ಅರಸೀಕೆರೆ: ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವ ಹೊಣೆ ಸಾರಿಗೆ ಅಧಿಕಾರಿಗಳ ಮೇಲಿದ್ದು, ದೂರುಗಳು ಕೇಳಿ ಬಂದರೆ ಸಹಿಸುವುದಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಹೇಳಿದರು.
ತಾಲೂಕು ಪಂಚಾಯಿತಿ ಕಚೇರಿ ಸಾಮರ್ಥ್ಯ ಸೌಧದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶಕ್ಕೆ ಸಕಾಲದಲ್ಲಿ ಬಸ್ಸುಗಳು ಬರುತ್ತಿಲ್ಲ ಎನ್ನುವ ದೂರುಗಳಿವೆ. ಅನ್ಯ ಮಾರ್ಗವಿಲ್ಲದೇ ದುಪ್ಪಟ್ಟು ಹಣ ಕೊಟ್ಟು ಆಟೋ, ಕ್ರೂಜರ್ ಸೇರಿದಂತೆ ಖಾಸಗಿ ವಾಹನಗಳ ಮೊರೆ ಹೋಗುವಂತಾಗಿದ್ದು ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಹೆಚ್ಚಿನ ಬಸ್ಸುಗಳ ಅಗತ್ಯವಿದ್ದರೆ ಶಾಸಕ ಕೆ.ಎಂ.ಶಿವಲಿಂಗೇಗೌಡರನ್ನು ಭೇಟಿಯಾಗಿ ಮಾಹಿತಿ ನೀಡಬೇಕು. ಮುಂದಿನ ದಿನಗಳಲ್ಲಿ ಇಂತಹ ದೂರುಗಳು ಬರದಂತೆ ನೋಡಿಕೊಳ್ಳಬೇಕು. ಅರಸೀಕೆರೆ, ಜಾವಗಲ್ ಗ್ರಾಮದ ನಡುವೆ ಪ್ರತಿನಿತ್ಯ ಸಂಚರಿಸುವ ಬಸ್ಸುಗಳು ಕಡ್ಡಾಯವಾಗಿ ಹಾರನಹಳ್ಳಿ ಮಧ್ಯೆ ನಿಲ್ದಾಣಕ್ಕೆ ಹೋಗಿ ಬರುವಂತೆ ಚಾಲಕರು ಹಾಗೂ ನಿರ್ವಾಹಕರಿಗೆ ಸೂಚಿಸಬೇಕು ಎಂದು ಡಿಪೋ ವ್ಯವಸ್ಥಾಪಕ ಕೃಷ್ಣಪ್ಪ ಅವರಿಗೆ ಸೂಚಿಸಿದರು. ಸದಸ್ಯ ಜಾಜೂರು ಸಿದ್ದೇಶ್ ದನಿಗೂಡಿಸಿದರು.ವಿದ್ಯಾನಿಧಿ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮೀ ಯೋಜನೆಗಳು ಅರ್ಹರಿಗೆ ತಲುಪುವಂತೆ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಧರ್ಮಶೇಖರ್ ವಿವರ ನೀಡಿದರು.
ಉಪಾಧ್ಯಕ್ಷ ಜವನಪ್ಪ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬ ಸದಸ್ಯರಿಗೆ ಫೆಬ್ರವರಿಯಿಂದ ತಲಾ ಹತ್ತು ಕೆಜಿ ಅಕ್ಕಿ ಕೊಡುತ್ತಿದೆ. ಯೋಜನೆ ದುರ್ಬಳಕೆ ಆಗದಂತೆ ಎಚ್ಚರ ವಹಿಸಬೇಕು. ಆಗ ಮಾತ್ರವೇ ಯೋಜನೆ ಸಫಲವಾಗುತ್ತದೆ ಎಂದರು.ಆಹಾರ ಶಿರಸ್ತೇದಾರ್ ಬಾಲಚಂದ್ರು ಉತ್ತರಿಸಿ, ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗೆ ತೊಂದರೆಯಾಗಿಲ್ಲ.ದೂರುಗಳು ಬಂದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ತಾಪಂ ಇಒ ಸತೀಶ್, ಗ್ಯಾರಂಟಿ ಸಮಿತಿ ಸದಸ್ಯರಾದ ಕೆಸಿಡಿ ಕುಮಾರ್, ಕಮಲಮ್ಮ, ಪುರುಷೋತ್ತಮ, ವಿರೂಪಾಕ್ಷ, ಚಾಂದ್ ಪಾಷಾ ಇತರರಿದ್ದರು.