ಕಂಪ್ಲಿ: ಶಾಲೆಗೆ ಅಗತ್ಯ ಶೌಚಾಲಯ, ನೀರಿನ ವ್ಯವಸ್ಥೆ ಕಲ್ಪಿಸಿ

KannadaprabhaNewsNetwork | Published : Jan 13, 2024 1:39 AM

ಸಾರಾಂಶ

ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ. ಕಾಂಪೌಂಡ್ ಸುಸಜ್ಜಿತವಾಗಿಲ್ಲ.

ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ಜರುಗಿತು.

ಸಭೆಯಲ್ಲಿ ಸರ್ಕಾರಿ ಪ್ರೌಢಶಾಲೆಯ ಮಂಜುನಾಥ್, ಮೇಘನಾ, ಮಾರೆಮ್ಮ, ಮಾತನಾಡಿ, ಕಿಡಿಗೇಡಿಗಳ ಉಪಟಳದಿಂದ ನಮ್ಮ ಶಾಲೆಯ ವಾತಾವರಣ ಹದಗೆಡುತ್ತಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಳವಾರಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚೈತನ್ಯ ರಾಜೇಶ್ವರಿ ರಂಜಿತ ಮಾತನಾಡಿ, ಮಕ್ಕಳ ದಾಖಲಾತಿಗೆ ಶೌಚಾಲಯ ತುಂಬಾ ಕಡಿಮೆ ಇವೆ. ಕೂಡಲೇ ನಮ್ಮ ಸರ್ಕಾರಿ ಶಾಲೆಗೆ ಅಗತ್ಯ ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲು ಗ್ರಾಮ ಪಂಚಾಯಿತಿಯವರನ್ನು ಕೋರಿದರು.

ಶತಮಾನೋತ್ಸವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮಾತನಾಡಿ, ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ. ಕಾಂಪೌಂಡ್ ಸುಸಜ್ಜಿತವಾಗಿಲ್ಲ. ಕಂಪ್ಯೂಟರ್ ಶಿಕ್ಷಕರ ಕೊರತೆ ಇದೆ. ಶಾಲೆ ಮುಂದೆ ಬಸ್ ನಿಲ್ದಾಣ ಇರುವುದರಿಂದ ಸಾರ್ವಜನಿಕರಿಂದ ತೊಂದರೆ ಎದುರಿಸುತ್ತಿದ್ದೇವೆ. ಈ ಕುರಿತು ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಲು ಮುಂದಾಗುವಂತೆ ಒತ್ತಾಯಿಸಿದರು.

ಅಂಗನವಾಡಿ ಕೇಂದ್ರದ ಕಾರ್ಯಕರ್ತರು, ತಮ್ಮ ಕೇಂದ್ರ ಸಮಸ್ಯೆಗಳ ಪಟ್ಟಿಯನ್ನು ಲಿಖಿತ ರೂಪದಲ್ಲಿ ಪಂಚಾಯಿತಿ ಅಧ್ಯಕ್ಷರಿಗೆ ಸಲ್ಲಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಲಕ್ಷ್ಮಣ್ ತಾರು ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ದಿನಗಳಲ್ಲಿ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಬಳಿಕ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸದಸ್ಯರಾದ ಎಚ್.ಸಿ. ರಾಘವೇಂದ್ರ ಮಾತನಾಡಿ, ಮಕ್ಕಳ ಗ್ರಾಮಸಭೆ ಮೂಲಕ ಮಕ್ಕಳ ಸ್ಥಿತಿಗತಿ ಸುಧಾರಣೆಯಾಗುತ್ತದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಾರದಾ ಮಾತನಾಡಿ, ಮಕ್ಕಳ ಸಮಸ್ಯೆಗಳನ್ನು ಗ್ರಾಮ ಪಂಚಾಯಿತಿ ಗಂಭೀರವಾಗಿ ಪರಿಗಣಿಸಿ, ಪರಿಹಾರಗಳನ್ನು ಆದ್ಯತೆಯ ಮೇಲೆ ಪರಿಹರಿಸಲು ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು. ಮುಂದಿನ ದಿನಗಳಲ್ಲಿ ಈ ವಿಚಾರಗಳನ್ನು ಗ್ರಾಮ ಪಂಚಾಯಿತಿಯ ಯೋಜನೆಗಳಲ್ಲಿ ಜಾರಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಚ್. ಗಾದಿಲಿಂಗಪ್ಪ, ಉಪ ಪ್ರಾಚಾರ್ಯೆ ಜೈನಾಭಿ, ಮುಖ್ಯ ಗುರುಗಳಾದ ಬಿ.ಎಸ್. ಸಾದೋಜಾತಪ್ಪ, ಪಕ್ಕೀರಪ್ಪ, ಆಶಾಭಿ, ಮಾಭಾಸ್, ಎಸ್‌ಡಿಎಂಸಿ ಅಧ್ಯಕ್ಷರಾದ ಬಿ. ರಾಜ್, ಅರೋಗ್ಯ ಇಲಾಖೆ ಸಿಬ್ಬಂದಿಗಳಾದ ಸರೋಜ, ಸಾಧಿಕ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಾಯಿಬಾನ್ನಾ, ಮೌಲಾಸಾಬ್, ಜಡೆಸ್ವಾಮಿ, ಈರಮ್ಮ, ಶಿಕ್ಷಕರಾದ ಎಸ್. ರಾಮಪ್ಪ, ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಕೌಶಿಕ್, ರೀಡ್ಸ್ ಸಂಸ್ಥೆಯ ಎಂ. ನಾಗರಾಜ್ ಸೇರಿದಂತೆ ಆಶಾ ಕಾರ್ಯಕರ್ತೆಯರಿದ್ದರು.

Share this article