ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದ ಕಂದಾಯ ಇಲಾಖೆ ಅಧೀನದಲ್ಲಿರುವ 40 ಲಕ್ಷ ಎಕರೆ ಜಮೀನನ್ನು ಭೂರಹಿತ ಎಸ್ಸಿ, ಎಸ್ಟಿ ಕುಟುಂಬಗಳಿಗೆ ತಲಾ ಎರಡು ಎಕರೆಯಂತೆ ನೀಡಬೇಕು ಎಂದು ಒತ್ತಾಯಿಸಿ ಅಂಬೇಡ್ಕರ್ ವಾರಿಯರ್ಸ್ ಕಾರ್ಯಕರ್ತರು ರಾಜ್ಯ ಪರಿಶಿಷ್ಟ ಜಾತಿ/ವರ್ಗಗಳ ಆಯೋಗದ ಅಧ್ಯಕ್ಷ ಎಸ್.ಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿದರು.ನಗರಕ್ಕೆ ಆಗಮಿಸಿದ್ದ ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿ, ಹಳ್ಳಿಗಳು, ಹೋಬಳಿಗಳು, ತಾಲೂಕುಗಳು ಹಾಗೂ ಜಿಲ್ಲಾ ಕೇಂದ್ರಗಳು, ಪ್ರದೇಶಗಳು, ಪಟ್ಟಣ ಪಂಚಾಯ್ತಿಗಳು, ಮಹಾನಗರ ಪಾಲಿಕೆಗಳು, ಗ್ರೇಟರ್ ಬೆಂಗಳೂರು ಅಥಾರಿಟಿ(ಜಿ.ಬಿ.ಎ) ಇಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಸುಮಾರು 2.50 ಕೋಟಿ ಜನ ವಾಸಿಸುತ್ತಿದ್ದಾರೆ. ಈ ಸಮುದಾಯಕ್ಕೆ ಅವಶ್ಯಕವಾಗಿ ನಿವೇಶನ, ವಸತಿ ಮತ್ತು ಮೂಲ ಸೌಕರ್ಯಗಳು ಅತಿ ತುರ್ತಾಗಿ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ, ವಸತಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಸಮುದಾಯದ ಜನರಿಗೆ ವಾಸಿಸಲು ಯೋಗ್ಯ ನಿವೇಶನ, ಮನೆಗಳು ಹಾಗೂ ಮೂಲ ಸೌಕರ್ಯ ದೊರಕಿಸಬೇಕು ಎಂದರು.ಎಸ್‌ಸಿಪಿಬಿಎಸ್‌ಪಿ ಯೋಜನೆ ರಾಜ್ಯದಲ್ಲಿ 2013 ಮತ್ತು 14ನೇ ಸಾಲಿನಿಂದ ಜಾರಿಯಲ್ಲಿದೆ. ಈ ಸಂಬಂಧ ಸರ್ಕಾರ 1.5 ಲಕ್ಷ ಕೋಟಿ ರು. ಅನುದಾನ ಅನುಮೋದನೆ ಮಾಡಿ ನಂತರದ ದಿನಗಳಲ್ಲಿ ಬೇರೆ ಉದ್ದೇಶಕ್ಕೆ ವಿನಿಯೋಗವಾಗಿರುತ್ತದೆ. ಈ ಅನುದಾನ ಬರುವ 2026-27ನೇ ಸಾಲಿನ ಬಜೆಟ್ ಮಂಡನೆ ವೇಳೆ ವಾಪಸ್ ಕೊಡಿಸಿ ಮೂಲ ಉದ್ದೇಶಗಳಿಗೆ ವಿನಿಯೋಗಿಸಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ವರ್ಷಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಸುಮಾರು 18 ರಿಂದ 20 ಸಾವಿರ ಕೋಟಿ ರು. ಅನುದಾನವನ್ನು ಐದು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದು ಅಕ್ಷಮ್ಯವಾಗಿದೆ. ಈ ಸಂಬಂಧ ತಾವು ಸಮಾಜ ಕಲ್ಯಾಣ ಇಲಾಖೆ, ಸರ್ಕಾರಕ್ಕೆ ಮಾಹಿತಿ ನೀಡಿ ಇವರಿಂದ ದತ್ತಾಂಶ ಸಂಗ್ರಹಿಸಿ ಯಾವುದೇ ಕಾರಣಕ್ಕೂ ಅನುದಾನ ಇತರ ವರ್ಗದವರ ಬಳಕೆಗೆ ಅವಕಾಶ ನೀಡದಂತೆ ಮಾರ್ಗದರ್ಶನ ನೀಡಬೇಕೆಂದು ಮನವಿ ಮಾಡಿದರು.ಆಯೋಗದಲ್ಲಿ ಸುಮಾರ 40 ಸಾವಿರ ಪ್ರಕರಣಗಳು ವಿಲೇವಾರಿಯಾಗದೆ ಬಾಕಿ ಇವೆ. 