ಇಎಸ್ಐ ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡಿ: ಶೋಭಾ ಆದೇಶ

KannadaprabhaNewsNetwork |  
Published : Aug 12, 2026, 03:15 AM IST
ಸಂಸದ ಕೋಟ ಅವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾದರು | Kannada Prabha

ಸಾರಾಂಶ

ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಇಎಸ್ಐ ಸೌಲಭ್ಯ ಹೊಂದಿರುವ ರೋಗಿಗಳು ಇಲಾಖಾಧಿಕಾರಿಗಳ ಗೊಂದಲದ ನಿಲುವಿನಿಂದ ಅನಗತ್ಯ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಈ ರೋಗಿಗಳಿಗೆ ತೊಂದರೆ ಮಾಡದೆ ಚಿಕಿತ್ಸೆ ನೀಡಿ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವೆ ಶೋಭಾ ಕರಂದ್ಲಾಜೆ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಉಡುಪಿ: ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಇಎಸ್ಐ ಸೌಲಭ್ಯ ಹೊಂದಿರುವ ರೋಗಿಗಳು ಇಲಾಖಾಧಿಕಾರಿಗಳ ಗೊಂದಲದ ನಿಲುವಿನಿಂದ ಅನಗತ್ಯ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಈ ರೋಗಿಗಳಿಗೆ ತೊಂದರೆ ಮಾಡದೆ ಚಿಕಿತ್ಸೆ ನೀಡಿ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವೆ ಶೋಭಾ ಕರಂದ್ಲಾಜೆ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.ಈ ಸಮಸ್ಯೆ ಬಗ್ಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿ ಮಾಡಿದರು.

ಇಎಸ್‌ಐ ಹೊಂದಿರುವ ರೋಗಿಗಳು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಹೋದರೆ ಅವರ ಚಿಕಿತ್ಸೆಗೆ ಮೊದಲು ಇಎಸ್‌ಐ ಇಲಾಖೆಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಬೇಕು ಎಂಬ ನಿಯಮ ಅಧಿಕಾರಿಗಳು ಜಾರಿಗೆ ತಂದಿದ್ದಾರೆ. ಇದರಿಂದ ಹೃದಯಾಘಾತ ಅಥವಾ ಇನ್ನಿತರ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗುವ ರೋಗಿಗಳಿಗೆ ಚಿಕಿತ್ಸೆಯಲ್ಲಿ ವಿಳಂಬವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಲ್ಲದೆ ಮಾರಣಾಂತಿಕ ಸ್ಥಿತಿಯಲ್ಲಿರುವ ರೋಗಿಗಳು ವಿಡಿಯೋ ಕರೆಗೆ ಪ್ರತಿಕ್ರಿಯೆ ನೀಡಲಾಗದ ಸ್ಥಿತಿಯೂ ಇರುತ್ತದೆ.

ರಜಾ ದಿನಗಳಲ್ಲಿ ಅಥವಾ ಅನಿವಾರ್ಯವಾಗಿ ರಾತ್ರಿ ಹೊತ್ತು ಚಿಕಿತ್ಸೆಗೆ ಬರುವ ರೋಗಿಗಳ ವಿಡಿಯೋ ಕರೆಗೆ ಇಎಸ್ಐ ಅಧಿಕಾರಿಗಳು ಲಭ್ಯವಿಲ್ಲದೆ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ. ತುರ್ತು ನಿಗಾ ಘಟಕಕ್ಕೆ ದಾಖಲಾದ ಮತ್ತು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿರುವ ರೋಗಿಗಳು ವಿಡಿಯೋ ಕಾನ್ಪರೆನ್ಸ್ ನಡೆಸಲು ಸಾಧ್ಯವಾಗುವುದಿಲ್ಲ.

ಕೆಲವು ಆಸ್ಪತ್ರೆಗಳಲ್ಲಿ ನೆಟ್ವರ್ಕ್ ಸಮಸ್ಯೆಗಳಿಂದ ವಿಡಿಯೋ ಕರೆ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಉಡುಪಿ ಜಿಲ್ಲೆಯ ಮಣಿಪಾಲದ ಕೆಎಂಸಿಯಂತಹ ಆಸ್ಪತ್ರೆಗಳು ಸಹ ಈ ವಿಡಿಯೋ ಕಾನ್ಫರೆನ್ಸ್ ನಿಯಮದಿಂದ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗದೆ ಅಸಹಾಯಕವಾಗುತ್ತಿವೆ ಎಂದು ಕೋಟ ಅವರು ಸಚಿವೆ ಅವರ ಗಮನ ಸೆಳೆದರು.

ತುರ್ತು ಸಂದರ್ಭದಲ್ಲಿ ರೋಗಿಗಳ ಪರವಾಗಿ ಸಂಸದ, ಶಾಸಕರು ಮಾತನಾಡಿದರೂ ಇಲಾಖೆಯ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಆದ್ದರಿಂದ ಈ ವಿಷಯದಲ್ಲಿ ಕೇಂದ್ರ ಕಾರ್ಮಿಕ ಇಲಾಖೆ ಮಧ್ಯಪ್ರವೇಶಿಸಿ ಗೊಂದಲ ಪರಿಹರಿಸಿ ಇಎಸ್ಐ ಫಲಾನುಭವಿಗಳ ನೆರವಿಗೆ ಬರಬೇಕೆಂದು ಕೋಟ ಮನವಿ ಮಾಡಿದರು.

ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರ ಇಎಸ್ಐ ಮಹಾನಿರ್ದೇಶಕ ಅಶೋಕ್ ಕುಮಾರ್ ಸಿಂಗ್ ಅವರನ್ನು ಕರೆದು, ಕರ್ನಾಟಕದಲ್ಲಿ ಇಎಸ್ಐ ರೋಗಿಗಳಿಗೆ ಯಾವುದೇ ತೊಂದರೆ ಮಾಡದೆ ಇಎಸ್ಐ ಅನುಷ್ಠಾನ ಮಾಡಲು ಆದೇಶಿಸಿದರು. ಅಲ್ಲದೆ ಯಾವುದೇ ಅಧಿಕಾರಿ ಕಾರಣವಿಲ್ಲದೆ ಗೊಂದಲ ಮಾಡಿದರೆ ಸೂಕ್ತ ಕ್ರಮ ಜರುಗಿಸುವಂತೆಯೂ ನಿರ್ದೇಶನ ನೀಡಿದ್ದಾರೆ ಎಂದು ಸಂಸದ ಕೋಟ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಥಣಿಯಿಂದ ಶ್ರೀಶೈಲಕ್ಕೆ ಬಸ್ ಸೇವೆಗೆ ಚಾಲನೆ
ಷಡ್ಯಂತ್ರಕ್ಕೆ ನಾಡಗೌಡರಿಗೆ ಮತ್ತೆ ಸಚಿವ ಸ್ಥಾನ ಬಲಿ!