ಬೀದಿ ನಾಯಿಗಳ ನಿಯಂತ್ರಣಕ್ಕೆ ಸಾರ್ವಜನಿಕರ ಮನವಿ

KannadaprabhaNewsNetwork | Published : Dec 23, 2024 1:01 AM

ಸಾರಾಂಶ

ಚಳ್ಳಕೆರೆ: ನಗರದ ಪ್ರತಿಯೊಂದು ವಾರ್ಡ್‌ಗಳ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಲೇ ಇದೆ. ಮಕ್ಕಳು, ವೃದ್ಧರು, ಮಹಿಳೆಯರು ಒಬ್ಬಂಟಿಯಾಗಿ ಓಡಾಡುವುದೇ ಕಷ್ಟವಾಗಿದೆ.

ಚಳ್ಳಕೆರೆ: ನಗರದ ಪ್ರತಿಯೊಂದು ವಾರ್ಡ್‌ಗಳ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಲೇ ಇದೆ. ಮಕ್ಕಳು, ವೃದ್ಧರು, ಮಹಿಳೆಯರು ಒಬ್ಬಂಟಿಯಾಗಿ ಓಡಾಡುವುದೇ ಕಷ್ಟವಾಗಿದೆ.

ಹತ್ತಾರು ನಾಯಿಗಳ ಹಿಂಡು, ಹಿಂಡಾಗಿ ಬೀದಿಗಳಲ್ಲಿ ಬೀಡುಬಿಟ್ಟಿರುತ್ತವೆ. ನಗರದ ಸರ್ಕಾರಿ ಮತ್ತು ಖಾಸಗಿ ಬಸ್‌ಸ್ಟ್ಯಾಂಡ್‌, ರಹೀಂನಗರ, ಶಾಂತಿನಗರ, ಗಾಂಧಿನಗರ, ವಿಠಲನಗರ, ಮದಕರಿ ನಗರವೂ ಸೇರಿದಂತೆ ಹಲವಾರು ಕಡೆಗಳಲ್ಲಿ ಓಡಾಡುವ ಜನರ ಮೇಲೆ ನಾಯಿಗಳು ಎರಗುತ್ತಿವೆ.

ಒಬ್ಬಂಟಿಯಾಗಿ ಓಡಾಡುವ ಮಕ್ಕಳನ್ನೇ ಗುರಿಯಾಗಿಸುವ ಹಿಂಡು ನಾಯಿಗಳು ಭಯಭೀತರನ್ನಾಗಿಸುತ್ತಿವೆ. ಸೈಕಲ್, ಬೈಕ್ ಸವಾರರು ಸಂಚರಿಸುವ ವೇಳೆ ಹಿಂಬಾಲಿಸಿಕೊಂಡು ಓಡುತ್ತವೆ, ಶಾಲಾ ಬ್ಯಾಗ್ ಹಾಕಿಕೊಂಡು ಓಡಾಡುವ ಮಕ್ಕಳ ಮೇಲೆ ದಾಳಿ ಮಾಡಲು ಮುಂದಾಗುತ್ತಿವೆ.

ನಗರದ ವ್ಯಾಪ್ತಿಯ ರಹೀಂನಗರ, ಶಾಂತಿನಗರ, ಗಾಂಧಿನಗರಗಳ ಮಾಂಸದ ಅಂಗಡಿಗಳ ಮುಂದೆ ಗುಂಪು, ಗುಂಪಾಗಿ ನಾಯಿಗಳು ಓಡಾಡುತ್ತಿವೆ. ಸ್ವಲ್ಪ ಯಾಮಾರಿದರೂ ನಾಯಿ ದಾಳಿಗೆ ಒಳಗಾಬೇಕಾಗುತ್ತದೆ. ಎಲ್ಲಂದರಲ್ಲಿ ತಲೆಎತ್ತಿರುವ ಮಾಂಸದ ಅಂಗಡಿ ಮುಂದೆ ಬೀಡುಬಿಟ್ಟ ಬೀದಿನಾಯಿಗಳು ಕಚ್ಚಾಡುತ್ತಾ ಜನರ ಮೇಲೆಯೇ ಬರುತ್ತಿವೆ.

