ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ, ಅಗತ್ಯ ಕೌನ್ಸೆಲಿಂಗ್ ನೀಡುವಂತೆ ಜಿಲ್ಲಾಧಿಕಾರಿ ಯಂಶವತ್ ವಿ.ಗುರುಕರ್ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಾಲ್ಯ ವಿವಾಹಗಳು ಗ್ರಾಮಗಳಲ್ಲಿ ಗುಪ್ತವಾಗಿ ನಡೆಯುವುದರಿಂದ ಕೆಲವೊಮ್ಮೆ ಅಧಿಕಾರಿಗಳಿಗೆ ಅದು ತಿಳಿಯುವುದು ತಡವಾಗುತ್ತದೆ. ಆ ರೀತಿಯ ಸಂದರ್ಭಗಳು ಎದುರಾಗುವ ಮೊದಲೇ ಶಾಲೆಗಳಲ್ಲಿ ಹೆಚ್ಚು ದಿನ ಗೈರು ಹಾಜರಾದ ಬಾಲಕಿಯರ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರು ಗಮನ ಹರಿಸುತ್ತಿರಬೇಕು. ಒಂದು ವೇಳೆ ಗೈರು ಹಾಜರಾದ ಬಾಲಕಿಯರಿಗೆ ಪೋಷಕರು ವಿವಾಹ ಮಾಡುತ್ತಿರುವ ವಿಷಯ ತಿಳಿದುಬಂದರೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಬೇಕು. ಅಧಿಕಾರಿಗಳು ದೂರು ದಾಖಲಿಸಿಕೊಂಡು ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಯಾವುದೇ ಒತ್ತಡಗಳಿಗೆ ಮಣಿಯಬಾರದು ಎಂದು ಹೇಳಿದರು.
ರಾಮನಗರ ಜಿಲ್ಲೆಯಲ್ಲಿ 181 ಮಹಿಳಾ ಸಹಾಯವಾಣಿಯ ಮೂಲಕ ಏಪ್ರಿಲ್-2024ರಿಂದ ಜುಲೈ-2024ರ ಅಂತ್ಯಕ್ಕೆ 8 ಕರೆಗಳು ಸ್ವೀಕೃತವಾಗಿದ್ದು, ಈ ಪ್ರಕರಣಗಳಿಗೆ ಪೊಲೀಸ್ ನೆರೆವು, ಕಾನೂನು ನೆರವು, ಆಪ್ತ ಸಮಲೋಚನೆ ಸೇವೆಯನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್.ಸವಿತಾ ಮಾತನಾಡಿದರು. ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್, ಡಿವೈಎಸ್ಪಿ ದಿನಕರ್ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ನಿರೀಕ್ಷಕರಾದ ಬಿ.ಗಾಯಿತ್ರಿ ದೇವಿ , ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಜಿನಿ, ಜಿಲ್ಲೆಯ 5 ತಾಲೂಕುಗಳ ಶಿಶು ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.