ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಮುಷ್ಕರ

KannadaprabhaNewsNetwork | Published : Feb 11, 2025 12:46 AM

ಸಾರಾಂಶ

ಕೆಲಸ ಮಾಡಲು ಅಗತ್ಯವಿರುವ ಕುರ್ಚಿ, ಟೇಬಲ್, ಸುಸಜ್ಜಿತ ಕಚೇರಿ, ಲ್ಯಾಪ್ ಟಾಪ್, ಪ್ರಿಂಟರ್, ಸ್ಕ್ಯಾನರ್ ಇದ್ಯಾವುದೂ ಇಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ

ಕನ್ನಡಪ್ರಭ ವಾರ್ತೆ ಹುಣಸೂರು

ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸುವುದು, ಅಂತರ ಜಿಲ್ಲಾ ವರ್ಗಾವಣೆ ಮತ್ತು ಪದೋನ್ನತಿಯನ್ನು ಮರುಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಸದಸ್ಯರು ಸೋಮವಾರ 2ನೇ ಹಂತದ ಅನಿರ್ದಿಷ್ಟಾವದಿ ಮುಷ್ಕರ ಆರಂಭಿಸಿದರು.ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ತಾಲೂಕಿನ 30 ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಆಗ್ರಹಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು.ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ತೀರ್ಥಗಿರಿಗೌಡ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಕನಿಷ್ಠ ಸೌಲಭ್ಯಗಳೂ ಇಲ್ಲದೇ ದುಡಿಯುತ್ತಿದ್ದೇವೆ. ಕೆಲಸ ಮಾಡಲು ಅಗತ್ಯವಿರುವ ಕುರ್ಚಿ, ಟೇಬಲ್, ಸುಸಜ್ಜಿತ ಕಚೇರಿ, ಲ್ಯಾಪ್ ಟಾಪ್, ಪ್ರಿಂಟರ್, ಸ್ಕ್ಯಾನರ್ ಇದ್ಯಾವುದೂ ಇಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.ರಾಜ್ಯ ಸರ್ಕಾರ ವೆಬ್ ತಂತ್ರಾಂಶದ ಮೂಲಕ ಹಲವು ಸೇವೆಗಳನ್ನು ನೀಡುತ್ತಿದೆ. ಕಂದಾಯ ಇಲಾಖೆಯಲ್ಲಿ ಸಂಯೋಜನೆ, ಇ ಆಫೀಸ್, ಲ್ಯಾಂಡ್ ಬೀಟ್, ದಿಶಾಂಕ್, ನೀರಾವರಿ ಗಣತಿ, ಬೆಳೆ ಸಮೀಕ್ಷೆ ಸೇರಿದಂತೆ 21 ಹೆಚ್ಚು ಸೇವೆಗಳನ್ನು ನಮ್ಮ ಸ್ವಂತ ಮೊಬೈಲ್‌ನಲ್ಲೇ ಮಾಡಬೇಕಿದ್ದು, ಸರ್ಕಾರ ಮೊಬೈಲ್ ಒದಗಿಸದಿರುವ ಕಾರಣ ನಮ್ಮ ಸ್ವಂತ ಖರ್ಚಿನಲ್ಲಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅವರು ಬೇಸರಿಸಿದರು.3 ವರ್ಷಗಳ ಹಿಂದೆ ರಾಜ್ಯ ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳ ಅಂತರ ಜಿಲ್ಲಾ ವರ್ಗಾವಣೆ ಪದ್ಧತಿಯನ್ನ ರದ್ದುಪಡಿಸಿದೆ. ಇದರಿಂದಾಗಿ ನಮ್ಮ ಕುಟುಂಬದವರು, ವಯೋವೃದ್ಧ ತಂದೆ- ತಾಯಿಯರನ್ನು ನೋಡದ ಪರಿಸ್ಥಿತಿ ಎದುರಾಗಿದೆ. 4 ವರ್ಷದಿಂದ ಭಡ್ತಿ ಇಲ್ಲ. ಕೆಲಸದ ಒತ್ತಡ ಹೆಚ್ಚಾದ ಕಾರಣ ನಮ್ಮ ಆರೋಗ್ಯವೂ ಕೈಕೊಡುತ್ತಿದೆ ಎಂದರು.4 ತಿಂಗಳ ಹಿಂದೆ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಕೋರಿ ರಾಜ್ಯಾದ್ಯಂತ ಮುಷ್ಕರ ನಡೆಸಿದ ವೇಳೆ ರಾಜ್ಯ ಸರ್ಕಾರ ಎಲ್ಲವನ್ನು ಪರಿಹರಿಸುವುದಾಗಿ ಭರವಸೆ ನೀಡಿತ್ತು. ಆದರೆ, ಈವೆರೆಗೆ ಸಮಸ್ಯೆ ಪರಿಹಾರ ಕಂಡಿಲ್ಲ. ಅಂದು ಮುಷ್ಕರದಲ್ಲಿ ಪಾಲ್ಗೊಂಡವರಿಗೆ ವಾರ್ಷಿಕ ವೇತನ ಭತ್ಯೆ ತಡೆ ಹಿಡಿದು ಭಯ ಹುಟ್ಟಿಸಲಾಗುತ್ತಿದೆ. ನಾವು ವೇತನ ಹೆಚ್ಚಳ ಕೇಳುತ್ತಿಲ್ಲ. ಬದಲಾಗಿ ಕನಿಷ್ಟ ಮೂಲಸೌಕರ್ಯಗಳನ್ನು ಕಲ್ಪಿಸಲು ಕೋರುತ್ತಿದ್ದೇವೆ ಎಂದು ಅವರು ಹೇಳಿದರು.ಇದೀಗ ಕೇಂದ್ರ ಸಂಘದ ನಿರ್ಣಯದಂತೆ ರಾಜ್ಯಾದ್ಯಂತ ಅಧಿಕಾರಿಗಳು ಒಂದು ತಿಂಗಳ ಪರಿವರ್ತಿತ ರಜೆ ಹಾಕಿ 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದೇವೆ. ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.ಸಂಘದ ಉಪಾಧ್ಯಕ್ಷೆ ಚೈತ್ರಾ, ಶ್ರೀವರ್ಷ, ನಾಗರಾಜು, ಸುಬ್ರಮಣ್ಯ ಮೊದಲಾದವರು ಇದ್ದರು.

Share this article