ಕಸದ ರಾಶಿ, ಮಾಂಸದ ಅಂಗಡಿಗಳೇ ಬೀದಿ ನಾಯಿಗಳ ಅಡ್ಡೆಯಾಗಿದೆ. ಆಹಾರ, ಮಾಂಸವನ್ನು ತಿನ್ನಲು ನಾಯಿಗಳು ಗುಂಪುಗಳ ನಡುವೆ ಕಾದಾಟ ನಡೆಯುತ್ತಲೇ ಇರುತ್ತದೆ. ಈ ವೇಳೆ ಸಿಕ್ಕ, ಸಿಕ್ಕ ಜನರ ಮೇಲೂ ಹೋಗುತ್ತಿವೆ.

ನಗರಸಭೆ ಅಧಿಕಾರಿಗಳು ಹಲವಾರು ಕಾನೂನು ಕಟ್ಟುಪಾಡುಗಳ ನಡುವೆ ಬೀದಿನಾಯಿಗಳ ನಿಯಂತ್ರಣ ಮಾಡಲು ಸಾಧ್ಯವಾಗದೆ ಕೈಚಲ್ಲಿ ಕುಳಿತ ಕಾರಣ ನಾಯಿಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಬೀದಿ ನಾಯಿಗಳ ನಿಯಂತ್ರಣ ಬಗ್ಗೆ ನಿಗದಿತ ವ್ಯವಸ್ಥೆ ಇಲ್ಲದೆ ಇರುವುದು ನಾಯಿಗಳ ಹೆಚ್ಚಳಕ್ಕೆ ಕಾರಣವೂ ಆಗಿದೆ ಎನ್ನುತ್ತಾರೆ ಸಾರ್ವಜನಿಕರು.

ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಹಲವಾರು ಸದಸ್ಯರು ಧ್ವನಿ ಎತ್ತಿ ನಿಯಂತ್ರಣ ಮಾಡಲು ಒತ್ತಡ ಹಾಕಿದ್ದರೂ, ನಾಯಿಗಳ ನಿಯಂತ್ರಣ ಮಾತ್ರ ಸಾಧ್ಯವಾಗಿಲ್ಲ.

ಹಲವಾರು ಕಾನೂನು ತೊಡಕುಗಳ ನಡುವೆ ನಾಯಿಗಳನ್ನು ನಿಯಂತ್ರಿಸಬೇಕಿದೆ. ಸಂತಾನಹರಣ ಚಿಕಿತ್ಸೆ ಒಂದೇ ದಾರಿಯಾದ ಕಾರಣ ಅಧಿಕಾರಿಗಳು ಏನುಮಾಡದ ಸ್ಥಿತಿಗೆ ತಲುಪಿದ್ದು, ಬೀದಿ ನಾಯಿಗಳ ನಿಯಂತ್ರಣ ಮಾಡಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ವೃದ್ಧರು, ಮಕ್ಕಳು ಹೊರಗಡೆ ಹೋಗಲು ಹೆದರುವ ಪರಿಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ. ಸುಮಾರು ಜನರು ನಾಯಿ ದಾಳಿಯಿಂದ ಭಯಭೀತರಾಗಿದ್ದಾರೆ. ಅವುಗಳ ನಿಯಂತ್ರಣಕ್ಕೆ ನಗರಸಭೆ ಮುಂದಾಗಬೇಕು.

-- ನೇತಾಜಿ ಪ್ರಸನ್ನ, ನೇತಾಜಿಸ್ನೇಹ ಬಳಗದ ಅಧ್ಯಕ್ಷ.

ಕಾನೂನು ಪ್ರಕಾರ ಬೀದಿ ನಾಯಿಗಳನ್ನು ಕೊಲ್ಲುವಂತಿಲ್ಲ, ಅವುಗಳಿಗೆ ಸಂತಾನಹರಣ ಚಿಕಿತ್ಸೆ ಕೊಡಿಸಿ ಮತ್ತೆ ಅವುಗಳ ವಾಸ ಸ್ಥಳಕ್ಕೆ ತಂದುಬಿಡಬೇಕಿದೆ. ನಾಯಿಗಳ ನಿಯಂತ್ರಣ ಮಾಡಲು ಸಾಕಷ್ಟು ಪರಿಶ್ರಮ ವಹಿಸುತ್ತಿದ್ದೇವೆ.

-- ನರೇಂದ್ರಬಾಬು, ನೈರ್ಲಮ್ಯ ಎಂಜಿನಿಯರ್, ನಗರಸಭೆ.

Share this article