ಜನರಿಗೆ ಶುದ್ಧೀಕರಿಸಿದ ಕುಡಿವ ನೀರು ಪೂರೈಸಿ

KannadaprabhaNewsNetwork |  
Published : Mar 21, 2025, 12:35 AM IST
ಜಿಲ್ಲಾಧಿಕಾರಿಗಳ ಸಭೆ | Kannada Prabha

ಸಾರಾಂಶ

ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನರಿಗೆ ಶುದ್ಧೀಕರಿಸಿದ ಕುಡಿಯುವ ನೀರನ್ನೇ ಪೂರೈಕೆ ಮಾಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ, ತುಮಕೂರು ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನರಿಗೆ ಶುದ್ಧೀಕರಿಸಿದ ಕುಡಿಯುವ ನೀರನ್ನೇ ಪೂರೈಕೆ ಮಾಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಗುರುವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ ಮಾತನಾಡಿದರು.ಸಾರ್ವಜನಿಕರಿಗೆ ಸರಬರಾಜು ಮಾಡುವ ನೀರಿನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಉಪಸ್ಥಿತಿಯ ಸಾಧ್ಯತೆಯಿದ್ದು, ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ನೀರು ಪೂರೈಕೆಗೂ ಮುನ್ನ ಕಡ್ಡಾಯವಾಗಿ ಕ್ಲೋರಿನೇಷನ್ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಹಾಯವಾಣಿ ಮೂಲಕ ಸ್ವೀಕೃತವಾದ ಸಮಸ್ಯೆಗಳನ್ನು ಕಡೆಗಣಿಸದೆ ತ್ವರಿತವಾಗಿ ಬಗೆಹರಿಸಬೇಕು ಎಂದು ತಿಳಿಸಿದರು. ಜಿಲ್ಲೆಯ ಪಾವಗಡ ಪಟ್ಟಣಕ್ಕೆ ತುಂಗಭದ್ರಾ ನೀರನ್ನು ಸರಬರಾಜು ಮಾಡಲು ಪೈಪ್ ಲೈನ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ನಿಗದಿತ ಕಾಲಮಿತಿಯೊಳಗೆ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ ಗ್ರಾಮದಲ್ಲಿರುವ ನೀರು ಸಂಗ್ರಹನಾ ಓವರ್ ಹೆಡ್ ಟ್ಯಾಂಕುಗಳ ಪರಿಸ್ಥಿತಿ ಹಾಗೂ ಟ್ಯಾಂಕುಗಳ ಸ್ವಚ್ಛತೆಯ ಬಗ್ಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗಮನಹರಿಸಿ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಗಿರೀಶ್ ಬಾಬು ಮಾತ ನಾಡಿ, ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮುಂದಿನ ೩೪ ವಾರಗಳಿಗಾಗುವಷ್ಟು ಮೇವು ಲಭ್ಯವಿದ್ದು ಯಾವುದೇ ಸಮಸ್ಯೆ ಇಲ್ಲ. ನೀರಾವರಿ ಆಶ್ರಯ ಹೊಂದಿದ ಆಸಕ್ತ ರೈತರಿಗೆ ಮೇವಿನ ಬೀಜದ ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಸಭೆಗೆ ತಿಳಿಸಿದರು.ಹೊಸ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿಯಿದ್ದ 92 ಕೊಳವೆ ಬಾವಿಗಳ ಪೈಕಿ 86 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡುವ ಕಾರ್ಯ ಪೂರ್ಣಗೊಂಡಿದೆ ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಹೇಳಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪಸ್ವಾಮಿ, ಕೃಷಿ ಜಂಟಿ ನಿರ್ದೇಶಕ ರಮೇಶ್, ಪಾಲಿಕೆ ಇಂಜಿನಿಯರ್ ಸಂದೀಪ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಯೋಗಾನಂದ್, ತಹಶೀಲ್ದಾರ್ ರಾಜೇಶ್ವರಿ ಸೇರಿದಂತೆ ಮತ್ತಿತರೆ ಅಧಿಕಾರಿಗಳು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