ಹಾವೇರಿ: ಅಂಗವಿಕಲ ವ್ಯಕ್ತಿಗಳ ಹಕ್ಕುಗಳನ್ನು ಸಂರಕ್ಷಿಸುವುದರ ಜತೆಗೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಹಾಗೂ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.ಸ್ಥಳೀಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರ ಅಂಗವಿಕಲ ವ್ಯಕ್ತಿಗಳ ಮೂಲಭೂತ ಹಕ್ಕಿನ ಬಗ್ಗೆ ಅರಿವು ಮೂಡಿಸುವ ಸುಗಮ್ಯ ಯಾತ್ರಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಎಂಎಸ್‌ಜೆ ಮತ್ತು ಇ ಮಂತ್ರಾಲಯವು ಅಂಗವಿಕಲರ ಕಲ್ಯಾಣಕ್ಕಾಗಿ ಸುಗಮ್ಯ ಯಾತ್ರಾ ಅಭಿಯಾನ ರಾಷ್ಟ್ರಾದ್ಯಂತ ಆಯೋಜಿಸಿದೆ ಎಂದರು.ಸರ್ಕಾರಿ ಕಚೇರಿಗಳು, ಸಾರ್ವಜನಿಕ ಕಟ್ಟಡಗಳು, ಮನರಂಜನೆ ಸ್ಥಳ, ಉದ್ಯಾನವನ, ಗ್ರಂಥಾಲಯ, ಮಾರುಕಟ್ಟೆ, ಪ್ರವಾಸಿತಾಣ ಮೊದಲಾದ ಸ್ಥಳಗಳಲ್ಲಿ ಅಡೆತಡೆ ರಹಿತ ವಾತಾವರಣದ ಬಗ್ಗೆ ಮಾಹಿತಿ ಸಂಗ್ರಹಣೆ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಸುಗಮ್ಯ ಯಾತ್ರಾ ಅಭಿಯಾನದ ಮಹತ್ವದ ಉದ್ದೇಶವಾಗಿದೆ ಎಂದರು.ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಕಲ್ಯಾಣಾಧಿಕಾರಿ ಆಶು ನದಾಫ್ ಹಾಗೂ ಇತರರು ಇದ್ದರು. ಅಂಗವಿಕಲರು ಸಮಾಜಮುಖಿಯಾಗಿ ಬದುಕಲಿ
ಶಿಗ್ಗಾಂವಿ: ಅಂಗವಿಕಲ ಮಕ್ಕಳಲ್ಲಿ ಅಡಗಿದ ಅವ್ಯಕ್ತ ಪ್ರತಿಭೆಯನ್ನು ಹೊರಹೊಮ್ಮಿಸಿ ಅಂಥವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಜವಾಬ್ದಾರಿಯುತ ಸಮಾಜದ ಲಕ್ಷಣ ಎಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ವಿವೇಕ ಜೈನಕೇರಿ ತಿಳಿಸಿದರು.ಪಟ್ಟಣದ ಶ್ರೀ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಕಿವುಡ- ಮೂಕ ಮಕ್ಕಳ ಶಾಲೆಯಲ್ಲಿ ಪಾಲಕರ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಅಂಗವಿಕಲತೆ ಅಸಹಾಯಕತೆಯಲ್ಲ, ಅದು ನಮಗೆ ದೇವರು ಕೊಟ್ಟ ವರ ಎಂದು ಭಾವಿಸಿ ಸಮಾಜಮುಖಿಯಾಗಿ ಬದುಕಬೇಕೆಂದು ತಿಳಿಸಿದರು.ಜಿಲ್ಲಾ ಆಸ್ಪತ್ರೆಯ ವಾಕ್‌ಶ್ರವಣ ತಜ್ಞ ಶ್ರೀವತ್ಸ ಮಾತನಾಡಿ, ಸರ್ಕಾರದಿಂದ ಕೊಡಮಾಡುವ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕೆಂದರು.ಶಾಲೆಯ ಮುಖ್ಯೋಪಾಧ್ಯಾಯ ಎಂ.ಬಿ. ನೀರಲಗಿ ಮಾತನಾಡಿ, ಕಿವುಡ- ಮೂಕ ಮಕ್ಕಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಈ ಶಾಲೆಯಲ್ಲಿ ಪ್ರವೇಶ ಪಡೆಯುವ ಮೂಲಕ ತಮ್ಮ ಬದುಕು ರೂಪಿಸಿಕೊಳ್ಳಬೇಕೆಂದರು.
ಪ್ರಾಚಾರ್ಯ ಡಾ. ನಾಗರಾಜ ಜಿ. ದ್ಯಾಮನಕೊಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವರಾಜ ಗುಳೇದಕೇರಿ, ಜಿ.ಜಿ. ಕೋಟಿ, ಮಂಜುನಾಥ ಹುಣಸಿಮರದ, ಶಕುಂತಲಾ ಆರಾಧ್ಯಮಠ, ರೇಖಾ ದಳವಾಯಿ, ಜ್ಯೋತಿ ಮಹಾರಾಜಪೇಟ ಮುಂತಾದವರು ಪಾಲ್ಗೊಂಡಿದ್ದರು.