ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಬಾಲಭಾವನದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಸಹಕಾರ ಸಂಸ್ಥೆಗಳನ್ನು ಡಿಜಿಟಲೀಕರಣಗೊಳಿಸಲು ತಾಂತ್ರಿಕತೆಯ ಅಳವಡಿಕೆ ಉನ್ನತೀಕರಣ ದಿನಾಚರಣೆ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದರು.
ಸಹಕಾರ ಕ್ಷೇತ್ರವು ವಿಶಾಲ ವ್ಯಾಪ್ತಿ ಹೊಂದಿದೆ. ಕೊನೆಯಿಲ್ಲದ ಸೇವೆ ಎಂದರೆ ಜನ ಸೇವೆ, ಕಷ್ಟಕಾಲಕ್ಕೆ ರೈತರಿಗೆ ನೆರವಾಗುವುದು ಎಂದರೆ ಅದು ಸಹಕಾರ ಸಂಘ ಬ್ಯಾಂಕುಗಳು ಎಂದು ತಿಳಿಸಿದರು.ಸಹಕಾರಿ ಯೂನಿಯನ್‌ಗಳು ಸಮೃದ್ಧವಾಗಬೇಕಾದರೆ ರಾಜಕೀಯತ್ವ ನಡೆಯಬಾರದು. ಆಗಲೇ ಸಹಕಾರಿ ಸಂಘ ಹಾಗೂ ಬ್ಯಾಂಕುಗಳು ಉನ್ನತಿ ಕಾಣಲು ಸಾಧ್ಯ. ಹಾಗೆಯೇ ರೈತಾಪಿ ವರ್ಗದ ಜೀವನವೇ ಅತ್ಯಂತ ಶ್ರೀಮಂತ ಜೀವನ. ರೈತರಿಂದಲೇ ಆರ್ಥಿಕತೆ ಸಮೃದ್ಧವಾಗಿರುವುದು ಎಂದು ವಿವರಿಸಿದರು.ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ ಮಾತನಾಡಿ, ಭಾರತದ ಆರ್ಥಿಕತೆಯನ್ನು ಮೂರನೇ ಸ್ಥಾನಕ್ಕೆ ತಲುಪಿಸಲು ಸಹಕಾರ ಸಂಸ್ಥೆಗಳಿಂದಲೇ ಸಾಧ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸಹಕಾರಿ ಸಂಸ್ಥೆಗಳನ್ನು ಸದೃಢವಾಗಿಸಬೇಕು. ಆ ನಿಟ್ಟಿನಲ್ಲಿ ದೇಶಾದ್ಯಂತ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತದೆ ಎಂದರು.
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಎಂ.ಬಿ.ದೇವಯ್ಯ ಮಾತನಾಡಿ, ಸಹಕಾರ ಸಂಘದಿಂದ ಸಾಲ ಸೌಲಭ್ಯ ಪಡೆದ ಎಷ್ಟೋ ಬಡ ಜನರು ಬದುಕು ಕಟ್ಟಿಕೊಂಡಿದ್ದಾರೆ. ಕೊಡಗಿನ ಜನರು ಭೂಮಿ ಮಾರಿಕೊಳ್ಳಬಾರದು, ಕೃಷಿಕರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿದ್ದರೆ ಜಾಗದ ಮಾರಾಟ ಹೆಚ್ಚಾಗುತ್ತದೆ. ಇದನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದರು.ಪತ್ರಕರ್ತ ಜಿ.ರಾಜೇಂದ್ರ ಮಾತನಾಡಿ, ಕೊಡಗು ಜಿಲ್ಲೆ ಕಾಫಿ, ಕರಿಮೆಣಸು, ಜೇನು, ಕಿತ್ತಳೆ ಹೀಗೆ ಹಲವಾರು ಕೃಷಿಯಲ್ಲಿ ಪ್ರಸಿದ್ಧಿ ಪಡೆದಿದ್ದು, ಸಹಕಾರಿ ಬ್ಯಾಂಕ್‌ಗಳಿಂದ ಸಾಲ ವ್ಯವಸ್ಥೆಯು ರೈತರನ್ನು ಉಳಿಸಿದೆ. ಆ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರಗಳನ್ನು ಉಳಿಸಿದರೆ ರೈತರನ್ನು ಬೆಳೆಗಾರರನ್ನು ಉಳಿಸಿದಂತೆ ಎಂದರು.
ಒಂದು ಗ್ರಾಮದ ಅಭಿವೃದ್ಧಿ ಆಗಬೇಕೆಂದರೆ ಗ್ರಾಮದಲ್ಲಿ ಒಂದು ಶಾಲೆ, ಒಂದು ಸಹಕಾರ ಸಂಘ, ಒಂದು ಬ್ಯಾಂಕ್ ಅವಶ್ಯಕತೆ ಇದೆ. ಸಹಕಾರಿ ಸಂಘಗಳು ಸಾಲ ಸೌಲಭ್ಯವಲ್ಲದೆ ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.* ಪ್ರಶಸ್ತಿ ಪಾತ್ರರಿಗೆ ಸನ್ಮಾನಕೊಡಗು ಸಹಕಾರ ರತ್ನ ಪ್ರಶಸ್ತಿಗೆ ಕೊಳಕೇರಿಯ ಬಿದ್ದಾಟಂಡ ರಮೇಶ್ ಚಂಗಪ್ಪ, ಶ್ರೇಷ್ಠ ಸಹಕಾರಿಗಳು ಪ್ರಶಸ್ತಿಗೆ ಮಡಿಕೇರಿಯ ಕೊಂಗಂಡ ಎ.ತಿಮ್ಮಯ್ಯ, ಪೊನ್ನಂಪೇಟೆಯ ಚಿರಿಯಪಂಡ ಉತ್ತಪ್ಪ, ಸೋಮವಾರಪೇಟೆಯ ಎಚ್.ಎಸ್ ಸುಬ್ಬಪ್ಪ, ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿಗೆ ಮಡಿಕೇರಿಯ ಮಣವಟ್ಟಿರ ಕಾವೇರಿಯಮ್ಮ ಪೂವಣ್ಣ ಅವರು ಆಯ್ಕೆಯಾಗಿದ್ದು, ಕಾರ್ಯಕ್ರಮದಲ್ಲಿ ಪ್ರಶಸ್ತಿಗೆ ಭಾಜನರಾಗಿರುವವರನ್ನು ಸನ್ಮಾನಿಸಲಾಯಿತು.