ನವಲಗುಂದ: ನಿರಂತರ ಮಳೆಯಿಂದ ರೈತನ ಸ್ಥಿತಿ ಚಿಂತಾಜನಕವಾಗಿದೆ. ಆಮ್ಲಜನಕದ ರೂಪದಲ್ಲಿ ಪರಿಹಾರ ಕೊಟ್ಟರೆ ರೈತ ಕುಟುಂಬ ಉಸಿರಾಡೋಕೆ ಸಾಧ್ಯವಿದೆ. ಇಲ್ಲದಿದ್ದರೆ ರೈತನ ಸ್ಥಿತಿ ಮತ್ತಷ್ಟು ವಿಷಮಗೊಳ್ಳಲಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು.
ಅವರು ಶನಿವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರಕ್ಕೆ ಸಚಿವರು ಕರೆದುಕೊಂಡು ಬಂದು ಪ್ರಚಾರ ಪಡೆಯುವುದು ಮುಖ್ಯವಲ್ಲ. ರೈತರಿಗೆ ಪರಿಹಾರ ಕೊಡಿಸುವುದು ಮುಖ್ಯವಾಗಿದೆ. ಅಧಿವೇಶನದಲ್ಲಿ ಕಾಲಹರಣ ಮಾಡಿ ಬಂದು, ಈಗ ಪ್ರಚಾರ ಪಡೆದರೆ ಏನುಪಯೋಗ ಎಂದು ಪ್ರಶ್ನಿಸಿದ ಮಾಜಿ ಸಚಿವರು, ತಕ್ಷಣವೇ ರೈತನ ಮನೆ ಮನೆಗೆ ಪರಿಹಾರ ತಲುಪಿಸಿ. ಹಾಗಾದರೇ ಮಾತ್ರ ವೀಕ್ಷಣೆ ಮಾಡಿ ಪ್ರಚಾರ ಪಡೆದಿದ್ದಕ್ಕೆ ಸಾರ್ಥಕವಾಗತ್ತೆ ಎಂದರು.ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ ಬೆಳೆಗಳು ಹಾಳಾಗಿವೆ. ಆದರೆ, ಅಧಿಕಾರಿಗಳು ಸಮರ್ಪಕವಾಗಿ ಸರ್ಕಾರಕ್ಕೆ ಮಾಹಿತಿಯನ್ನು ಕೊಟ್ಟಿಲ್ಲ. ಇದರಿಂದ ರೈತ ಕುಟುಂಬಕ್ಕೆ ತೊಂದರೆಯಾಗುತ್ತೆ. ಬಿದ್ದ ಮನೆಗಳಿಗೆ ಬಿಜೆಪಿ ಸರ್ಕಾರ ನೀಡಿದ್ದ ರೀತಿಯಲ್ಲಿ ಪರಿಹಾರವನ್ನು ಕೊಡಿ ಎಂದು ಆಗ್ರಹಿಸಿದರು.
ಕ್ಷೇತ್ರದ ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವಲ್ಲಿ ಅನ್ಯಾಯವಾಗಿದೆ. ಕೆಲವು ಪ್ರದೇಶದಲ್ಲಿ ಫಿಕ್ಸಿಂಗ್ ಮಾಡಿಕೊಂಡು ಪರಿಹಾರ ಕೊಡಲಾಗಿದೆ. ನೂರಾರು ಕೋಟಿ ರುಪಾಯಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಒತ್ತಾಯಿಸಿದರು.ನವಲಗುಂದ ಮಂಡಳದ ಅಧ್ಯಕ್ಷ ಗಂಗಣ್ಣ ಮನಮಿ ಮಾತನಾಡಿ, ರೈತರ ಬೆಳೆಗಳಿಗೆ ಹಾಗೂ ಬಿದ್ದ ಮನೆಗಳಿಗೆ ತಕ್ಷಣವೇ ಪರಿಹಾರ ನೀಡಬೇಕೆಂದು ಆಗ್ರಹಿಸಲು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಆ. 28 ರಂದು ಧರಣಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ನವಲಗುಂದ ಮಂಡಳ ಅಧ್ಯಕ್ಷ ಗಂಗಪ್ಪ ಮನಮಿ, ನಗರ ಘಟಕದ ಸಾಯಿಬಾಬಾ ಆನೇಗುಂದಿ ಉಪಸ್ಥಿತರಿದ್ದರು.