- ಅಡಕೆ ಬೆಳೆ ಪರಿಹಾರದಲ್ಲಿ ತಾರತಮ್ಯ ಬೇಡ: ವಿಶ್ವನಾಥ ತಾಕೀತು
ಕನ್ನಡಪ್ರಭ ವಾರ್ತೆ ದಾವಣಗೆರೆ
ತೀವ್ರ ಬರದ ಹಿನ್ನೆಲೆಯಲ್ಲಿ ಬರಪೀಡಿತ ಜಿಲ್ಲೆಯಾಗಿ ದಾವಣಗೆರೆ ಘೋಷಣೆಯಾಗಿದ್ದು, ಪ್ರತಿ ಎಕರೆಗೆ ₹50 ಸಾವಿರ ಬೆಳೆ ಹಾನಿ ಪರಿಹಾರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.ನಗರದ ಶ್ರೀ ಜಯದೇವ ವೃತ್ತದಲ್ಲಿ ಸಂಘದ ತಾಲೂಕು ಅಧ್ಯಕ್ಷ ಮಂಡಲೂರು ಎಂ.ವಿ. ವಿಶ್ವನಾಥ ನೇತೃತ್ವದಲ್ಲಿ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಘೋಷಣೆ ಕೂಗಿದರು. ಅನಂತರ ಸ್ಥಳಕ್ಕೆ ಭೇಟಿ ನೀಡಿದ್ದ ಉಪವಿಭಾಗಾಧಿಕಾರಿ ಕಚೇರಿಯ ಅಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ಕೇಂದ್ರ ಸರ್ಕಾರ ಅಡಕೆ ಬೆಳೆಗೆ ರೈತರು ವಿಮೆ ಹಣ ಕಟ್ಟಿದರೂ ಸರಿಯಾಗಿ ಪರಿಹಾರ ನೀಡುತ್ತಿಲ್ಲ. ಒಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ₹40-₹45 ಸಾವಿರ ಕೊಟ್ಟರೆ, ಮತ್ತೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಕೇವಲ ₹30 ಸಾವಿರ ಪರಿಹಾರ, ಮತ್ತೊಂದು ಕಡೆ ₹25 ಸಾವಿರ ಮಾತ್ರ ಪರಿಹಾರ ನೀಡಿದ್ದಾರೆ. ರೈತರಿಗೆ ಬೆಳೆವಿಮೆ ಹಣ ನೀಡುವಲ್ಲಿ ತಾರತಮ್ಯ ಮಾಡಿ ಕೇಂದ್ರ ಸರ್ಕಾರ ಅನ್ನದಾತರ ಆಕ್ರೋಶಕ್ಕೆ ಗುರಿಯಾಗಿದೆ. ಬರ ಹಿನ್ನೆಲೆಯಲ್ಲಿ ಬ್ಯಾಂಕು, ಖಾಸಗಿ ಸಾಲಗಾರರು ಸಾಲ ತೀರುವಳಿಗೆ ನೋಟೀಸ್ ನೀಡದಂತೆ ನಿರ್ಬಂಧಿಸಬೇಕು. ಬೆಳೆಹಾನಿ ಬಗ್ಗೆ ಸಮಗ್ರವಾಗಿ ಪರಿಶೀಲನೆ ಮಾಡಿ, ಎಲ್ಲ ರೈತರಿಗೂ ಸಮಾನವಾದ ಪರಿಹಾರ ಬಿಡುಗಡೆ ಮಾಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು ಎಂದು ಮಂಡಲೂರು ಎಂ.ವಿ. ವಿಶ್ವನಾಥ ತಾಕೀತು ಮಾಡಿದರು.
- - -
ದಾವಣಗೆರೆ ಶ್ರೀ ಜಯದೇವ ವೃತ್ತದಲ್ಲಿ ರೈತ ಸಂಘದ ಪ್ರತಿಭಟನೆ ವೇಳೆ ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿಗೆ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.