ಡೆಂಘೀ ತಡೆಗಟ್ಟಲು ಸಾರ್ವಜನಿಕರ ಸಹಕಾರ ಮುಖ್ಯ: ಜಿಪಂ ಸಿಇಒ

KannadaprabhaNewsNetwork |  
Published : May 28, 2025, 12:03 AM IST
26ಎಚ್‌ಪಿಟಿ2- ಹೊಸಪೇಟೆಯಲ್ಲಿ ಸೋಮವಾರ ರಾಷ್ಟ್ರೀಯ ಡೆಂಘೀ ದಿನಾಚರಣೆ ಕಾರ್ಯಕ್ರಮಕ್ಕೆ ಜಿಪಂ ಸಿಇಒ ಅಕ್ರಂ ಷಾ ಚಾಲನೆ ನೀಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಲ್.ಆರ್. ಶಂಕರ ನಾಯ್ಕ ಮತ್ತಿತರರಿದ್ದರು. | Kannada Prabha

ಸಾರಾಂಶ

ಡೆಂಘೀಗೆ ಯಾವುದೇ ಲಸಿಕೆ ಅಥವಾ ಆಂಟಿ-ವೈರಲ್ ಚಿಕಿತ್ಸಾ ಕ್ರಮವಿಲ್ಲ. ಅದರ ತಡೆಗಟ್ಟುವಿಕೆಯೊಂದೇ ನಮಗಿರುವ ಅತ್ಯುತ್ತಮ ಆಯ್ಕೆಯಾಗಿದೆ.

ಡೆಂಘೀ ತಡೆಗಟ್ಟುವಿಕೆಯ ಜಾಗೃತಿ ಮೂಡಿಸಲು ರಾಷ್ಟ್ರೀಯ ಡೆಂಘೀ ದಿನ ಆಚರಣೆ: ಅಕ್ರಂ ಷಾಕನ್ನಡಪ್ರಭ ವಾರ್ತೆ ಹೊಸಪೇಟೆ

