ಸಾರ್ವಜನಿಕರಿಗೆ ತ್ವರಿತ ಸಾರಿಗೆ ಸೇವೆ ಒದಗಿಸಿ

KannadaprabhaNewsNetwork |  
Published : Jul 19, 2025, 01:00 AM IST
ಬೆಳಗಾವಿಯಲ್ಲಿ ನಿರ್ಮಿಸಲಾದ ನೂತನ ಆರ್‌ಟಿಒ ಕಚೇರಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು | Kannada Prabha

ಸಾರಾಂಶ

ಬೆಳಗಾವಿ ವಿಭಾಗ ಜಂಟಿ ಸಾರಿಗೆ ಆಯುಕ್ತರ ಕಚೇರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡವನ್ನು ಸಾರ್ವಜನಿಕರಿಗೆ ಅನುಕುವಾಗುವ ರೀತಿಯಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರಿಗೆ ತ್ವರಿತ ಸಾರಿಗೆ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ವಿಭಾಗ ಜಂಟಿ ಸಾರಿಗೆ ಆಯುಕ್ತರ ಕಚೇರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡವನ್ನು ಸಾರ್ವಜನಿಕರಿಗೆ ಅನುಕುವಾಗುವ ರೀತಿಯಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರಿಗೆ ತ್ವರಿತ ಸಾರಿಗೆ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿಯ ಬೆಳಗಾವಿ ವಿಭಾಗ ಜಂಟಿ ಸಾರಿಗೆ ಆಯುಕ್ತರು ಕಚೇರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಕ್ಕೆ ಆದಾಯ ತರುವ ಪ್ರಮುಖ ಇಲಾಖೆಗಳಲ್ಲಿ ಸಾರಿಗೆ ಇಲಾಖೆ ಕೂಡ ಒಂದಾಗಿದೆ. ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಈಗಾಗಲೇ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಿಬ್ಬಂದಿ ಕೊರತೆ ಕಡಿಮೆಯಾಗಲಿದೆ ಎಂದರು.ಬೈಲಹೊಂಗಲದಲ್ಲಿ ₹5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಸ್ವಯಂ ಚಾಲಿತ ಚಾಲನಾ ಪಥ ಉದ್ಘಾಟನೆ ಮಾಡಲಾಗಿದೆ. ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಾಗುವುದು. ಕರ್ಕಶ ಹಾರ್ನ್, ಹೆಚ್ಚು ಪ್ರಕಾಶದ ಲೈಟ್‌ಗಳು ಇರುವ ವಾಹನಗಳನ್ನು ಗುರುತಿಸಿ ದಂಡಗಳನ್ನು ವಿಧಿಸಬೇಕು. ಸಾರಿಗೆ ಇಲಾಖೆಯ ಕಚೇರಿಯಲ್ಲಿ ಮಧ್ಯವರ್ತಿಗಳ ಪ್ರವೇಶಕ್ಕೆ ನಿರ್ಬಂಧ ಹೇರಬೇಕು ಎಂದು ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಮುಂಚೆ ಸಾರಿಗೆ ಇಲಾಖೆ ಕಚೇರಿ ಬಹಳ ಹಳೆಯದಾಗಿತ್ತು. ಬಹು ದಿನಗಳಿಂದ ನೂತನ ಕಟ್ಟಡದ ಬೇಡಿಕೆ ಇತ್ತು. ಅದರಂತೆ ಸಿಎಂ ಸಿದ್ದರಾಮಯ್ಯ ಅನುಮೋದನೆಯೊಂದಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಶ್ರಮದಿಂದ ನಗರದಲ್ಲಿ ಸಾರಿಗೆ ಇಲಾಖೆ ನೂತನ ಕಟ್ಟಡ ಲೋಕಾರ್ಪಣೆಗೊಂಡಿದೆ. ಸಾರಿಗೆ ಇಲಾಖೆಗೆ ಇನ್ನು ಸಾಕಷ್ಟು ಕಾಯಕಲ್ಪ ನೀಡುವ ಯೋಜನೆಗಳಿವೆ. ಇಲಾಖೆಯಿಂದ ಸಾರ್ವಜನಿಕರಿಗೆ ಸಲಹೆ- ಸೂಚನೆ ಸೇರಿದಂತೆ ವಾಹನ ಚಾಲಕರಿಗೆ ಅಗತ್ಯ ತರಬೇತಿಗಳನ್ನು ನೀಡಬೇಕು. ವಾಹನ ಚಾಲನಾ ಪರವಾನಿಗೆ ನೀಡಲು ಇನ್ನಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿ ಪರವಾನಿಗೆ ನೀಡಬೇಕು. ಇದರಿಂದ ಅಪಘಾತಗಳ ಪ್ರಮಾಣ ಬಹಳಷ್ಟು ಕಡಿಮೆಯಾಗಲಿವೆ ಎಂದರು.ಹಳೆಯ ವಾಹನಗಳನ್ನು ಗುರುತಿಸಿ ಅಂತಹ ವಾಹನಗಳ ಆರ್.ಸಿ ನವೀಕರಣಕ್ಕೆ ಸೂಚನೆ ನೀಡಬೇಕು. ಸ್ಥಳೀಯವಾಗಿ ಟ್ರ್ಯಾಕ್ಟರ್‌ಗಳಲ್ಲಿ ಅತಿ ಬಾರ ಮತ್ತು ಅಧಿಕ ಸ್ಪೀಕರ್ ಬಳಸಿ ಸಾರ್ವಜನಿಕರಿಗೆ ಕಿರಿ-ಕಿರಿ ಮಾಡಲಾಗುತ್ತಿದೆ. ಅಂತಹ ವಾಹನಗಳನ್ನು ತಡೆದು ದಂಡ ವಿಧಿಸಬೇಕು. ಜಿಲ್ಲೆಯಲ್ಲಿ ಇನ್ನಷ್ಟು ಬಸ್ ನಿಲ್ದಾಣಗಳ ನಿರ್ಮಾಣದ ಅವಶ್ಯಕತೆ ಇದೆ. ಸರ್ಕಾರದ ಹಂತದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸ್ಥಳಗಳನ್ನು ಮಂಜೂರು ಮಾಡಲಾಗುವುದು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಸ್ಥಳಗಳನ್ನು ಬಳಸಿಕೊಂಡು ಅಗತ್ಯವಿರುವ ಸ್ಥಳಗಳಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಾರಿಗೆ ಇಲಾಖೆ ಯೋಜನೆಗಳನ್ನು ರೂಪಿಸಬಹುದು ಎಂದು ಸಲಹೆ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ರಾಜ್ಯದ 2ನೇ ರಾಜ್ಯಧಾನಿ ಎಂದು ಬೆಳಗಾವಿ ಜಿಲ್ಲೆ ಗುರುತಿಸಿಕೊಂಡಿದೆ. ಬಹಳ ದೊಡ್ಡದಾಗಿ ಜಿಲ್ಲೆಯ ವಿಸ್ತೀರ್ಣ ಇರುವುದರಿಂದ ಇನ್ನಷ್ಟು ಬಸ್‌ಗಳ ಸೌಲಭ್ಯದ ಅವಶ್ಯಕತೆ ಇದೆ. ನೂತನವಾಗಿ ನಿರ್ಮಾಣಗೊಂಡ ಸಾರಿಗೆ ಇಲಾಖೆ ಕಟ್ಟಡ ಸುಮಾರು ₹10 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು.

