ಕ್ಷಯ ರೋಗಿಗಳಿಗೆ ಔಷಧಿ ಜತೆಗೆ ಸಾಮಾಜಿಕ ಸೌಲಭ್ಯ ಕಲ್ಪಿಸಿ: ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ

KannadaprabhaNewsNetwork |  
Published : Nov 22, 2024, 01:19 AM IST
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆ ನಡೆಯಿತು. | Kannada Prabha

ಸಾರಾಂಶ

ಪ್ರಸ್ತುತ ಜಿಲ್ಲೆಯಲ್ಲಿ 485 ಕ್ಷಯರೋಗಿಗಳು ಉಚಿತವಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಕ್ಷಯ ರೋಗಿಗಳಿಗೆ ಚಿಕಿತ್ಸೆ ಜತೆಗೆ ಆರೋಗ್ಯದ ಹಿತದೃಷ್ಟಿಯಿಂದ ಪೌಷ್ಟಿಕ ಆಹಾರದ ಅವಶ್ಯಕತೆ ಇದ್ದು, ಪೌಷ್ಟಿಕ ಆಹಾರ ವಿತರಿಸಲು ಸ್ವಯಂ ಪ್ರೇರಿತವಾಗಿ ಕೈಗಾರಿಕೆಗಳ ಮುಖ್ಯಸ್ಥರು, ಸಂಘ- ಸಂಸ್ಥೆಗಳ ದಾನಿಗಳು ಮುಂದೆ ಬರಬೇಕಿದೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಕ್ಷಯ ರೋಗಿಗಳಿಗೆ ಹಾಗೂ ಎಚ್.ಐ.ವಿ ಬಾದಿತರಿಗೆ ಅವಶ್ಯಕ ಔಷಧಿಗಳನ್ನು ಪೂರೈಸುವ ಜೊತೆಗೆ ತಪ್ಪದೇ ಸಾಮಾಜಿಕ ಸವಲತ್ತುಗಳ ಒದಗಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ ಸೂಚಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿರುವ ಕ್ಷಯ ರೋಗ ಹಾಗೂ ಎಚ್.ಐ.ವಿ. ಸೋಂಕಿತ, ಬಾದಿತರ ಸಂಖ್ಯೆಗೆ ಅನುಗುಣವಾಗಿ ಅವರಿಗೆ ಅವಶ್ಯಕವಾಗಿ ಬೇಕಾಗಿರುವ ಸಾಮಾಜಿಕ ಸವಲತ್ತುಗಳು ಮತ್ತು ಬೇಡಿಕೆಗಳ ಪಟ್ಟಿಯನ್ನು ಸಿದ್ಧಪಡಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಸಲ್ಲಿಸಿ. ಬಾದಿತರಿಗೆ ಸರ್ಕಾರದಿಂದ ಸಿಗುವ ಅಗತ್ಯ ಸಾಮಾಜಿಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಪ್ರಸ್ತುತ ಜಿಲ್ಲೆಯಲ್ಲಿ 485 ಕ್ಷಯರೋಗಿಗಳು ಉಚಿತವಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಕ್ಷಯ ರೋಗಿಗಳಿಗೆ ಚಿಕಿತ್ಸೆ ಜತೆಗೆ ಆರೋಗ್ಯದ ಹಿತದೃಷ್ಟಿಯಿಂದ ಪೌಷ್ಟಿಕ ಆಹಾರದ ಅವಶ್ಯಕತೆ ಇದ್ದು, ಪೌಷ್ಟಿಕ ಆಹಾರ ವಿತರಿಸಲು ಸ್ವಯಂ ಪ್ರೇರಿತವಾಗಿ ಕೈಗಾರಿಕೆಗಳ ಮುಖ್ಯಸ್ಥರು, ಸಂಘ- ಸಂಸ್ಥೆಗಳ ದಾನಿಗಳು ಮುಂದೆ ಬರಬೇಕಿದೆ ಎಂದರು.

ಜಿಲ್ಲೆಯಾದ್ಯಂತ ಕ್ಷಯ ಮುಕ್ತ ಭಾರತ ಅಭಿಯಾನದಡಿ 100 ದಿನಗಳ ವಿಶೇಷ ಆಂದೋಲನವನ್ನು ಹಮ್ಮಿಕೊಂಡಿದ್ದು, ನಿರ್ದಿಷ್ಟ ಪ್ರದೇಶಗಳ ಜನರನ್ನು ತಪಾಸಣೆಗೆ ಒಳಪಡಿಸಿ, ಕ್ಷೇತ್ರ ಕ್ಷಯರೋಗ ಪತ್ತೆಹಚ್ಚಲು ಕ್ರಮ ವಹಿಸಲಾಗುತ್ತಿದೆ. 40 ಗ್ರಾಪಂಗಳನ್ನು ಕ್ಷಯರೋಗ ಮುಕ್ತ ಮಾಡಲು ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, 30ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳು ಕ್ಷಯ ಮುಕ್ತ ಗ್ರಾಮ ಪಂಚಾಯಿತಿಗಳಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ ಎಂದರು.

ಇದೇ ಸಂದರ್ಭದಲ್ಲಿ ನಡೆದ ನಮ್ಮ ಕ್ಲಿನಿಕ್ ಗಳ ಕುಂದು ಕೊರತೆ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯಲ್ಲಿ 10 ನಮ್ಮ ಕ್ಲಿನಿಕ್ ಗಳು ಕಾರ್ಯನಿರ್ವಹಿಸುತ್ತಿದ್ದು. ಸಣ್ಣ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರೋಗ್ಯ ಕಾಪಾಡಲು ಸಹಾಯವಾಗುತ್ತಿವೆ. ಸಾರ್ವಜನಿಕರು ನಮ್ಮ ಕ್ಲಿನಿಕ್ ನಲ್ಲಿ ದೊರೆಯುವ ಆರೋಗ್ಯ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುನಿಲ್ ಕುಮಾರ್ ಎಂ.ಸಿ, ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ನಾಗೇಶ್, ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಗಳು, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!