿಂದ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಮಳೆಗಾಲ ಮುಗಿದ ಬಳಿಕ ಕಾಮಗಾರಿ ತ್ವರಿತಗತಿಯಲ್ಲಿ ಆಗಲಿದೆ. ಎಂದು ಸಭೆಗೆ ತಿಳಿಸಿದರು.

ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷೆ ಕು.ಚಂದ್ರಮ್ಮ ಮಾತನಾಡಿ, ಗ್ಯಾರಂಟಿ ಅನುಷ್ಠಾನ ಇಲಾಖೆ ಅಧಿಕಾರಿಗಳು ಸಮಿತಿ ಸದಸ್ಯರು ಕರೆ ಮಾಡಿದಾಗ ಸರಿಯಾಗಿ ಸ್ಪಂಧಿಸಬೇಕು ಎಂದು ಎಲ್ಲಾ ಅನುಷ್ಠಾನ ಇಲಾಖಾಧಿಕಾರಿಗಳಿಗೆ ಸೂಚಿಸಿದರು.ಸದಸ್ಯ ಇಸ್ಮಾಯಿಲ್ ಮಾತನಾಡಿ,ಬಾಳೆಹೊನ್ನೂರು ಭಾಗದಲ್ಲಿ ಸೇರಿದಂತೆ ವಿವಿಧ ಸೊಸೈಟಿಗಳಲ್ಲಿ ಪಡಿತರ ವಿತರಣೆ ಯಾವ ದಿನಾಂಕದಂದು,ಯಾವ ಸಮಯಕ್ಕೆ ವಿತರಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿಯೇ ಇಲ್ಲದಂತಾಗಿದೆ. ಇದರಿಂದ ಬಹಳ ದೂರದಿಂದ ಬರುವ ಪಡಿತರದಾರರಿಗೆ ತೊಂದರೆಯಾಗುತ್ತದೆ. ಕೆಲವರು ಒಂದು ದಿನದ ಕೂಲಿ ಕೆಲಸ ಬಿಟ್ಟು ಬರ ಬೇಕಾಗಿದೆ ಎಂದರು. ತಾಪಂ ಇಓ ಎಚ್.ಡಿ.ನವೀನ್‌ಕುಮಾರ್ ಮಾತನಾಡಿ, ಎಲ್ಲಾ ಸೊಸೈಟಿಗಳಲ್ಲೂ ಯಾವ ದಿನಾಂಕ ದಂದು ಪಡಿತರ ವಿತರಣೆ ಮಾಡಲಾಗುತ್ತದೆ ಎಂಬ ಬಗ್ಗೆ ವೇಳಾಪಟ್ಟಿ ನಿಗದಿಪಡಿಸಿ, ಎಲ್ಲಾ ಸೊಸೈಟಿಗಳಲ್ಲೂ ವೇಳಾಪಟ್ಟಿ ಅಳವಡಿಸುವಂತೆ ಆಹಾರ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಯುವ ನಿಧಿ ಯೋಜನೆ ಪ್ರಸ್ತುತ ವರ್ಷದ ನೋಂದಣಿ ಪ್ರಾರಂಭ ಮಾಹಿತಿ ಭಿತ್ತಿ ಪತ್ರ ಅನಾವರಣಗೊಳಿಸಲಾಯಿತು. ಸಭೆಯಲ್ಲಿ ಸದಸ್ಯರಾದ ಇಂದಿರಾನಗರ ರಘು, ನಿತ್ಯಾನಂದ, ಹೂವಮ್ಮ, ಅಪೂರ್ವ, ಕ್ಷೇತ್ರ ಕುಮಾರ್, ಜಯರಾಂ, ದೇವರಾಜ್, ಬೇಸಿಲ್, ಸೈಯದ್‌ ಶಫೀರ್‌ಅಹಮ್ಮದ್, ಇಸ್ಮಾಯಿಲ್, ಸಂದೀಪ್‌ಕುಮಾರ್ , ಕಾರ್ಯದರ್ಶಿ ಶ್ರೀದೇವಿ ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್