3 ತಿಂಗಳ ಒಳಗೆ ನಾಲ್ಕು ಕಂದಾಯ ವಿಭಾಗವಾರು ಪ್ರಕರಣಗಳನ್ನು ವಿಲೇವಾರಿ ಮಾಡಬೇಕು. ಅಸ್ಪೃಶ್ಯತೆ ಆಚರಣೆ ತಡೆಯಲು ಪ್ರತಿ ಜಿಲ್ಲಾವಾರು ಆಸ್ಪೃಶ್ಯತಾ ಆಚರಣಾ ನಿರ್ಮೂಲನ ಸಾಪ್ತಾಹ ರೂಪಿಸಿ ಸಾರ್ವಜನಿಕ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಮೂರು ತಿಂಗಳೊಳಗೆ ಭರ್ತಿ ಮಾಡಲು ಆದೇಶಿಸಬೇಕು. ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯಲ್ಲಿ ಪರಿಶಿಷ್ಟ ಜಾತಿ ವರ್ಗಗಳ ಪ್ರತಿ ವ್ಯಕ್ತಿ, ಕುಟುಂಬಗಳಿಗೆ 25 ಲಕ್ಷ ದಿಂದ 50 ಲಕ್ಷ ರು ವರೆಗೆ ಬಡ್ಡಿ ರಹಿತ ಸಾಲ, ಭದ್ರತೆ ರಹಿತ ಸಾಲ ನೀಡಬೇಕು. ಆಟ್ರಾಸೀಟಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕು ಎಂದು ಆಗ್ರಹಿಸಿದರು.ಈ ವೇಳೆ ಮುಖಂಡರಾದ ಗಂಗರಾಜು, ಬಿ.ಪಿ.ಪ್ರಕಾಶ್, ಪೂರ್ಣಚಂದ್ರ, ಸುರೇಶ್‌ಕಂಠಿ, ಜೆ.ರಾಮಯ್ಯ, ಮಹೇಶ್‌ಕೃಷ್ಣ, ಚೌಧರಿ, ಲೋಕೇಶ್, ಪ್ರಕಾಶ್ ಭಾಗವಹಿಸಿದ್ದರು.
ಡಾ.ಮೂರ್ತಿ ಅವರಿಗೆ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತಮಂಡ್ಯ:
ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಅಯೋಗ ಅಧ್ಯಕ್ಷ ಡಾ.ಎಲ್.ಮೂರ್ತಿ ಅವರು ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಬೆಂಬಲಿಗರು ಅದ್ಧೂರಿ ಸ್ವಾಗತ ಕೋರಿದರು.ನಗರದ ಬೆಂಗಳೂರು-ಮೈಸೂರು ಹೆದ್ದಾರಿಯ ಅಗ್ನಿಶಾಮಕ ದಳ ಕಚೇರಿ ಮುಂಭಾಗಕ್ಕೆ ಆಗಮಿಸಿದಾಗ ಸಾವಿರಾರು ಕಾರ್ಯಕರ್ತರು ಹಾರ, ತುರಾಯಿ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು.
ನಂತರ 350ಕ್ಕೂ ಬೈಕ್‌ಗಳು, 150 ಆಟೋಗಳು ಹಾಗೂ ಕಾರುಗಳ ಮೂಲಕ ಬೃಹತ್ ರ‍್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ಮೂಲಕ ಡಾ.ಮೂರ್ತಿಯವರಿಗೆ ಸ್ವಾಗತ ಕೋರಿದರು.ಪ್ರತಿ ವೃತ್ತದಲ್ಲೂ ಸಾವಿರಾರು ಮಂದಿ ಭಾಗವಹಿಸಿದ್ದರು. ನಂತರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಉದ್ಯಾನದಲ್ಲಿರುವ ಕಾವೇರಿ ಪ್ರತಿಮೆ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.
ಈ ವೇಳೆ ಸಿದ್ದರಾಜು ಸುಂಡಹಳ್ಳಿ, ಪ್ರಾಣೇಶ್ ಸೂನಗಹಳ್ಳಿ, ಬಿ.ಆರ್.ಕುಮಾರಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಸೀತಾರಾಮು, ರಾಘವೇಂದ್ರ, ಸೂನಗಹಳ್ಳಿ ನಾಗರಾಜಮೂರ್ತಿ, ಅರಕೆರೆ ಶಿವಯ್ಯ, ಸೋಮೇಶ್, ಧನಂಜಯ, ಬೇವಿನಹಳ್ಳಿ ಕುಮಾರಸ್ವಾಮಿ, ಮುಖಂಡರಾದ ಶಿವನಂಜು, ಕಲ್ಲಹಳ್ಳಿ ನಾಗೇಂದ್ರ, ರುದ್ರೇಶ್, ಎಂ.ವಿ.ಕೃಷ್ಣ, ರಮೇಶ್, ಪುಟ್ಟರಾಜು, ವೆಂಕಟೇಶ್, ಲವ ಜೈ ಭೀಮ್ ಸಂಘದ ಕಾರ್ಯಕರ್ತರು, ಎಸ್.ಹೊನ್ನಯ್ಯ ಬಡಾವಣೆಯ ನಿವಾಸಿಗಳು ಇದ್ದರು.