ಬೆಳಗಾವಿ ಉತ್ತರ ವಿಧಾನಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಸಾರಿಗೆ ಇಲಾಖೆಯ ಕಚೇರಿಯಲ್ಲಿ ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕ ಸೇರಿದಂತೆ ಇನ್ನಿತರ ಸಿಬ್ಬಂದಿ ಕೊರತೆ ಬಹಳಷ್ಟಿದೆ. ಸದ್ಯ ಇರುವ ಸಿಬ್ಬಂದಿ ಮೇಲಿರುವ ಹೊರೆ ಕಡಿಮೆ ಮಾಡಲು ಅದಷ್ಟು ಬೇಗ ಇನ್ನಷ್ಟು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಇದರಿಂದ ಮತ್ತಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಇಲಾಖೆಯ ಅಧಿಕಾರಿಗಳಿಗೆ ಸಹಾಯವಾಗಲಿದೆ. ಇಲಾಖೆಯ ಅಧಿಕಾರಿ, ಸಿಬ್ಬಂದಿ ವಾಹನ ಸವಾರರು ಹಾಗೂ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತಿಸಿ, ತ್ವರಿತವಾಗಿ ಸೇವೆಗಳನ್ನು ಒದಗಿಸಬೇಕು ಎಂದರು.ಶಾಸಕ ಮಹಾಂತೇಶ ಕೌಜಲಗಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ಯೋಗೀಶ್ ಎ.ಎಂ, ನಗರ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ ಬೊರಸೆ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಧಾರವಾಡ ಉತ್ತರದ (ಪ್ರವರ್ತನ) ಅಪರ ಸಾರಿಗೆ ಆಯುಕ್ತ ಕೆ.ಟಿ.ಹಾಲಸ್ವಾಮಿ, ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತರಾದ ಎಂ.ಪಿ.ಓಂಕಾರೇಶ್ವರಿ, ಬೆಳಗಾವಿ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗೇಶ್ ಮುಂಡಾಸ, ನಿವೃತ್ತ ಪ್ರಾದೇಶಿಕ ಸಾರಿಗೆ ಆಯುಕ್ತ ಶಿವಾನಂದ ಮಗದುಮ್ಮ, ಗುತ್ತಿಗೆದಾರ ಉದಯಕುಮಾರ ಆರ್. ಶೆಟ್ಟಿ ಸೇರಿದಂತೆ ಸಾರಿಗೆ ಇಲಾಖೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಜಿಲ್ಲೆಗೆ ಹೆಚ್ಚುವರಿ ಬಸ್ ಸೌಲಭ್ಯ

