ತುಮಕೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಮ್ಮೂರು, ನಮ್ಮ ಕೆರೆ ಕಾರ್ಯಕ್ರಮದಲ್ಲಿ ಅಂತರ್ಜಲ ವೃದ್ದಿಯಾಗುವುದರ ಜೊತೆಗೆ, ದನ, ಕರು, ಪ್ರಾಣಿ, ಪಕ್ಷ, ಜಲಚರಗಳಿಗೆ ಜೀವಜಲ ಒದಗಿಸಿದಂತಾಗುತ್ತದೆ. ಇದೊಂದು ಪುಣ್ಯದ ಕೆಲಸ ಎಂದು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.ಚಿಕ್ಕನಾಯಕನಹಳ್ಳಿ ತಾಲೂಕಿನ ಮುದ್ದನಹಳ್ಳಿ ಮಂಗಳಕಟ್ಟೆಕೆರೆ ನಮ್ಮೂರು ನಮ್ಮ ಕೆರೆ ಯೋಜನೆ ಅಡಿಯಲ್ಲಿ ಜೀರ್ಣೋದ್ಧಾರಗೊಂಡ ಕೆರೆಯ ಹಸ್ತಾಂತರ ಹಾಗೂ ನಾಮಫಲಕ ಅಳವಡಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತುಂಬಿದ ಕೆರೆಗೆ ಬಾಗಿನ ಆರ್ಪಿಸಿ ಮಾತನಾಡಿದರು.
ಕೆರೆಗಳಲ್ಲಿ ಹೂಳು ತುಂಬಿ ಕೆರೆಯ ವಿಸ್ತೀರ್ಣಕ್ಕೂ, ಅದರ ನೀರು ಸಾಮರ್ಥ್ಯಕ್ಕೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ. ಇದರಿಂದ ಸಣ್ಣ ಮಳೆ ಬಂದರೂ ಕೆರೆ ಕೋಡಿ ಬಿಳುತ್ತದೆ. ಆದರೆ ಬೇಸಿಗೆಗೂ ಮೊದಲೇ ಕೆರೆ ಒಣಗಿ ಹೋಗಿ ಜನರು ಜನ, ಜಾನುವಾರುಗಳ ಕುಡಿಯುವ ನೀರಿಗೆ ಪರಿತಪಿಸಬೇಕಾಗುತ್ತದೆ. ಇದನ್ನು ಮನಗಂಡು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೆರೆಗಳ ಹೂಳೆತ್ತುವ ಕೆಲಸ ಕೈಗೊಂಡು ಗ್ರಾಮೀಣ ಜನರಿಗೆ ನೆರವಾಗುತ್ತಿದ್ದಾರೆ. ಇದುವರೆಗೂ ರಾಜ್ಯದಲ್ಲಿ 856 ಕೆರೆಗಳ ಅಭಿವೃದ್ದಿ ಮಾಡಿದ್ದಾರೆ. ಇದೊಂದು ಸುತ್ಯಾರ್ಹ ಕೆಲಸ ಎಂದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಸಾಮೂಹಿಕ ವಿವಾಹ, ಮಧ್ಯಪಾನ ವರ್ಜನ ಶಿಬಿರ, ದೇವಾಲಯ ಜೀರ್ಣೋದ್ದಾರ, ಶಾಲಾ ಕಟ್ಟಡ, ಶೌಚಾಲಯ, ಸ್ಮಶಾನ ನಿರ್ಮಾಣ ಹೀಗೆ ಹತ್ತು ಹಲವು ಯೋಜನೆಗಳು ಜಾರಿಯಲ್ಲಿರುವುದನ್ನು ಕಾಣಬಹುದು. ಪರ್ಯಾಯ ಸರ್ಕಾರದ ರೀತಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆ. ಇವರ ವಿರುದ್ದ ಕೆಲವರು ಅಪಪ್ರಚಾರ ಮಾಡುತಿದ್ದು, ಇದಕ್ಕೆ ಜನರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬದಲಾಗಿ ಇವರ ಕಾರ್ಯದಲ್ಲಿ ನಾವು ಕೂಡ ಕೈಜೋಡಿಸಬೇಕಿದೆ. ಅಪಪ್ರಚಾರ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಧರ್ಮಸ್ಥಳ ಯೋಜನೆ ಪ್ರಾದೇಶಿಕ ನಿರ್ದೇಶಕ ಶ್ರೀನಪ್ಪ.ಎಂ. ಮಾತನಾಡಿ, ನಮ್ಮೂರು ನಮ್ಮಕೆರೆ ಯೋಜನೆ ಅಡಿಯಲ್ಲಿ ಇದುವರೆಗೂ ರಾಜ್ಯದಲ್ಲಿ 55 ಕೋಟಿ ರು. ಖರ್ಚು ಮಾಡಿ ಸುಮಾರು 856 ಕೆರೆಗಳನ್ನು ಅಭಿವೃದ್ದಿ ಪಡಿಸಲಾಗಿದೆ. ತುಮಕೂರು ಜಿಲ್ಲೆಯ 58 ಕೆರೆಗಳು ಪುನಶ್ಚೇತನಗೊಂಡಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನ 7ನೇ ಕೆರೆ ಇದಾಗಿದೆ. ಮುದ್ದೇನಹಳ್ಳಿ ಮಂಗಳಕಟ್ಟೆ ಕೆರೆಯನ್ನು ಸುಮಾರು 8 ಲಕ್ಷ ರು. ಅಭಿವೃದ್ದಿ ಪಡಿಸಲಾಗಿದೆ. ಕೆರೆ ಪುನಶ್ಚೇತನ ಸಂದರ್ಭದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ರೈತರು ಗೋಡು ಮಣ್ಣನ್ನು ತಮ್ಮ ತೋಟಗಳಿಗೆ ತೆಗೆದುಕೊಂಡು ಹೋಗಿದ್ದಾರೆ. ಈ ಕೆರೆಯಿಂದ ಸುಮಾರು 3 ಲಕ್ಷ ಕುಟುಂಬಗಳಿಗೆ ನೀರಾವರಿ ದೊರೆಯಲಿದೆ. 62 ಸಾವಿರ ಕೊಳವೆ ಬಾವಿಗಳ ಅಂತರಜಲ ವೃದ್ದಿಯಾಗಲಿದೆ ಎಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರಯ್ಯ, ಕೃಷಿ ಮೇಲ್ವಿಚಾರಕ ಯೋಗೀಶ್, ಯೋಜನಾಧಿಕಾರಿ ಪ್ರೇಮಾನಂದ, ಸೇವಾ ಪ್ರತಿನಿಧಿ ಮಾರುತಿ, ಜಿಲ್ಲಾ ನಿರ್ದೇಶಕ ದಿನೇಶ್, ಮುದ್ದೇನಹಳ್ಳಿ ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷ ಎಂ.ಆರ್.ಮುರುಳುಸಿದ್ದಪ್ಪ, ನಿವೃತ್ತ ಮುಖ್ಯ ಶಿಕ್ಷಕ ಕರಿಯಪ್ಪ, ಪ್ರಗತಿಪರ ರೈತರಾದ ರಂಗಸ್ವಾಮಿ, ಮೇಲ್ವಿಚಾರಕರಾದ ಭಾಸ್ಕರ್ ಮತ್ತಿತರರು ಇದ್ದರು.