ಹಳ್ಳಿಗಳಿಂದ ಯುವಕರ ವಲಸೆ ತಪ್ಪಿಸಲು ಸಾಲ ಸೌಲಭ್ಯ ನೀಡಿ: ಶಾಸಕ ಎಚ್.ಟಿ.ಮಂಜು

KannadaprabhaNewsNetwork | Published : May 22, 2025 11:58 PM
ಗ್ರಾಮೀಣ ಯುವಕರ ವಲಸೆ ಇಂದು ಬಹುದೊಡ್ಡ ಸಮಸ್ಯೆಯಾಗಿದೆ. ಹೊಟ್ಟೆ ಪಾಡಿಗೆ ದೊಡ್ಡ ನಗರಗಳಲ್ಲಿ ಸೆಕ್ಯೂರಟಿ ಗಾರ್ಡ್, ಹೋಟೆಲ್ ಮತ್ತಿತರ ಸ್ಥಳಗಳಲ್ಲಿ ರೈತರ ಮಕ್ಕಳು ಅತ್ಯಂತ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದಾರೆ. ಇದರಿಂದ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಉಂಟಾಗುತ್ತಿದೆ.
Follow Us

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಗ್ರಾಮೀಣ ಯುವಕರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದು ನಿಲ್ಲಲು ಬ್ಯಾಂಕ್‌ಗಳು ನಿರುದ್ಯೋಗಿ ಯುವಕರಿಗೆ ಕೌಶಲ್ಯ ಪರಿಣಿತಿಗೆ ಅನುಗುಣವಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ನೀಡುವಂತೆ ಶಾಸಕ ಎಚ್.ಟಿ.ಮಂಜು ಮನವಿ ಮಾಡಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಪಶುಪಾನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ (ಎನ್.ಎಲ್.ಎಂ) ಅನುಷ್ಟಾನ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಯುವಕರ ವಲಸೆ ಇಂದು ಬಹುದೊಡ್ಡ ಸಮಸ್ಯೆಯಾಗಿದೆ. ಹೊಟ್ಟೆ ಪಾಡಿಗೆ ದೊಡ್ಡ ನಗರಗಳಲ್ಲಿ ಸೆಕ್ಯೂರಟಿ ಗಾರ್ಡ್, ಹೋಟೆಲ್ ಮತ್ತಿತರ ಸ್ಥಳಗಳಲ್ಲಿ ರೈತರ ಮಕ್ಕಳು ಅತ್ಯಂತ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದಾರೆ. ಇದರಿಂದ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತೋಟಗಾರಿಕೆ, ಕೃಷಿ, ರೇಷ್ಮೆ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಗಳು ಪರಸ್ಪರ ಒಗ್ಗೂಡಿ ಸರ್ಕಾರದ ಸಹಾಯಧನ ಯೋಜನೆ ಮೂಲಕ ರೈತರ ಮಕ್ಕಳು ಪಶು ಸಾಕಾಣಿಕೆ, ಕುರಿ, ಕೋಳಿ, ಮೇಕೆ, ಮೊಲ, ಹಂದಿ ಸಾಕಾಣಿಕೆ ಮುಂತಾದ ಕೃಷಿ ಮತ್ತು ಇದಕ್ಕೆ ಪೂರಕವಾದ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್ ಮೂಲಕ ಅಗತ್ಯ ಸಾಲ ಕಲ್ಪಿಸಬೇಕು ಎಂದರು.

ಹಳ್ಳಿಗಳಲ್ಲಿ ಸ್ವಯಂ ಉದ್ಯೋಗಿಗಳ ಸಂಖ್ಯೆ ಹೆಚ್ಚಾದರೆ ನಗರ ಪ್ರದೇಶಗಳ ಮೇಲಿನ ವಲಸೆ ತಗ್ಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪಶುಪಾಲನಾ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಆದರೆ, ಬ್ಯಾಂಕ್‌ಗಳ ಸಾಲ ನೀತಿಯಿಂದ ರೈತ ಮಕ್ಕಳು ಅಗತ್ಯ ಸಾಲ ಪಡೆಯಲಾಗುತ್ತಿಲ್ಲ ಎಂದರು.

ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವ ರೈತರ ಮಕ್ಕಳು, ಬ್ಯಾಂಕ್‌ಗಳ ವ್ಯವಸ್ಥಾಪಕರು ಮತ್ತು ಪಶು ಪಾಲನಾ ಇಲಾಖೆ ಅಧಿಕಾರಿಗಳ ಮುಖಾಮುಖಿ ಸಭೆ ನಡೆಸಲಾಗುತ್ತಿದೆ. ಬ್ಯಾಂಕ್‌ಗಳು ರೈತ ಉದ್ಯಮಿಗಳಿಗೆ ಅಗತ್ಯ ಸಾಲ ನೀಡಿದರೆ ವಾರ್ಷಿಕ 255 ಜನ ಯುವಕರು ಸ್ವಯಂ ಉದ್ಯೋಗ ಆರಂಭಿಸಲು ಸಹಕಾರಿಯಾಗುತ್ತದೆ ಎಂದರು.

ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ರೈತ ಮಕ್ಕಳು ನೀಡಿರುವ ಅಗತ್ಯ ದಾಖಲೆಗಳಲ್ಲಿ ಲೋಪವಿದ್ದರೆ ಅದನ್ನು ಸರಿಪಡಿಸಿಕೊಂಡು ಸಾಲ ಸೌಲಭ್ಯ ಒದಗಿಸಿಕೊಡಬೇಕು ಎಂದು ಬ್ಯಾಂಕ್ ಮ್ಯಾನೇಜರ್ ಗಳಿಗೆ ಸೂಚಿಸಿದರು.

ಜಿಲ್ಲಾ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಸುರೇಶ್, ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣಕುಮಾರ್ ಅಗತ್ಯ ಮಾಹಿತಿ ತಿಳಿಸಿದರು. ಸಭೆಯಲ್ಲಿ ಪುರಸಭಾ ಸದಸ್ಯ ಗಿರೀಶ್, ದಿಶಾ ಸಮಿತಿ ಸದಸ್ಯ ನರಸನಾಯಕ, ಟಿಎಪಿಸಿಎಂಎಸ್ ನಿರ್ದೇಶಕ ಟಿ.ಬಲದೇವ್, ಮುಖಂಡರಾದ ಚೌಡೇನಹಳ್ಳಿ ರವಿ, ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಲೋಕೇಶ್, ಟೌನ್ ಘಟಕದ ಅಧ್ಯಕ್ಷೆ ಎಂ.ಕೆ.ರತಿ, ಕಿಕ್ಕೇರಿ ಜಯಲಕ್ಷ್ಮಿ, ತಾಲೂಕು ಪಶು ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ದೇವರಾಜು ಇದ್ದರು.ಸಾಲ ಪಡೆಯಲು ಬ್ಯಾಂಕ್‌ಗಳಲ್ಲಿ ಅನಾನುಕೂಲ ರೈತರ ಆಕ್ರೋಶ

ಕೆ.ಆರ್.ಪೇಟೆ:

ಸಾಲ ಪಡೆಯಲು ಬ್ಯಾಂಕ್‌ಗಳಿಂದ ಆಗುತ್ತಿರುವ ಅನಾನುಕೂಲದ ಬಗ್ಗೆ ಫಲಾನುಭವಿ ರೈತರು ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿತು.

ಬ್ಯಾಂಕ್‌ಗಳ ಮ್ಯಾನೇಜರ್ ಸೇರಿದಂತೆ ಬಹುತೇಕ ಸಿಬ್ಬಂದಿಗೆ ಕನ್ನಡವೇ ಬರುತ್ತಿಲ್ಲ. ಏನಾದರೂ ಕೇಳಿದರೆ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಉತ್ತರಿಸುತ್ತಾರೆ. ನಮಗೆ ಕನ್ನಡ ಹೊರತುಪಡಿಸಿ ಇತರೆ ಭಾಷೆಗಳು ಬರುವುದಿಲ್ಲ. ಇದರಿಂದ ಸಾಲ ಪಡೆಯಲು ಸಮಸ್ಯೆಯಾಗುತ್ತಿದೆ ಎಂದು ದೂರಿದರು.

ನಾನು ಈಗಾಗಲೇ 50 ಕುರಿಗಳನ್ನು ಸಾಕುತ್ತಿದ್ದೇನೆ. ಆದರೆ, ಕನ್ನಡ ಬಾರದ ಬ್ಯಾಂಕ್ ಮ್ಯಾನೇಜರ್ ನನ್ನ ಸಾಲದ ಅರ್ಜಿಯನ್ನು ಪರಿಗಣಿಸುತ್ತಿಲ್ಲ ಎಂದು ರೈತ ಚಿಕ್ಕಗಾಡಿಗನಹಳ್ಳಿ ಸೋಮಶೇಖರ್ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ಮಾಜಿ ಸದಸ್ಯ ಹುಲ್ಲೇಗೌಡ ಮಾತನಾಡಿ, ಬ್ಯಾಂಕ್‌ಗಳಲ್ಲಿ ಪ್ರಭಾವಿಗಳಿಗೆ ಮಾತ್ರ ಸಾಲ ಸಿಗುತ್ತಿದೆ. ಸಾಲಕ್ಕೆ ರೈತರು ನೀಡುವ ಆರ್.ಟಿ.ಸಿ ಪರಿಗಣಿಸುತ್ತಿಲ್ಲ. ನಗರ ಪ್ರದೇಶದ ಬೆಲೆ ಬಾಳುವ ಆಸ್ತಿಯನ್ನು ಶ್ಯೂರಿಟಿ ಕೇಳುತ್ತಿದ್ದಾರೆ. ಆರ್ ಟಿಸಿ ಮೇಲೆ ಸಹಾಯಧನ ಯೋಜನೆಗಳಿಗೆ ಅಗತ್ಯ ಸಾಲ ನೀಡುವಂತೆ ಒತ್ತಾಯಿಸಿದರು.