ಬೆಳಗಾವಿ ಜಿಲ್ಲೆಗೆ ಒಟ್ಟು 300 ಬಸ್‌ಗಳನ್ನು ನೀಡಲಾಗುವುದು. ಅದರಲ್ಲಿ ನಗರ ಸುತ್ತ-ಮುತ್ತ ಸಂಚಾರಕ್ಕೆ 100 ಎಲೆಕ್ಟ್ರಿಕ್ ಬಸ್‌ಗಳನ್ನು ಸಹ ಒದಗಿಸಲಾಗುವುದು. ಅದೇ ರೀತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ 50ಃ50 ಅನುಪಾತದಲ್ಲಿ ಸ್ಮಾರ್ಟ್ ಸಿಟಿಯೋಜನೆಯಡಿ ಸಿಟಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲಾಗುವುದು.

-ರಾಮಲಿಂಗಾರೆಡ್ಡಿ,
ಸಚಿವರು.ಜಿಲ್ಲೆಯ ಅಗತ್ಯ ಸ್ಥಳಗಳಿಗೆ ಬಸ್ ಸೌಲಭ್ಯ ಕಲ್ಪಿಸಲು ಸಚಿವರು, ಶಾಸಕರೊಂದಿಗೆ ಚರ್ಚಿಸಿ ಅಗತ್ಯ ಪಟ್ಟಿ ತಯಾರಿಸಲಾಗಿದೆ. ಜನರ ಬೇಡಿಕೆಯಂತೆ ಹೆಚ್ಚುವರಿಯಾಗಿ ಬಸ್‌ಗಳನ್ನು ಜಿಲ್ಲೆಗೆ ನೀಡಬೇಕು. ಅಂದಾಜು 500 ಬಸ್‌ಗಳನ್ನು ಜಿಲ್ಲೆಗೆ ನೀಡಿದಲ್ಲಿ ವಿದ್ಯಾರ್ಥಿಗಳ ಸಾರಿಗೆ ಸೌಲಭ್ಯಕ್ಕೆ ಅನುಕವಾಗಲಿದೆ.

-ಸತೀಶ ಜಾರಕಿಹೊಳಿ,

ಜಿಲ್ಲಾ ಉಸ್ತುವಾರಿ ಸಚಿವರು.ಸಾರಿಗೆ ಇಲಾಖೆಯ ಬಗ್ಗೆ ಸಾರ್ವಜನಿಕರಿಂದ ಮಧ್ಯವರ್ತಿಗಳ ಹಾವಳಿ ಇದೆ ಎಂದು ಆರೋಪವಿದೆ. ಹಾಗಾಗಿ ಮಧ್ಯವರ್ತಿಗಳ ಪ್ರವೇಶ ನಿರ್ಬಂಧಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತ್ವರಿತಗತಿಯಿಂದ ಇಲಾಖೆಯ ಸಿಬ್ಬಂದಿ ಸೇವೆಗಳು ಒದಗಿಸಬೇಕು.

-ಲಕ್ಷ್ಮೀ ಹೆಬ್ಬಾಳ್ಕರ್,
ಸಚಿವೆ.

PREV

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