
ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಜಿ.ಪಂ. ಕಚೇರಿಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ್ ಆರ್. ಹಾಗೂ ಜಿಲ್ಲಾಧ್ಯಕ್ಷ ಸುಬ್ಬರಾಜ್ ಅರಸ್ ವಿ.ಆರ್. ರವರ ನೇತೃತ್ವದಲ್ಲಿ ಈಶ್ವರಪ್ಪರವರನ್ನು ಭೇಟಿ ಮಾಡಿದ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಪಿಡಿಒಗಳು ತಮ್ಮ ಬೇಡಿಕೆಯುಳ್ಳ ಮನವಿ ಪತ್ರವನ್ನು ಸಲ್ಲಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿದರು.
ಅಸೂಟಿ ಮತ್ತು ಕೊತಬಾಲ ಎರಡು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಯಾಗಿ (ಹೆಚ್ಚುವರಿ ಪ್ರಭಾರ ಸೇರಿ) ಕರ್ತವ್ಯ ನಿರ್ವಹಿಸುತ್ತಿದ್ದ ಮುಕ್ತಂಹುಸೇನ ಕರಡಿಗುಡ್ಡ ಅವರು ಅತಿಯಾದ ಕೆಲಸದ ಒತ್ತಡ, ಹಿಂದಿನ ಪ್ರಕರಣವೊಂದರ ಮೇಲಿದ್ದ ಲೋಕಾಯುಕ್ತ ತನಿಖೆ ಹಾಗೂ ವೇತನವಿಲ್ಲದೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಡೀ ರಾಜ್ಯದ ಪಿಡಿಒ ಸಮುದಾಯವನ್ನು ತೀವ್ರ ಆಘಾತಕ್ಕೀಡು ಮಾಡಿದೆ. ಈ ಪ್ರಕರಣ ಕೇವಲ ಒಬ್ಬ ಅಧಿಕಾರಿಯ ದುರಂತವಲ್ಲ, ಬದಲಾಗಿ ಇಡೀ ರಾಜ್ಯದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎದುರಿಸುತ್ತಿರುವ ನೈಜ ಮತ್ತು ಭೀಕರ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಗ್ರಾಮೀಣಾಭಿವೃದ್ಧಿಯ ಆಧಾರ ಸ್ತಂಭವಾಗಿರುವ ಪಿಡಿಒಗಳು ಇಂದು ತೀವ್ರವಾದ ಕೆಲಸದ ಒತ್ತಡದಲ್ಲಿ ನಲುಗಿ ಹೋಗುತ್ತಿದ್ದಾರೆ ಎಂದು ತಮ್ಮ ಸಮಸ್ಯೆಯನ್ನು ಪಿಡಿಒಗಳು ಹೇಳಿಕೊಂಡರು.ಸರ್ಕಾರಕ್ಕೆ ವರದಿ ಇಲ್ಲ:
ಪಿಡಿಒ ಮುಕ್ತಂಹುಸೇನ ಕರಡಿಗುಡ್ಡ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಯಾಗಬೇಕು. ಅವರ ಕುಟುಂಬಕ್ಕೆ ಇಲಾಖೆಯಿಂದ ಸಿಗಬೇಕಾದ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು, ಬಾಕಿ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಅವರ ಕುಟುಂಬದ ಓರ್ವ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ಯಾವುದೇ ಅಧಿಕಾರಿಯ ಮೇಲೆ ಇಲಾಖಾ ವಿಚಾರಣೆ ಅಥವಾ ಲೋಕಾಯುಕ್ತ ಪ್ರಕರಣ ದಾಖಲಾಗಿದ್ದರೆ ಅದನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ವಿಚಾರಣೆ ನೆಪದಲ್ಲಿ ತಿಂಗಳುಗಟ್ಟಲೆ ಅಮಾನತಿನಲ್ಲಿಟ್ಟು, ಸ್ಥಳ ನಿಯುಕ್ತಿಗೊಳಿಸದೆ, ವೇತನವೂ ನೀಡದೆ ಅಧಿಕಾರಿಗಳನ್ನು ಮತ್ತು ಅವರ ಕುಟುಂಬವನ್ನು ಉಪವಾಸ ಕೆಡವುವ ವ್ಯವಸ್ಥೆ ಬದಲಾಗಬೇಕು. ವಿಚಾರಣಾ ಅವಧಿಯಲ್ಲಿ ನಿಯಮಾನುಸಾರ ಜೀವನಾಧಾರ ಭತ್ಯೆಯನ್ನು ಕಡ್ಡಾಯವಾಗಿ ಹಾಗೂ ಸಕಾಲದಲ್ಲಿ ಪಾವತಿಸಬೇಕು ಎಂದು ಪಿಡಿಒಗಳು ಮನವಿ ಮಾಡಿದರು.