ಮನೋವೈದ್ಯ ಡಾ. ಆನಂದ ಪಾಂಡುರಂಗಿ ನಿಧನ

KannadaprabhaNewsNetwork |  
Published : Sep 25, 2026, 02:15 AM IST
ಡಾ.ಆನಂದ ಪಾಂಡುರಂಗಿ | Kannada Prabha

ಸಾರಾಂಶ

ಉತ್ತರ ಕರ್ನಾಟಕದಲ್ಲಿ ಸಮುದಾಯ ಆಧಾರಿತ ಮಾನಸಿಕ ಆರೋಗ್ಯ ಸೇವೆಗೆ ಹೊಸ ದಿಕ್ಕು ತೋರಿದ ಖ್ಯಾತ ಮನೋವೈದ್ಯ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಆನಂದ ಪಾಂಡುರಂಗಿ ನಿಧನರಾದರು.

ಧಾರವಾಡ:

ಉತ್ತರ ಕರ್ನಾಟಕದಲ್ಲಿ ಸಮುದಾಯ ಆಧಾರಿತ ಮಾನಸಿಕ ಆರೋಗ್ಯ ಸೇವೆಗೆ ಹೊಸ ದಿಕ್ಕು ತೋರಿದ ಖ್ಯಾತ ಮನೋವೈದ್ಯ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಆನಂದ ಪಾಂಡುರಂಗಿ (74) ಗುರುವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಡಾ. ಆನಂದ ಪಾಂಡುರಂಗಿ ನಿಧನದ ಸುದ್ದಿ ಹರಡುತ್ತಿದ್ದಂತೆ ವೈದ್ಯಕೀಯ ಕ್ಷೇತ್ರದ ಗಣ್ಯರು, ರಾಜಕೀಯ ನಾಯಕರು, ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಅವರ ಬಳಿ ಚಿಕಿತ್ಸೆ ಪಡೆದವರು ಇಲ್ಲಿಯ ಮಿಚಿಗನ್ ಕಾಂಪೌಂಡ್‌ನಲ್ಲಿರುವ ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಮೃತರಿಗೆ ಪತ್ನಿ ಅನುಪಮಾ, ಮನೋವೈದ್ಯ ಹಾಗೂ ಪುತ್ರ ಡಾ. ಆದಿತ್ಯ ಪಾಂಡುರಂಗಿ ಸೇರಿದಂತೆ ಅಪಾರ ಬಂಧು-ಬಳಗವಿದೆ.

ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಮುರುಘಾಮಠದ ಪೀಠಾಧಿಪತಿ ಮಲ್ಲಿಕಾರ್ಜುನ ಸ್ವಾಮೀಜಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, , ಮಾಜಿ ಮೇಯರ್‌ ಈರೇಶ ಅಂಚಟಗೇರಿ ಸೇರಿದಂತೆ ಹಲವು ಗಣ್ಯರು ಕುಟುಂಬಕ್ಕೆ ಸಾಂತ್ವನ ಹೇಳಿದರು. ಗುರುವಾರ ಸಂಜೆ ಹೊಸಯಲ್ಲಾಪುರದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು.

ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಮನೋವೈದ್ಯಕೀಯ ಕ್ಷೇತ್ರವನ್ನೇ ಜೀವನದ ಧ್ಯೇಯವನ್ನಾಗಿ ಆಯ್ಕೆ ಮಾಡಿಕೊಂಡ ಡಾ. ಪಾಂಡುರಂಗಿ, ಧಾರವಾಡವನ್ನೇ ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದರು. ಕರ್ನಾಟಕ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದ ಅವರು, ಕವಿವಿ ಮೂಲಕ ಸ್ನಾತಕೋತ್ತರ ಶಿಕ್ಷಣ ಪೂರ್ಣಗೊಳಿಸಿದರು. ಬಳಿಕ ಅಂದಿನ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್‌ನಲ್ಲಿ ಮನೋವೈದ್ಯಕೀಯ ತರಬೇತಿ ಪಡೆದರು. ಮಿರಜ್‌ನಲ್ಲಿ ಖ್ಯಾತ ಮನೋವೈದ್ಯ ಡಾ. ಬಿ.ಎಂ. ದೇಬಾಸಿಕ್ದಾರ್ ಅವರ ಮಾರ್ಗದರ್ಶನದಲ್ಲಿ ಕ್ಲಿನಿಕಲ್ ಅನುಭವ ಪಡೆದು ಧಾರವಾಡಕ್ಕೆ ಮರಳಿದರು.

