ಶಿವಮೊಗ್ಗ: ಜಿಲ್ಲೆಯ ಕೈಗಾರಿಕೆಗಳ ವ್ಯವಸ್ಥಿತ ನಿರ್ವಹಣೆ ಅಗತ್ಯಗಳಿಗೆ ಅನುಕೂಲವಾಗಿರುವ ನೀರು, ವಿದ್ಯುತ್, ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಒದಗಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಆಟೋ ಕಾಂಪ್ಲೆಕ್ಸ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಕುಡಿಯುವ ನೀರಿನ ಘಟಕಕ್ಕೆ ಮುಂದಿನ 2-3 ದಿನಗಳೊಳಗಾಗಿ ನೀರಿನ ಸಂಪರ್ಕ ಕಲ್ಪಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಸೋಗಾನೆ ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ಗುರುತಿಸಲಾಗಿರುವ 580 ಎಕರೆ ಜಮೀನಿಗೆ ಸಂಬಂಧಿಸಿದಂತೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ತಹಸೀಲ್ದಾರರಿಂದ ಪಡೆದುಕೊಳ್ಳಲಾಗಿದೆ. ಈಗಾಗಲೇ ಗುರುತಿಸಲಾಗಿರುವ ಸದರಿ ಭೂ ಪ್ರದೇಶವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಳ್ಳುವ ಮೊದಲು ಸಂಬಂಧಿತ ಇಲಾಖಾಧಿಕಾರಿಗಳ ಸಭೆಯನ್ನು ಆಯೋಜಿಸಿ ನಂತರ ಅವರ ಉಪಸ್ಥಿತಿಯಲ್ಲಿ ಸರ್ವೇ ನಡೆಸಿ, ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಮಾಚೇನ ಹಳ್ಳಿಯಲ್ಲಿ ಮತ್ತು ದೇವಕಾತಿಕೊಪ್ಪಗಳಲ್ಲಿ ಇರುವ ಕೆಲ ಆಯ್ದ ಕೈಗಾರಿಕೆಗಳನ್ನು ಬೇರೆ ಉದ್ಯಮಕ್ಕೆ ಪರಿವರ್ತಿಸಿಕೊಂಡಿರುವ ಘಟಕಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಸೋಗಾನೆ ಸರ್ವೇ ನಂ. 120ರಲ್ಲಿ ಸರ್ಕಾರಿ ಜಮೀನಿನಲ್ಲಿರುವ ಕಲ್ಲುಗಣಿಯನ್ನು ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದ ಫೌಂಡ್ರಿ ಕೈಗಾರಿಕಾ ಘಟಕಗಳ ಮರಳು ತ್ಯಾಜ್ಯವನ್ನು ಸುರಿಯಲು ಹಂಚಿಕೆ ಮಾಡುವ ಸಂಬಂಧ ಪರಿಸರ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಿದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ಆಟೋ ಕಾಂಪ್ಲೆಕ್ಸ್ ಕೈಗಾರಿಕಾ ಪ್ರದೇಶದಲ್ಲಿ ಮಳೆಗಾಲದಲ್ಲಿ ಮಳೆ ನೀರು ಕೈಗಾರಿಕೆಗಳಿಗೆ ನುಗ್ಗಿ ತೀವ್ರ ಪ್ರಮಾಣದ ಅಡಚಣೆ ಉಂಟಾಗುತ್ತಿದ್ದು, ಕಳೆದ 5 ವರ್ಷಗಳಿಂದ ನಿರಂತರವಾಗಿರುವ ಈ ಸಮಸ್ಯೆಗೆ ನಿಗದಿತ ಅವಧಿಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಹಾಗೂ ಮಳೆ ನೀರನ್ನು ತಿರುಗಿಸುವ ಕಾಮಗಾರಿ ಕೈಗೊಳ್ಳಲು ಇರುವ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಬೇಕು. ಈ ಪ್ರದೇಶದಲ್ಲಿ ಬಹುದಿನಗಳಿಂದ ಹಾಳಾಗಿರುವ ಬೀದಿದೀಪಗಳನ್ನು ಮುಂದಿನ ಒಂದು ವಾರದೊಳಗಾಗಿ ದುರಸ್ತಿಗೊಳಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.