ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ಸೇವೆ ಒದಗಿಸುವೆ

KannadaprabhaNewsNetwork | Published : Mar 27, 2025 1:06 AM

ಸಾರಾಂಶ

ಸೊರಬ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಜ್ಞ ವೈದ್ಯರು, ಕ್ಷ- ಕಿರಣ ಯಂತ್ರ, ಡಯಾಲಿಸಿಸ್ ಯಂತ್ರ ಸೇರಿದಂತೆ ಅಗತ್ಯವಿರುವ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸುತ್ತೇನೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.

ಸೊರಬ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಜ್ಞ ವೈದ್ಯರು, ಕ್ಷ- ಕಿರಣ ಯಂತ್ರ, ಡಯಾಲಿಸಿಸ್ ಯಂತ್ರ ಸೇರಿದಂತೆ ಅಗತ್ಯವಿರುವ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸುತ್ತೇನೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ತಾಲೂಕು ಆರೋಗ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರು ಸೇರಿದಂತೆ ಇತರೆ ತಜ್ಞರನ್ನು ನೇಮಿಸಲು ಸೂಕ್ತ ಕ್ರಮ ವಹಿಸಬೇಕು. ತಜ್ಞರೋರ್ವರು ದೀರ್ಘ ರಜೆಯಲ್ಲಿದ್ದಾರೆ. ಖಾಲಿ ಎಂದು ತೋರಿಸಿದರೆ ಮಾತ್ರ ಕೌನ್ಸೆಲಿಂಗ್‌ನಲ್ಲಿ ಬೇರೆ ತಜ್ಞ ವೈದ್ಯರನ್ನು ನೇಮಿಸಬಹುದು. ಆದ್ದರಿಂದ ಈ ಕುರಿತು ಸೂಕ್ತವಾದ ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.ಆಸ್ಪತ್ರೆಯಲ್ಲಿರುವ ಪ್ರಸ್ತುತ ಎಕ್ಸ್ ರೇ ಮಷೀನ್ ಹಾಳಾಗಿದ್ದು, ಸುಮಾರು ೧೬ ರಿಂದ ೧೭ ಲಕ್ಷ ರು. ವೆಚ್ಚದ ಎಕ್ಸ್ ರೇ ಯಂತ್ರ ಅಗತ್ಯವಿದೆ. ಅದನ್ನು ಸಿಎಸ್‌ಆರ್ ಫಂಡ್‌ನಲ್ಲಿ ಖರೀದಿಸಲು ಕ್ರಮ ವಹಿಸಲಾಗುವುದು. ಹಾಗೆಯೇ ದಂತ ಚಿಕಿತ್ಸೆಗೆ ಅಗತ್ಯವಿರುವ ಪೋರ್ಟಬಲ್ ಕ್ಷ-ಕಿರಣ ಯುನಿಟ್‌ನ್ನು ತರಿಸಲಾಗುವುದು ಎಂದು ಹೇಳಿದರು.

ಡಯಾಲಿಸಿಸ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಸ್ತುತ ೩ ಪಾಳಿಯ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ ೨ ಮಷಿನ್ ಅವಶ್ಯಕತೆ ಇದೆ. ಇದನ್ನು ಖರೀದಿಸಲು ಹಾಗೂ ಆಸ್ಪತ್ರೆಯಲ್ಲಿ ೨ ಅಂಬುಲೆನ್ಸ್ ಇದ್ದು ಸಾಕಾಗುತ್ತಿಲ್ಲ. ಹೆಚ್ಚುವರಿಯಾಗಿ ೧ ಆಂಬುಲೆನ್ಸ್ ಬೇಕೆಂದು ಕೇಳಿದ್ದು, ಇವುಗಳನ್ನು ಖರೀದಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇನೆ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಎಚ್‌ಟಿ ಕ್ಯುಬಿಕಲ್ ಅಳವಡಿಕೆ ಹಾಗೂ ಆಸ್ಪತ್ರೆ ವಸತಿಗೃಹ ವಿದ್ಯುತ್ ಸಂಪರ್ಕದ ಸಮಸ್ಯೆ ಸರಿಪಡಿಸಲು ಅಗತ್ಯವಿರುವ ಅಂದಾಜು ವೆಚ್ಚ ಸಿದ್ಧಪಡಿಸಿ ನೀಡುವಂತೆ ಸೂಚಿಸಿದರು.

ಈ ವೇಳೆ ೮ ವಸತಿ ಗೃಹಗಳು ಬೇಕೆಂದು ವೈದ್ಯಾಧಿಕಾರಿಗಳು ಸಚಿವರಿಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಅಗತ್ಯವಿರುವ ಅಂದಾಜು ವೆಚ್ಚ ನೀಡಿದರೆ ಇಲಾಖೆಯ ಅಧಿಕಾರಿಗಳೊಂದಿಗೆ ನಾನೇ ವೈಯಕ್ತಿಕವಾಗಿ ಮಾತನಾಡುತ್ತೇನೆ ಎಂದು ಹೇಳಿದ್ದರಲ್ಲದೇ, ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗಿರುವ ಸೇವೆ ಸೌಲಭ್ಯಗಳ ಕುರಿತು ಸಂಬಂಧಿಸಿದ ಅಧಿಕಾರಿಗಳು, ಸರ್ಕಾರದೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಒದಗಿಸುವುದಾಗಿ ತಿಳಿಸಿದರು.

ಡಿಹೆಚ್‌ಒ ಡಾ. ನಟರಾಜ್, ತಾಲೂಕು ವೈದ್ಯಾಧಿಕಾರಿ ಡಾ. ನವೀನ್, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಪ್ರಭು ಸಾಹುಕಾರ್, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಇದ್ದರು.

Share this article