ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಗುರುವಾರ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ರಾಜ್ಯದಲ್ಲಿರುವ ಒಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಸಂಖ್ಯೆ ಎಷ್ಟು? ಮುಂದಿನ ವರ್ಷದಲ್ಲಿ ಎಷ್ಟು ಹೊಸ ಕಾಲೇಜುಗಳನ್ನು ಪ್ರಾರಂಭಿಸುವ ಗುರಿ ಸರ್ಕಾರ ಹೊಂದಿದೆ. ಹಾಗಿದ್ದಲ್ಲಿ ಮುದ್ದೇಬಿಹಾಳ ವ್ಯಾಪ್ತಿಯ ತಂಗಡಗಿ ಮತ್ತು ನಾಲತವಾಡ ಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇಲ್ಲದೆ ಇರುವುದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಸದರಿ ಸ್ಥಳಗಳಲ್ಲಿ ಕಾಲೇಜು ಮಂಜೂರು ಮಾಡಲು ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಶಾಸಕರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, 2025- 26ನೇ ಸಾಲಿನಲ್ಲಿ ಒಟ್ಟು 1319 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿದ್ದು, ರಾಜ್ಯದ ಅರ್ಹ 50 ಪ್ರೌಢಶಾಲೆಗಳನ್ನು ಉನ್ನತೀಕರಿಸಿ ಪದವಿ ಪೂರ್ವ ಕಾಲೇಜುಗಳನ್ನಾಗಿ ಪ್ರಾರಂಭಿಸಲು ಘೋಷಿಸಲಾಗಿರುತ್ತದೆ. ಅದರಂತೆ ತಂಗಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯು ಪರಿಶೀಲನೆಯಲ್ಲಿದೆ ಹಾಗೂ ನಾಲತವಾಡ ಪಟ್ಟಣದಲ್ಲಿ ಹೊಸದಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡುವ ಪುಸ್ತಾವನೆಯು ಇಲಾಖಾ ಹಂತದ ಪರಿಶೀಲನೆಯಲ್ಲಿದೆ ಎಂದು ಉತ್ತರಿಸಿದ್ದಾರೆ.