ಜಿಐಎಸ್ ಆಧಾರಿತ ಮಹಾಯೋಜನೆ ಸಿದ್ಧಪಡಿಸಲು ಮಾಹಿತಿ ಕೊಡಿ

KannadaprabhaNewsNetwork |  
Published : Apr 19, 2025, 12:40 AM IST
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ  ವಿವಿಧ ಕಾಮಗಾರಿಗಳ ಯೋಜನೆ ತಯಾರಿಸುವ ಕುರಿತು ಅಧಿಕಾರಿಗಳೊಂದಿಗೆ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿದರು. | Kannada Prabha

ಸಾರಾಂಶ

ವಿಜಯಪುರ ನಗರ ಸ್ಥಳೀಯ ಪ್ರದೇಶದಲ್ಲಿ ಕೈಗೊಳ್ಳಬೇಕಿರುವ ವಿವಿಧ ಕಾಮಗಾರಿಗಳ ಯೋಜನೆ ತಯಾರಿಸುವ ಕುರಿತು ಅಧಿಕಾರಿಗಳೊಂದಿಗೆ ಸಭೆ

ಕನ್ನಡಪ್ರಭ ವಾರ್ತೆ ವಿಜಯಪುರ

ನಗರಕ್ಕೆ ಮಹಾಯೋಜನೆ ಸಿದ್ಧಪಡಿಸಲು ಸರ್ಕಾರದಿಂದ ಅನುಮೋದನೆಯಾಗಿದೆ. ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಅಮೃತ ಯೋಜನೆಯಡಿ ಜಿಐಎಸ್ ಆಧಾರಿತ ಮಹಾಯೋಜನೆ ಸಿದ್ಧಪಡಿಸಲು ರುದ್ರಾಭಿಷೇಕ ಎಂಟರ್‌ಪ್ರೈಸಸ್ ನವದೆಹಲಿ ಇವರಿಗೆ ಕಾರ್ಯಾದೇಶ ನೀಡಲಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಸಂಸ್ಥೆಯೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಸಮಗ್ರ ಮಾಹಿತಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಅಮೃತ ಯೋಜನೆಯಡಿ ಜಿಐಎಸ್ ಆಧಾರಿತ ಮಹಾಯೋಜನೆ ಸಿದ್ಧಪಡಿಸುವ ಕುರಿತು ಹಾಗೂ ವಿಜಯಪುರ ನಗರ ಸ್ಥಳೀಯ ಪ್ರದೇಶದಲ್ಲಿ ಕೈಗೊಳ್ಳಬೇಕಿರುವ ವಿವಿಧ ಕಾಮಗಾರಿಗಳ ಯೋಜನೆ ತಯಾರಿಸುವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕೇಂದ್ರದ ಅಮೃತ ಯೋಜನೆಯಡಿ ಮೂಲಸೌಕರ್ಯಗಳಾದ ನೀರು ಸರಬರಾಜು, ಒಳಚರಂಡಿ, ನಗರ ಸಾರಿಗೆ, ಉದ್ಯಾನ, ನಾಗರಿಕರಿಗೆ ಉತ್ತಮ ಯೋಜನೆ ಹಾಗೂ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ದೇಶದ 500 ನಗರಗಳನ್ನು ಗುರುತಿಸಲಾಗಿದೆ. ರಾಜ್ಯದ 26 ನಗರಗಳಲ್ಲಿ ವಿಜಯಪುರ ನಗರವನ್ನು ಅಮೃತ ಯೋಜನೆಯಡಿ ಗುರುತಿಸಿ, ಎರಡನೇ ಹಂತದ ಪ್ಯಾಕೇಜ್‌ 5ರಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ವಿವರಿಸಿದರು.ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವಿಸ್ತೀರ್ಣ 525 ಚ.ಕಿ.ಮೀ. ಇದ್ದು, ವಿಜಯಪುರ ಮಹಾನಗರ ಪಾಲಿಕೆ ಹಾಗೂ ಗ್ರಾಪಂ ವ್ಯಾಪ್ತಿ ಪ್ರಾಧಿಕಾರ ಹೊಂದಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಈ ಸಂಸ್ಥೆ ಕೋರಿದ ಮಾಹಿತಿಯನ್ನು ಪರಿಶೀಲಿಸಿ, ಒದಗಿಸುವ ಮೂಲಕ ಸಂಸ್ಥೆಯೊಂದಿಗೆ ಸಮನ್ವಯತೆ ಸಾಧಿಸಬೇಕು. ಯಾವುದೇ ಮಾಹಿತಿ ಕೈಬಿಟ್ಟು ಹೋಗದಂತೆ ನೋಡಿಕೊಂಡು ಸಮಗ್ರ ಮಾಹಿತಿಯನ್ನು ಒದಗಿಸಬೇಕು ಎಂದು ಹೇಳಿದರು.

