ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಜಯನಗರ ಬಡಾವಣೆಯಲ್ಲಿ ನಿರ್ಮಿಸಿರುವ ತಾಯಿ ಮಗು ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಸರ್ಕಾರ ಸುಮಾರು 27 ಕೋಟಿಗೂ ಅಧಿಕ ವೆಚ್ಚದಲ್ಲಿ ಪಟ್ಟಣದಲ್ಲಿ ಸುಸಜ್ಜಿತ ತಾಯಿ ಮಗು ಆಸ್ಪತ್ರೆ ಕಟ್ಟಡ ನಿರ್ಮಿಸಿದೆ. ಕಟ್ಟಡ ನಿರ್ಮಾಣಗೊಂಡಿದ್ದರೂ ವೈದ್ಯಕೀಯ ಸಿಬ್ಬಂದಿ ನೇಮಕ ಸೇರಿದಂತೆ ಒಂದಷ್ಟು ಮೂಲ ಸೌಲಭ್ಯಗಳ ಕೊರತೆಯಿಂದ ಆಸ್ಪತ್ರೆ ಮಾತ್ರ ಇದುವರೆಗೂ ಲೋಕಾರ್ಪಣೆಗೊಂಡಿಲ್ಲ ಎಂದರು.
ದಿನದ 24 ಗಂಟೆಗಳ ಕಾಲ ತಾಯಿಮಗು ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಲಭ್ಯವಾಗಬೇಕಾದರೆ ರಾಜ್ಯ ಸರ್ಕಾರ ಅಗತ್ಯ ಶ್ರೋಷಕರು ಮತ್ತು ಡಿ.ಗ್ರೋಪ್ ಸಿಬ್ಬಂದಿ ನೇಮಕ ಮಾಡಬೇಕು. ತಾಯಿ ಮಗು ಆಸ್ಪತ್ರೆಗೆ ಮೂವರು ಅನಸ್ತೇಶಿಯಾ ವೈದ್ಯರು, ಮೂವರು ಗೈನಿಕಾಜಿಲಿಸ್ಟ್ ವೈದ್ಯರು ಮತ್ತು ಮೂವರು ಮಕ್ಕಳ ವೈದ್ಯರ ಅಗತ್ಯವಿದೆ ಎಂದು ಹೇಳಿದರು.ಸರ್ಕಾರ ಅರೆಬರೆ ಯಂತ್ರೋಪಕರಣಗಳು ಮತ್ತು ಪೀಠೋಪಕರಣ ಒದಗಿಸಿದ್ದು, ಇವು ದೂಳು ಹಿಡಿಯುತ್ತಿವೆ. ಪೂರ್ಣ ಪ್ರಮಾಣದ ಅಗತ್ಯ ಯಂತ್ರೋಪಕರಣ ಮತ್ತು ಪೀಠೋಪಕರಣಗಳ ಅಗತ್ಯವಿದೆ. ಸುಸಜ್ಜಿತ ಕಟ್ಟಡ ನಿರ್ಮಿಸಿದ ಅಗತ್ಯ ವೈದ್ಯಕೀಯ ಸಿಬ್ಬಂಧಿ, ಸೌಕರ್ಯ ನೀಡಬೇಕಿದೆ ಎಂದರು.
ಈ ಬಗ್ಗೆ ಈಗಾಗಲೇ ಸಾರ್ವಜನಿಕ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಶಾಸಕ ಎಚ್.ಟಿ.ಮಂಜು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆಸ್ಪತ್ರೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಿ ಆದಷ್ಟು ಶೀಘ್ರ ಸಾರ್ವಜನಿಕ ಸೇವೆಗೆ ಸಮರ್ಪಣೆ ಮಾಡಲು ಸರ್ಕಾರ ಮುಂದಾಗುವಂತೆ ಆಗ್ರಹಿಸಿದರು.ಗುತ್ತಿಗೆದಾರರು ಆಸ್ಪತ್ರೆಯ ಸಣ್ಣಪುಟ್ಟ ಕೆಲಸಗಳನ್ನು ಕೂಡಲೇ ಮುಗಿಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿಯಲ್ಲಿ ಲೋಪ ಅಥವಾ ಗುಣಮಟ್ಟ ವಿಫಲವಾದರೆ ನೀವೇ ಸಂಪೂರ್ಣ ಹೊಣೆಗಾರರಾಗಬೇಕಿರುತ್ತದೆ. ನೆಲ, ಗೋಡೆ, ಬಣ್ಣ, ಹಾಗೂ ಇನ್ನಿತರೆ ಕೆಲಸಗಳನ್ನು ಸಾರ್ವಜನಿಕರು ಹಾಗೂ ಪೂರ್ಣಪ್ರಮಾಣದಲ್ಲಿ ವೀಕ್ಷಿಸುವುದರಿಂದ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದರು.
ವೈದ್ಯಮತ್ತು ಸಿಬ್ಬಂದಿ, ವಸತಿ ಗೃಹಗಳ ಸೌಲಭ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ನೇಮಿಸಬೇಕು. ನಾನೂ ಸಹ ಆರೋಗ್ಯ ಸಚಿವರಿಗೆ ಹಾಗೂ ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳಿಗೆ ಬಗ್ಗೆ ಪತ್ರ ಬರೆದು ಮನವಿ ಮಾಡಲಿದ್ದೇನೆ. ಆಸ್ಪತ್ರೆ ಲೋಕಾರ್ಪಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದರು.ಈ ವೇಳೆ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಂಜುಳ, ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಧಮೇಂದ್ರ, ಹಿರಿಯ ಆರೋಗ್ಯ ನಿರೀಕ್ಷಕ ಸತೀಶ್, ವಿನಯ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.