ಮುಂದಿನ ಹಲವು ದಶಕಗಳಲ್ಲಿ ಡಾ. ಪಾಂಡುರಂಗಿ ಅವರು ಉತ್ತರ ಕರ್ನಾಟಕದ ಅತ್ಯಂತ ಗೌರವಾನ್ವಿತ ಮಾನಸಿಕ ಆರೋಗ್ಯ ತಜ್ಞರಾಗಿ ಗುರುತಿಸಿಕೊಂಡರು. ಆಸ್ಪತ್ರೆಗಳಿಗಷ್ಟೇ ಸೀಮಿತವಾಗಿದ್ದ ಮನೋವೈದ್ಯಕೀಯ ಸೇವೆಯನ್ನು ಗ್ರಾಮೀಣ ಹಾಗೂ ನಗರ ಸಮುದಾಯಗಳಿಗೂ ತಲುಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಶಾಲೆ, ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಸಮಾಲೋಚನೆ ನೀಡುತ್ತಿದ್ದ ಅವರು, ಮಕ್ಕಳ ಭಾವನಾತ್ಮಕ ಹಾಗೂ ಮಾನಸಿಕ ಬೆಳವಣಿಗೆ ಕುರಿತು ಪೋಷಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಕಿಶೋರರಲ್ಲಿ ಕಂಡುಬರುವ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತಿಸುವ ಕುರಿತು ಶಿಕ್ಷಕರಿಗೂ ತರಬೇತಿ ನೀಡುತ್ತಿದ್ದರು.

ಮನೋವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಡಾ. ಪಾಂಡುರಂಗಿ ಅವರಿಗೆ ಹಲವು ಪ್ರಶಸ್ತಿ-ಗೌರವಗಳು ಸಂದಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ 2010ರಲ್ಲಿ ಎಮಿನೆಂಟ್ ಸೈಕಿಯಾಟ್ರಿಸ್ಟ್ ಪ್ರಶಸ್ತಿ, 2011ರಲ್ಲಿ ಸಮುದಾಯ ಮನೋವೈದ್ಯಕೀಯ ಕ್ಷೇತ್ರದ ಕೊಡುಗೆಗಾಗಿ ಡಿಸ್ಟಿಂಗ್ವಿಶ್ಡ್ ಸೈಕಿಯಾಟ್ರಿಸ್ಟ್ ಪ್ರಶಸ್ತಿ ಹಾಗೂ 2017ರಲ್ಲಿ ಡಾ. ಕಟೀಲ್ ಅಪ್ಪು ಪೈ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿ ಲಭಿಸಿತ್ತು. 2018ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ 68ನೇ ಘಟಿಕೋತ್ಸವದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿತ್ತು.ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವಡಾ. ಆನಂದ ಪಾಂಡುರಂಗಿ ಅವರ ನಿಧನ ಹಿನ್ನೆಲೆಯಲ್ಲಿ ಅವರ ಸಮಾಜ ಸೇವೆಗಾಗಿ ಸರ್ಕಾರಿ ಗೌರವ ಸಲ್ಲಿಸಲಾಯಿತು. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಸಮ್ಮುಖದಲ್ಲಿ ಮಿಚಗಿನ್ ಕಾಂಪೌಂಡ್ ಬಳಿಯ ಅವರ ಮನೆ ಆವರಣದಲ್ಲಿ ಅವರ ಪಾರ್ಥಿವ ಶರೀರ ಎದುರು ಪೊಲೀಸರು ಮೂರು ಸುತ್ತು ತೋಪು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಿದರು. ತದ ನಂತರ ರಾತ್ರಿ 10ರ ಸುಮಾರಿಗೆ ಅವರ ಅಂತ್ಯಕ್ರಿಯೆ ಜರುಗಿತು. ಡಾ. ಪಾಂಡುರಂಗಿ ಅವರ ಸೇವೆ ಹಿನ್ನೆಲೆಯಲ್ಲಿ ಅವರಿಗೆ ಸರ್ಕಾರಿ ಗೌರವ ಸಲ್ಲಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಹಾಗೂ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಬ್ಬಿ ಸಮುದ್ರದಲ್ಲಿ ಸಾರ್ವಜನಿಕ ಗಣಪತಿಗಳ ಅದ್ಧೂರಿ ವಿಸರ್ಜನೆ
ಕೊಪ್ಪಳದಲ್ಲಿ ಬಿಜೆಪಿಯಿಂದ ರಾಜ್ಯ ಸರ್ಕಾರದ ಶವಯಾತ್ರೆ