ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕೆಲಸ: ರಾಜು ಗುಡಿಮನಿ

KannadaprabhaNewsNetwork |  
Published : Oct 28, 2025, 12:44 AM IST
ಕಾರ್ಯಕ್ರಮದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಜೀವನದಲ್ಲಿ ದುಡ್ಡು ಗಳಿಸುವುದು ಮುಖ್ಯವಲ್ಲ, ಗಳಿಸಿದ ಹಣದಲ್ಲಿ ನಾವೆಷ್ಟು ಜನರಿಗೆ ಒಳ್ಳೆಯದನ್ನು ಮಾಡಿದ್ದೇವೆ ಎನ್ನುವುದು ಮುಖ್ಯವಾಗಿದೆ.

ಗದಗ: ಸಕಲ ದಾನಗಳಲ್ಲಿ ಅನ್ನದಾನ ಶ್ರೇಷ್ಠವಾಗಿದೆ. ನಾವೆಷ್ಟೆ ಸಿರಿವಂತರಾದರೂ ಹಸಿದು ಬಂದವರಿಗೆ ಒಂದು ತುತ್ತು ಅನ್ನ ನೀಡದಿದ್ದರೆ ಗಳಿಸಿದ ಸಂಪತ್ತು ಶೂನ್ಯಕ್ಕೆ ಸಮಾನ ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ನೂತನ ಅಧ್ಯಕ್ಷ ರಾಜು ಗುಡಿಮನಿ ತಿಳಿಸಿದರು.ನಗರದ ಮಹಾತ್ಮ ಗಾಂಧಿ ವೃತ್ತದ ಬಳಿಯ ಹಳೇ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ(₹5ಕ್ಕೆ ಹೊಟ್ಟೆ ತುಂಬಾ ಊಟ ಖ್ಯಾತಿಯ) ಶ್ರೀ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜೀವನದಲ್ಲಿ ದುಡ್ಡು ಗಳಿಸುವುದು ಮುಖ್ಯವಲ್ಲ, ಗಳಿಸಿದ ಹಣದಲ್ಲಿ ನಾವೆಷ್ಟು ಜನರಿಗೆ ಒಳ್ಳೆಯದನ್ನು ಮಾಡಿದ್ದೇವೆ ಎನ್ನುವುದು ಮುಖ್ಯವಾಗಿದೆ. ನಗರದಲ್ಲಿ ಹಸಿದವರಿಗೆ ಅನ್ನ ನೀಡುವ ಮೂಲಕ ಪುಣ್ಯದ ಕೆಲಸ ಮಾಡುತ್ತಿರುವ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯದ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ರಾಷ್ಟ್ರಪತಿ ಪದಕ ಪುರಸ್ಕೃತ, ಪಿಎಸ್‌ಐ ಮಾರುತಿ ಜೋಗದಂಡಕರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ನಗರದಲ್ಲಿ ಹಸಿದು ಬಂದವರಿಗೆ ಬರೀ ₹5ಕ್ಕೆ ಹೊಟ್ಟೆ ತುಂಬಾ ಊಟ ನೀಡುತ್ತಿರುವುದು ನಿಜವಾಗಿಯೂ ಹೆಮ್ಮೆಯ ವಿಷಯವಾಗಿದೆ. ಈ ಕಾರ್ಯವನ್ನು ನಿರಂತರವಾಗಿ ನಡೆಸುತ್ತ ಬಂದಿರುವ ಆಡಳಿತ ಮಂಡಳಿ ಸೇವೆಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಜಯದೇವ ಮೆಣಸಗಿ, ಪ್ರಕಾಶ ಉಗಲಾಟದ, ಸಹ ಗೌರವ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಶೋಕ ಸಂಕಣ್ಣವರ ಅವರನ್ನು ಸನ್ಮಾನಿಸಲಾಯಿತು. ಅನ್ನಪೂರ್ಣೇಶ್ವರಿ ಪ್ರಸಾದ ನಿಲಯದ ಗೌರವಾಧ್ಯಕ್ಷ ಎಸ್.ಎಸ್. ಕಳಸಾಪೂರ, ಉಪಾಧ್ಯಕ್ಷ ಉಮೇಶ ಪೂಜಾರ, ಹಿರಿಯರಾದ ಮರಿಗುದ್ದಿ, ಪತ್ರಿಮಠ, ಸದಸ್ಯರಾದ ರಾಜಣ್ಣ ಮಲ್ಲಾಡದ, ಮುತ್ತು ಜಡಿ, ಸಮಾಜ ಸೇವಕ ಎಚ್.ಬಿ. ಸಿಂಗ್ರಿ, ನಿಲಯದ ಮೇಲ್ವಿಚಾರಕಿ ವಿಶಾಲಾಕ್ಷಿ ಬಡಿಗೇರ ಸೇರಿದಂತೆ ಮುಂತಾದವರು ಇದ್ದರು. ಪ್ರಸಾದನಿಲಯದ ಖಜಾಂಚಿ ವೆಂಕಟೇಶ ಇಮರಾಪೂರ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಕೈಜೋಡಿಸಿ
ಹೊಲಗಳಲ್ಲಿ ಚರಗ ಚೆಲ್ಲಿ ಹಬ್ಬ ಆಚರಿಸಿದ ಅನ್ನದಾತರು