-ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಅಭಿಮತ । ಯಾದಗಿರಿಯಲ್ಲಿ ಸಂತಕವಿ ಕನಕದಾಸರ ಜಯಂತ್ಯುತ್ಸವ
ಕನ್ನಡಪ್ರಭ ವಾರ್ತೆ ಯಾದಗಿರಿ
16ನೇ ಶತಮಾನದಲ್ಲಿ ಬದುಕಿದ ಕನಕದಾಸರು ಕೀರ್ತನೆಗಳು, ತತ್ವಪದಗಳು ಮತ್ತು ಸಾಹಿತ್ಯದ ಮೂಲಕ ಜ್ಞಾನ, ಭಕ್ತಿ, ಸಮಾನತೆ ಹಾಗೂ ಮಾನವೀಯತೆಯ ಸಂದೇಶ ಸಾರಿದವರು, ಅಧಿಕಾರದ ಜೀವನವನ್ನು ತೊರೆದು ದಾಸಸಾಹಿತ್ಯದ ಮೂಲಕ ಜನಜಾಗೃತಿ ಮೂಡಿಸಿದವರು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಸಂತಕವಿ ಕನಕದಾಸ ಜಯಂತ್ಯೋತ್ಸವ ಸಮಿತಿ ಯಾದಗಿರಿಯ ಸಂಯುಕ್ತಾಶ್ರಯದಲ್ಲಿ, ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕನಕದಾಸ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವ ಅರ್ಪಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಮಾತನಾಡಿ, 16ನೇ ಶತಮಾನದಲ್ಲಿ ಜಾತಿ ಮತ್ತು ಕುಲ ಆಧಾರಿತ ವ್ಯವಸ್ಥೆಯ ವಿರುದ್ಧ ಕನಕದಾಸರು ಜನಸಾಮಾನ್ಯರಿಗೆ ಸಂದೇಶ ನೀಡಿದರು.
ಯಾವುದೇ ಸಂಘಟನೆ ಅಥವಾ ಸಾಮಾಜಿಕ ರಕ್ಷಣೆಯ ಬೆಂಬಲವಿಲ್ಲದಿದ್ದರೂ ಏಕಾಂಗಿಯಾಗಿ ಧ್ವನಿ ಎತ್ತಿದ ಅವರು, 16ನೇ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಸಂತ ಜ್ಞಾನೇಶ್ವರರು ಮತ್ತು ನಮ್ಮ ಭಾಗದಲ್ಲಿ ಕನಕದಾಸರು ಭಕ್ತಿ ಚಳವಳಿಗೆ ಅಡಿಪಾಯ ಹಾಕಿದರು.
ಉಪನ್ಯಾಸಕ ಶ್ರೀಶೈಲ ಪೂಜಾರಿ ವಿಶೇಷ ಉಪನ್ಯಾಸ ನೀಡಿ, ಕನಕದಾಸರು ಯಾವುದೇ ಸಮಾಜದ ಕಟ್ಟಳೆಗೆ ಒಳಪಡದೆ ಇಡೀ ವಿಶ್ವವನ್ನು ದೂರದೃಷ್ಟಿಯಿಂದ ನೋಡಿದ ಮಹಾಸಂತರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅವರು ನೀಡಿದ ಕೊಡುಗೆಗಳು ಜನಪ್ರಿಯವಾಗಿದ್ದು, ಸಮಾಜದಲ್ಲಿ ಅವರಿಗೆ ವಿಶೇಷ ಗೌರವವಿದೆ. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಅವರಿಗೆ ಯೌವನದಲ್ಲಿ ಮದುವೆಯ ಯೋಚನೆ ಬಂದರೂ, ವಿಜಯನಗರ ಸಾಮ್ರಾಜ್ಯದ ಮೇಲಿನ ದಾಳಿ ಮತ್ತು ಯುದ್ಧದಲ್ಲಿ ಸೈನಿಕನಾಗಿ ಭಾಗವಹಿಸಿದಾಗ ಎದುರಾದ ಸಾವು-ನೋವುಗಳು ಅವರ ಜೀವನದಲ್ಲಿ ದೊಡ್ಡ ಬದಲಾವಣೆ ತಂದವು. ಜೀವನ ನಶ್ವರ ಎಂಬ ಅರಿವು ಮೂಡಿ ದಾಸಶ್ರೇಷ್ಠರಾದರು ಎಂದು ವಿವರಿಸಿದರು.
ಇದಕ್ಕೂ ಮೊದಲು ನಗರದ ಕನಕ ವೃತ್ತದಲ್ಲಿ ಕನಕದಾಸರ ಪುತ್ಥಳಿಗೆ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್, ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಅವರು ಮಾರ್ಲಾಪಣೆ ಮಾಡಿದರು.
ಫೋಟೊ:27ವೈಡಿಆರ್1
-
ಫೋಟೊ: 27ವೈಡಿಆರ್2ಯಾದಗಿರಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕನಕದಾಸ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಉದ್ಘಾಟಿಸಿದರು.