ಡೆಂಘೀಗೆ ಯಾವುದೇ ಲಸಿಕೆ ಅಥವಾ ಆಂಟಿ-ವೈರಲ್ ಚಿಕಿತ್ಸಾ ಕ್ರಮವಿಲ್ಲ. ಅದರ ತಡೆಗಟ್ಟುವಿಕೆಯೊಂದೇ ನಮಗಿರುವ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಜಿಪಂ ಸಿಇಒ ಅಕ್ರಂ ಷಾ ಹೇಳಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಡೆಂಘೀ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಂದು ರೋಗ, ಸೋಂಕು, ಕಾಯಿಲೆಯನ್ನು ತಡೆಗಟ್ಟುವಿಕೆಯ ಕೆಲಸ ಕೇವಲ ಸರ್ಕಾರಿ ಇಲಾಖೆಗಳ ಪ್ರಯತ್ನದಿಂದ ಅಸಾಧ್ಯ. ಸಾರ್ವಜನಿಕರ ಸಹಕಾರ ಹಾಗು ಮುಂಜಾಗ್ರತಾ ಕ್ರಮಗಳ ಪಾಲನೆಯಿಂದ ಮಾತ್ರ ಸಾಧ್ಯವಾಗಲಿದೆ. ಡೆಂಘೀ ಸೋಂಕು, ಈಡಿಸ್ ಸೊಳ್ಳೆಗಳು ಹಗಲು ಕಚ್ಚುವುದರಿಂದ ಉಂಟಾಗುವ ವೈರಸ್ ರೋಗವಾಗಿದ್ದು, ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಮತ್ತು ಅದರ ಜೀವನ ಚಕ್ರವನ್ನು ಪೂರ್ಣಗೊಳಿಸಲು 7-12 ದಿನಗಳನ್ನು ತೆಗೆದುಕೊಳ್ಳುತ್ತದೆ. ಡೆಂಘೀ ಸೋಂಕಿಗೆ ಒಳಗಾಗಿದ್ದರೆ ಅದು ಮಾರಕ ಎಂದು ಸಾಬೀತಾಗಿದೆ. ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೆ ಇದನ್ನು ತಡೆಗಟ್ಟಬಹುದಾಗಿದೆ. ಇದೀಗ ಮಳೆಗಾಲ ಆರಂಭವಾದ್ದರಿಂದ ಸೊಳ್ಳೆಗಳ ಸಂತಾನೋತ್ಪತ್ತಿಗೆ ಸಕಾಲವಾಗಿದೆ. ಕಲುಷಿತ ನೀರು ನಿಲ್ಲದಂತೆ, ಗುಂಡಿಗಳಲ್ಲಿ ನೀರು ಸಂಗ್ರಹವಾಗದಂತೆ, ನಿಗದಿತ ಬಳಕೆಗೆ ನೀರನ್ನು ಬದಲಿಸುವಂತೆ, ಜನರು ನಿಗಾವಹಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹಾಗಾದಾಗ ಮಾತ್ರ ಡೆಂಘೀ ನಿಯಂತ್ರಣ ಸಾಧ್ಯವಾಗಲಿದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಲ್.ಆರ್. ಶಂಕರ ನಾಯ್ಕ ಮಾತನಾಡಿ, ಹಿಂದಿನ ವರ್ಷದಲ್ಲಿ 314 ಡೆಂಘೀ ಪ್ರಕರಣ ಪತ್ತೆಯಾಗಿದ್ದವು. ಯಾವುದೇ ಪ್ರಾಣಹಾನಿ ಆಗಿಲ್ಲ. ಈ ವರ್ಷ ಆರಂಭಿಕವಾಗಿ 14 ಪ್ರಕರಣಗಳು ಪತ್ತೆಯಾಗಿವೆ. ಡೆಂಘೀ ಜ್ವರ ಸೋಂಕಿತರು ಸುರಕ್ಷಿತವಾಗಿದ್ದಾರೆ. ಇನ್ನಷ್ಟು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಡೆಂಘೀ ದಿನಾಚರಣೆಗೆ ಮಾನವ ಸರಪಳಿ ನಿರ್ಮಿಸಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಯಾವುದೇ ಜ್ವರ ಕಂಡು ಬಂದರೆ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ಮುಂದಾಗಬೇಕು, ನಿರ್ಲಕ್ಷ್ಯ ಬೇಡ. ಎಲ್ಲಾ ಜ್ವರಗಳು ಡೆಂಘೀ ಆಗಿರುವುದಿಲ್ಲ. ಪತ್ತೆಯಾದರೇ ಚಿಕಿತ್ಸೆ ಪಡೆಯಲು ಸುಲಭವಾಗಲಿದೆ ಎಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಬಿ. ಜಂಬಯ್ಯ ಮಾತನಾಡಿ, ಪ್ರತಿಯೊಬ್ಬರು ಮನೆಗಳ ಸುತ್ತಮುತ್ತಲಿನ ವಾತಾವರಣವನ್ನು ನೈರ್ಮಲ್ಯತೆಯಿಂದ ಕಾಪಾಡಿಕೊಳ್ಳಬೇಕಿದೆ. ಮನೆಯಲ್ಲಿ ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಿ. ಮನೆಯಲ್ಲಿನ ಮಕ್ಕಳನ್ನು, ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಡೆಂಘೀ ಕುರಿತು ಜಾಗೃತಿ ಮೂಡಿಸಲಾಯಿತು. ಡೆಂಘೀ ನಿಯಂತ್ರಣ ಕ್ರಮಗಳ ಕುರಿತು ಪೋಸ್ಟರ್‌ ಬಿಡುಗಡೆಗೊಳಿಸಲಾಯಿತು.

ಈ ವೇಳೆ ನಗರಸಭೆ ಆಯುಕ್ತ ಚಂದ್ರಪ್ಪ, ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ. ಭಾಸ್ಕರ್, ತಾಲೂಕು ಆರೋಗ್ಯ ಅಧಿಕಾರಿ ಡಾ. ವಿನೋದ ಕುಮಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಷಣ್ಮುಖ ನಾಯ್ಕ, ಜಿಲ್ಲಾ ಕುಷ್ಠರೋಗದ ನಿಯಂತ್ರಣಾಧಿಕಾರಿ ಡಾ. ರಾಧಿಕಾ, ಕೀಟಶಾಸ್ತ್ರಜ್ಞೆ ನಂದಾ ಕಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ, ಸಪ್ತಗಿರಿ ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳು, ಆರೋಗ್ಯ ಸಿಬ್ಬಂದಿ ಇದ್ದರು.

PREV

Recommended Stories

ದರ್ಶನ್‌ ಅಶ್ಲೀಲ ಫ್ಯಾನ್ಸ್‌ ವಿರುದ್ಧ ರಮ್ಯ ಸಮರ
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ನಾಲ್ವರು ಐಪಿಎಸ್‌ ಸಸ್ಪೆಂಡ್‌ ವಾಪಸ್‌