- ಮಲೇಬೆನ್ನೂರು, ಕೊಕ್ಕನೂರಿನಲ್ಲಿ ಕಾರ್ಯಕ್ರಮ । ಅಕ್ಕಪಡೆ ಸದ್ಬಳಕೆಗೆ ಮಾರ್ಗದರ್ಶನ
ಕನ್ನಡಪ್ರಭ ವಾರ್ತೆ ಹರಿಹರ
ಜಿಲ್ಲಾ ಅಕ್ಕ ಪಡೆಯಿಂದ ಹರಿಹರ ತಾಲೂಕಿನ ಮಲೇಬೆನ್ನೂರು, ಕೊಕ್ಕನೂರಲ್ಲಿ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗಾಗಿ ರಾಜ್ಯಾದ್ಯಂತ ಜಾರಿಗೆ ತಂದಿರುವ ನೂತನ “ಅಕ್ಕ ಪಡೆ“ಯಿಂದ ಅಕ್ಕಪಡೆಯ ಉಪಯೋಗ, ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು.ತಾಲೂಕಿನ ಮಲೇಬೆನ್ನೂರು ಹಾಗೂ ಕೊಕ್ಕನೂರಿಗೆ ಮಂಗಳವಾರ ಭೇಟಿ ನೀಡಿ, ಮಲೇಬೆನ್ನೂರಿನ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳ, ಕೊಕ್ಕನೂರಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಹಿಳೆಯರಿಗೆ ಅಕ್ಕಪಡೆ ಬಗ್ಗೆ ಮಾಹಿತಿ ನೀಡಿದರು. ದಾವಣಗೆರೆ ನಗರ ಸೇರಿದಂತೆ ಜಿಲ್ಲಾದ್ಯಂತ ಅಕ್ಕ ಪಡೆಯು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ನಿರ್ದೇಶನದಲ್ಲಿ ಕಾರ್ಯೋನ್ಮುಖವಾಗಿದೆ ಎಂದರು.
ಸರಗಳ್ಳತನ ನಡೆದಾಗ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳು, ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳು ಹಾಗೂ ಮಾದಕ ದ್ರವ್ಯಗಳ ಮಾರಾಟ, ಸಾಗಾಟ ಮಾಡುವರ ವಿರುದ್ಧ ಇರುವ ಕಾನೂನು ಕ್ರಮಗಳ ಬಗ್ಗೆ ತಿಳಿಸಿದರು.
ಅನಂತರ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ಶಾಲಾ ವಿದ್ಯಾರ್ಥಿಗಳಿಗೆ ತುರ್ತು ಸಹಾಯವಾಣಿಗಳ ಬಗ್ಗೆ, ಮಕ್ಕಳ ಸುರಕ್ಷೆ ಬಗ್ಗೆ ಇರುವ ಕಾನೂನುಗಳ ಬಗ್ಗೆ, ಸೈಬರ್ ಅಪರಾಧಗಳಿಂದ ಸುರಕ್ಷತೆ ಬಗ್ಗೆ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಇರಬೇಕಾದ ಸುರಕ್ಷತೆ ಬಗ್ಗೆ, ಸಂಚಾರ ನಿಯಮಗಳ ಪಾಲನೆ, ಶಾಲಾ ಮಕ್ಕಳಿಗೆ ಇರಬೇಕಾದ ಅರಿವುಗಳು ಹಾಗೂ ಶಿಕ್ಷಣದ ಮಹತ್ವ, ಮಾದಕ ದ್ರವ್ಯಗಳ ದುಷ್ಪರಿಣಾಮಗಳು, ಅತಿಯಾದ ಮೊಬೈಲ್ ಬಳಕೆ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ವಿದ್ಯಾರ್ಥಿನಿಯರಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಜಾಗೃತಿ ಮೂಡಿಸಿದ್ದು, ಸ್ವಯಂ ರಕ್ಷಣಾ ಕೌಶಲ್ಯಗಳ ಬಗ್ಗೆ ತಿಳಿಹೇಳಿದರು. ಯಾವುದೇ ತುರ್ತು ಸೇವೆಗಾಗಿ 112ಕ್ಕೆ ಕರೆ ಮಾಡಲು ಹಾಗೂ ಯಾವುದೇ ಸಮಸ್ಯೆಗಳಿದ್ದರೂ ಅಕ್ಕಪಡೆಗೆ ಕರೆ ಮಾಡಿ ತಿಳಿಸುವಂತೆ ಹಾಗೂ ಅಕ್ಕಪಡೆ ಇರುವುದೇ ಮಹಿಳೆಯರ ಹಾಗೂ ಮಕ್ಕಳ ಸುರಕ್ಷತೆಗಾಗಿ ಎಂದು ತಿಳಿಸಿದರು.
-13HRR.01 &02: