ಕಂಡ ಕಂಡಲ್ಲಿ ಕಸ ಕಂಡು ಜನಾಕ್ರೋಶ

KannadaprabhaNewsNetwork |  
Published : Apr 15, 2026, 04:00 AM ISTUpdated : Apr 15, 2026, 05:49 AM IST
Garbage

ಸಾರಾಂಶ

ರಸ್ತೆ ಬದಿ, ಖಾಲಿ ಜಾಗಗಳು, ಫ್ಲೈಓವರ್‌ಗಳ ಕೆಳಗೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನರು ಬಿಸಾಡುವ ಕಸ ವಿಲೇವಾರಿಯಾಗದೇ ನಗರದ ಕಸದ ಸಮಸ್ಯೆ ಹೆಮ್ಮರವಾಗಿ ಬೆಳೆಯುತ್ತಿದೆ. ಜಾಲತಾಣಗಳಲ್ಲೂ ನಗರದ ವಿವಿಧೆಡೆ ಹಾಕಿರುವ ಕಸದ ಫೋಟೋಗಳು ಹರಿದಾಡುತ್ತಿದೆ.

 ಬೆಂಗಳೂರು :  ರಸ್ತೆ ಬದಿ, ಖಾಲಿ ಜಾಗಗಳು, ಫ್ಲೈಓವರ್‌ಗಳ ಕೆಳಗೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನರು ಬಿಸಾಡುವ ಕಸ ವಿಲೇವಾರಿಯಾಗದೇ ನಗರದ ಕಸದ ಸಮಸ್ಯೆ ಹೆಮ್ಮರವಾಗಿ ಬೆಳೆಯುತ್ತಿದೆ. ಜಾಲತಾಣಗಳಲ್ಲೂ ನಗರದ ವಿವಿಧೆಡೆ ಹಾಕಿರುವ ಕಸದ ಫೋಟೋಗಳು ಹರಿದಾಡುತ್ತಿದ್ದು, ಜಿಬಿಎ ಮತ್ತು ಘನತ್ಯಾಜ್ಯ ನಿರ್ವಹಣಾ ಮಂಡಳಿಯ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಸ ತೆರವುಗೊಳಿಸಲು ಪಾಲಿಕೆಗಳು ತೋರುತ್ತಿರುವ ಬೇಜವಾಬ್ದಾರಿಯಿಂದ ನಗರವು ಕಸದ ಊರಾಗಿ ಪರಿವರ್ತನೆಯಾಗುತ್ತಿದೆ. ನಗರದ ನಾಗರಿಕರು, ಐಟಿಬಿಟಿ ಕಂಪನಿಗಳು, ಉದ್ಯಮಗಳು ದೊಡ್ಡ ಪ್ರಮಾಣದಲ್ಲಿ ಕಟ್ಟುವ ತೆರಿಗೆಯಿಂದ ಒಂದು ಕಸದ ಸಮಸ್ಯೆ ಪರಿಹರಿಸಲು ಸಾಧ್ಯವಾಗುವುದಿಲ್ಲವೇ? ಎಂದು ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ನಾಗರಿಕರ ಬೇಜವಾಬ್ದಾರಿ:

ಆಟೋ ಟಿಪ್ಪರ್ ವಾಹನಗಳು ನಿತ್ಯ ಮನೆಗಳಿಗೆ ಬಂದು ಕಸ ಸಂಗ್ರಹಿಸುತ್ತಿದ್ದರೂ ಅನೇಕರು ಕಸವನ್ನು ಬೀದಿಗೆ ತಂದು ಎಸೆಯುತ್ತಿದ್ದಾರೆ. ನಾಗರಿಕರ ಬೇಜವಾಬ್ದಾರಿತನವೂ ಸಾರ್ವಜನಿಕ ಸ್ಥಳಗಳಲ್ಲಿ ಕಸದ ಸಮಸ್ಯೆಗೆ ಕಾರಣವಾಗುತ್ತಿದೆ. ಆದರೆ, ಅನೇಕರು ಕೆಲಸಕ್ಕೆ ಹೊರಗೆ ಹೋಗುವ ಕಾರಣ ಮನೆ ಬಳಿ ಬರುವ ಕಸ ಸಂಗ್ರಹಿಸುವ ವಾಹನಕ್ಕೆ ಕಸವನ್ನು ನೀಡಲಾಗುತ್ತಿಲ್ಲ. ಅಂತಹವರು ಕಸವನ್ನು ರಾತ್ರಿ ವೇಳೆ ಹಾಗೂ ನಸುಕಿನಲ್ಲಿ ಬೀದಿಗೆ ಹಾಕುತ್ತಿದ್ದಾರೆ. ಇದಕ್ಕೆ ಜಿಬಿಎ ಪರಿಹಾರ ಕಂಡು ಹಿಡಿಯಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.

ನಾವು ಮನುಷ್ಯರೇ ಎಂದ ಪೌರ ಕಾರ್ಮಿಕ:

ನಾವು ಮನುಷ್ಯರೇ, ಕಸವನ್ನು ಮನೆ ಮನೆಗೆ ಬರುವ ಟಿಪ್ಪರ್ ವಾಹನಗಳಿಗೆ ನೀಡಿ ಎಂದು ಪೌರ ಕಾರ್ಮಿಕರ ಮನವಿ ಮಾಡುವ ವಿಡಿಯೋವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ನಾಗರಿಕರು ಬೇಕಾಬಿಟ್ಟಿ ಕಸ ಹಾಕುವುದಕ್ಕೆ ಪ್ರತಿಕ್ರಿಯಿಸಿರುವ ಪೌರ ಕಾರ್ಮಿಕ, ‘ಎಲ್ಲರಂತೆ ನಾವೂ ಮನುಷ್ಯರಲ್ಲವೇ? ಕಸ ಎಸೆಯಬಾರದು ಎಂದು ಅವರೇ ತಿಳಿದುಕೊಳ್ಳಬೇಕು. ಗಾಡಿ ಬಂದಾಗ ಅದಕ್ಕೆ ಹಾಕಬೇಕು. ಆಫೀಸ್ ಕೆಲಸಕ್ಕೆ ಹೋಗುವವರಾಗಿದ್ದರೆ ಒಂದು ಕಡೆ ಇಟ್ಟು ಕಸ ಸಾಗಿಸುವವರಿಗೆ ಹೇಳಿದರೆ, ಅದನ್ನು ಎತ್ತಿಕೊಳ್ಳುತ್ತಾರೆ. ಅದನ್ನು ಬಿಟ್ಟು ಹೀಗೆ ಬಿಸಾಡುವುದು ಸರಿಯಲ್ಲ’ ಎಂದಿದ್ದಾರೆ.

ವಿಡಿಯೋಗೆ ಪ್ರತಿಕ್ರಿಯಿಸಿರುವ ಅನೇಕರು, ಮನೆಗಳಿಂದ ಸರಿಯಾಗಿ ಕಸ ಸಂಗ್ರಹವಾಗುತ್ತಿಲ್ಲ. ಹೀಗಾಗಿ, ಜನ ಎಲ್ಲೆಂದರಲ್ಲೇ ಬಿಸಾಡುತ್ತಿದ್ದಾರೆ. ಕಡೇ ಪಕ್ಷ ಅಲ್ಲಲ್ಲಿ ಕಸದ ಬಿನ್‌ಗಳನ್ನು ಇಟ್ಟರೆ ಸಾರ್ವಜನಿಕರು ಅಲ್ಲಿಗೆ ತೆಗೆದುಕೊಂಡು ಹೋಗಿ ಕಸ ಹಾಕುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಬಿಎಸ್‌ಡಬ್ಲ್ಯುಎಂಎಲ್ ಮತ್ತು

ಗುತ್ತಿಗೆದಾರರ ನಡುವೆ ಘರ್ಷಣೆ

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯ (ಬಿಎಸ್‌ಡಬ್ಲ್ಯುಎಂಎಲ್) ಸಿಇಒ ಕರೀಗೌಡ ಹಾಗೂ ಕಸ ಸಾಗಿಸುವ ಆಟೋ ಟಿಪ್ಪರ್ ಮತ್ತು ಕಾಂಪ್ಯಾಕ್ಟರ್ ಒದಗಿಸುವ ಗುತ್ತಿಗೆದಾರರ ನಡುವಿನ ಘರ್ಷಣೆಯಿಂದ ನಗರದ ಕಸದ ಸಮಸ್ಯೆ ಉದ್ಭವಾಗಿದೆ ಎಂದು ಹೇಳಲಾಗಿದೆ. ‘ಕಂಪನಿಗೆ ಆದಾಯ ಬರುತ್ತದೆ ಎಂದು ಹೇಳಿ ವಿಂಗಡಿಸಿದ ಪ್ಲಾಸ್ಟಿಕ್‌ ಸಂಗ್ರಹಿಸುವ ಕಡೆಗೆ ಗಮನ ಹರಿಸುತ್ತಿದ್ದಾರೆ. ಆದರೆ, ನಾಗರಿಕರು ಎಲ್ಲಾ ರೀತಿಯ ಕಸವನ್ನು ನೀಡುತ್ತಾರೆ. ಇನ್ನು ಪ್ರತ್ಯೇಕವಾಗಿ ಕಸ ಸಂಗ್ರಹಿಸಲು ಪ್ರತ್ಯೇಕ ವಾಹನಗಳು ಅಥವಾ ವಾಹನದೊಳಗೆ ಸೂಕ್ತ ವ್ಯವಸ್ಥೆಯು ಇಲ್ಲ. ಡಂಪ್ ಮಾಡುವಾಗ ಎಲ್ಲವೂ ಒಂದೇ ಆಗುತ್ತಿದೆ. ಸೂಕ್ತ ಸೌಲಭ್ಯಗಳು ಇಲ್ಲದೆ ಕಸ ವಿಂಗಡಣೆ ದೊಡ್ಡ ಸವಾಲಾಗಿದೆ’ ಎಂದು ಕಸ ಸಾಗಿಸುವ ವಾಹನಗಳ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯೆಗೆ ಬಿಎಸ್‌ಡಬ್ಲ್ಯುಎಂಎಲ್ ಸಿಇಒ ಕರೀಗೌಡ ಅವರು ಲಭ್ಯವಾಗಲಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮಹಿಳಾ ಮೀಸಲಿಂದ ರಾಜಕೀಯ ಚಿತ್ರಣವೇ ಬದಲು : ಕುಮಾರಸ್ವಾಮಿ
ಬೀದಿಗಳಲ್ಲಿ ಇಲಿಗಳ ಕಾಟ : ಆರೋಗ್ಯ ಸಮಸ್ಯೆ ಭೀತಿ