ಮಹಾನಗರ ಪಾಲಿಕೆ, ಹೆಸ್ಕಾಂ, ಜಲಮಂಡಳಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಹಾಲಿ ಪ್ರಸ್ತುತ ಜಾರಿಯಲ್ಲಿರುವ ಯೋಜನೆಗಳು ಸಹ ಜಿಐಎಸ್‌ನಲ್ಲಿ ಅಳವಡಿಸಿಕೊಳ್ಳುತ್ತಿರುವ ಕುರಿತು ಖಚಿತಪಡಿಸಿಕೊಳ್ಳಬೇಕು. ಜಿಐಎಸ್ ಆಧಾರಿತ ಮಹಾಯೋಜನೆ ಸಿದ್ಧಪಡಿಸಲು ನಿಯೋಜಿತ ಸಂಸ್ಥೆ ಸಂಬಂಧಿಸಿದ ಇಲಾಖೆಗಳೊಂದಿಗೆ ದತ್ತಾಂಶ ಸಂಗ್ರಹಿಸಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ವಿವಿಧ ಯೋಜನೆಗಳು, ಅಭಿವೃದ್ಧಿ ಕಾರ್ಯಗಳಾದ ಕುಡಿಯುವ ನೀರು, ಒಳಚರಂಡಿ, ವಿದ್ಯುತ್, ಸರ್ಕಾರಿ ಕಟ್ಟಡ, ಜಾಗ, ಪ್ರವಾಸೋದ್ಯಮ ಸ್ಥಳ, ರಾಷ್ಟ್ರೀಯ ಹೆದ್ದಾರಿ, ಇತ್ತೀಚಿನ ಮಾಹಿತಿಯನ್ನು ಬೇರೆ ಇಲಾಖೆಯಿಂದ ಪಡೆದುಕೊಂಡು ಪ್ರಸ್ತಾವಿತ ಮಾಹಿತಿಯಲ್ಲಿ ಸೇರ್ಪಡೆಗೊಳಿಸಬೇಕು. ಒಂದು ತಿಂಗಳೊಳಗಾಗಿ ಕಾಲೋಚಿತಗೊಳಿಸಿದ ವಿವರವನ್ನು ಸಲ್ಲಿಸುವಂತೆ ಅವರು ಸೂಚಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರ ಹೊಂದಿರುವ ವಿಜಯಪುರ ಮಹಾನಗರ ಪಾಲಿಕೆ ಹಾಗೂ ೧೦ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯಾನ, ಬಯಲು ಜಾಗ, ರಸ್ತೆ ಹಾಗೂ ನಾಗರಿಕ ಸೌಲಭ್ಯ ಜಾಗಗಳನ್ನು ಸ್ಥಳೀಯ ಸಂಸ್ಥೆಗಳ ಸುಪರ್ದಿಗೆ ಪಡೆಯುವ ದಾಖಲೆಗಳನ್ನು ಕಾಲೋಚಿತಗೊಳಿಸಲು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಘ-ಸಂಸ್ಥೆಗಳ ಮಾಹಿತಿ, ಸಲಹೆ ಹಾಗೂ ಅಭಿಪ್ರಾಯ ಸಂಗ್ರಹಿಸಲಾಯಿತು. ವಿಜಯಪುರ ನಗರದ ಜಿಐಎಸ್ ಆಧಾರಿತ ಮಹಾ ಯೋಜನೆ ೨೦೪೧ ತಯಾರಿಸುವ ಕುರಿತಾಗಿ ರುದ್ರಾಭಿಷೇಕ ಸಂಸ್ಥೆಯು ಸಂಗ್ರಹಿಸಿದ ಮಾಹಿತಿ ವಿವರವನ್ನು ಪಿಪಿಟಿ ಮೂಲಕ ಸಭೆಯಲ್ಲಿ ವಿವರಿಸಲಾಯಿತು.

ಆನಂದ ಮಹಲ್ ಸೌಂದರ್ಯಿಕರಣಕ್ಕೆ ಸೂಚನೆ:

ಐತಿಹಾಸಿಕ ಆನಂದ ಮಹಲ್ ಆವರಣದಲ್ಲಿ ಉದ್ಯಾನ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಉತ್ತೇಜನ- ಮಾಹಿತಿಯುಳ್ಳ ಅತ್ಯಾಕರ್ಷಕ ಗೇಟ್ ಹಾಗೂ ಕಾಂಪೌಂಡ್ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಸೂಕ್ತ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಭೂಮಾಪನ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುಳಗುಂದ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ಗೋವಿಂದ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''