ಆಮೆಗತಿ ರಸ್ತೆ ಕಾಮಗಾರಿಯಿಂದ ಸಾರ್ವಜನಿಕರು ಹೈರಾಣು‌

KannadaprabhaNewsNetwork |  
Published : Oct 11, 2025, 12:03 AM IST
ಹೈರಾಣು‌: | Kannada Prabha

ಸಾರಾಂಶ

ಮುಖ್ಯ ರಸ್ತೆ ಕಾಮಗಾರಿ ಪ್ರಾರಂಭಗೊಂಡು ವರ್ಷ ಸಮೀಪಿಸುತ್ತಿದ್ದರೂ ಕಾಮಗಾರಿ ಪೂರ್ಣಗೊಳ್ಳದೆ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದೆ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.

ಸುಬ್ರಮಣಿ ಸಿದ್ದಾಪುರ

ಕನ್ನಡಪ್ರಭ ವಾರ್ತೆ ಸಿದ್ದಾಪುರ

ವಿರಾಜಪೇಟೆ ಮುಖ್ಯ ರಸ್ತೆ ಕಾಮಗಾರಿ ಪ್ರಾರಂಭಗೊಂಡು ವರ್ಷ ಸಮೀಪಿಸುತ್ತಿದ್ದರು ಕಾಮಗಾರಿ ಪೂರ್ಣಗೊಳ್ಳದೆ, ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದೆ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.

ಸಿದ್ದಾಪುರದಿಂದ ವಿರಾಜಪೇಟೆ ಮುಖ್ಯ ರಸ್ತೆಯ ಸುಮಾರು 2 ಕಿ.ಮೀ. ರಸ್ತೆ ಕಾಮಗಾರಿ ನಡೆಯುತ್ತಿದ್ದು ವಿಳಂಬ ಮತ್ತು ಅಮೆಗತಿ ಕಾಮಗಾರಿಯಿಂದ ಜನರು ಹೈರಾಣಾಗಿದ್ದು ಎಡೆಎಡೆಗೆ ಸುರಿಯುತ್ತಿರುವ ಮಳೆಯಿಂದ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ಶಾಲಾ ಮಕ್ಕಳು ಸಾರ್ವಜನಿಕರು ಪರದಾಡುವಂತಾಗಿದೆ.ರಾತ್ರಿ ಸಮಯದಲ್ಲಿ ಕಾಮಗಾರಿ ನಡೆಯುತ್ತಿದ್ದು ಗುರುವಾರ ರಾತ್ರಿ ಸುರಿದ ಮಳೆಗೆ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ಶುಕ್ರವಾರ ಬೆಳಗ್ಗೆ ವಾಹನಗಳು ಕೆಸರಿನಲ್ಲಿ ಸಿಲುಕಿ ಸಂಚಾರಕ್ಕೆ ಸಾಧ್ಯವಾಗದ್ದರಿಂದ ಸುಮಾರು 2 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು ಜನರು ಪರದಾಡಬೇಕಾಯಿತು. ಕೆಸರು ರಸ್ತೆಯಲ್ಲಿ ಬಸ್ಸುಗಳು ಸಂಚರಿಸಲು ಸಾಧ್ಯವಾಗದೆ ಜನರು ತಳ್ಳಿ ಮತ್ತು ಜೆಸಿಬಿ ಮೂಲಕ ಎಳೆದುಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಶಾಲಾ ಮಕ್ಕಳು ಕೆಸರಿನಲ್ಲಿ ನಡೆದುಕೊಂಡು ಹೋಗುವಾಗ ಬಿದ್ದು ಗಾಯಗಳಾಗಿದ್ದು ಶಾಲಾ ಸಮವಸ್ತ್ರ ಕೆಸರಾಗಿ ತಡವಾಗಿ ಶಾಲೆ ಸೇರಬೇಕಾಯಿತು. ದ್ವಿಚಕ್ರ ಚಾಲಕರು ಕೆಸರಿನಲ್ಲಿ ಬೈಕ್ ಸಮೇತ ಜಾರಿ ಬೀಳುವ ದೃಶ್ಯ ಸಾಮಾನ್ಯವಾಗಿತ್ತು‌. ಸಾರ್ವಜನಿಕರು ಗುತ್ತಿಗೆದಾರ ಮತ್ತು ಸ್ಥಳೀಯ ಶಾಸಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದು 2 ಕಿ ಮಿ ರಸ್ತೆ ಸರಿ ಮಾಡಲು ವರ್ಷ ಬೇಕೆ ಎಂದು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.ಬಸ್ಸುಗಳ ಸಂಚಾರ ರದ್ದುಕೆಸರಿನಲ್ಲಿ ಬಸ್ಸುಗಳು ಸಿಲುಕಿ ಸಂಚರಿಸಲಾಗದೆ ಮತ್ತು 2 ಗಂಟೆಗಳ ಟ್ರಾಫಿಕ್ ಜಾಮ್ ನಿಂದ ಬಸ್ಸುಗಳ ಸಂಚಾರದ ಸಮಯ ಮೀರಿದ ಹಿನ್ನಲೆಯಲ್ಲಿ ಕೆಲವು ಬಸ್ಸುಗಳು ತಮ್ಮ ಸಂಚಾರ ರದ್ದು ಪಡಿಸಿ ಸಿದ್ದಾಪುರದಲ್ಲಿ ಉಳಿದರೆ ಇನ್ನುಳಿದ ಬಸ್ಸುಗಳು ವಿಳಂಬವಾಗಿ ಸಂಚರಿಸಿದರು. ವಿರಾಜಪೇಟೆ ಭಾಗಕ್ಕೆ ಕೆಲಸಕ್ಕೆ ತೆರಳಬೇಕಾದ ಸರ್ಕಾರಿ ಉದ್ಯೋಗಿಗಳು ಕಾರ್ಮಿಕರು ಸಮಯ ಮೀರಿದ್ದರಿಂದ ಕೆಲಸಕ್ಕೆ ತೆರಳಲು ಸಾಧ್ಯವಾಗದೆ ಪರದಾಡಬೇಕಾಯಿತು.ಆರಂಭದಿಂದಲೂ ರಸ್ತೆ ಕಾಮಗಾರಿ ಸಮಸ್ಯೆವಿರಾಜಪೇಟೆ ಸಿದ್ದಾಪುರ ರಸ್ತೆ ಕಾಮಗಾರಿ ಪ್ರಾರಂಭದಿಂದಲೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಾ ಸಾಗಿದ್ದು, ಸಾರ್ವಜನಿಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಾ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆಯ ಇಕ್ಕಲೆಗಳಲ್ಲಿ ನಿರ್ಮಿಸಿರುವ ಚರಂಡಿ ಕಾಮಗಾರಿ ಕಳಪೆಯಾಗಿದ್ದು ಈಗಾಗಲೇ ಹಲವು ಕಡೆಗಳಲ್ಲಿ ಸ್ಲಾಬ್ ಗಳು ತುಂಡಾಗಿದ್ದು ಸ್ಲಾಬ್ ಗಳಿಗೆ ಕಾಂಕ್ರೀಟ್ ಹಾಕುವಾಗ ಕಬ್ಬಿಣದ ತಂತಿ ಹಾಕಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.ರಸ್ತೆ ಅವ್ಯವಸ್ಥೆ ವಿರುದ್ಧ ಹಾಡು ವೈರಲ್ಕೆಸರಿನಲ್ಲಿ ಸವಾರರು ಪರದಾಡುತ್ತಾ ವಾಹನ ಚಲಾಯಿಸುವ ದೃಶ್ಯಗಳನ್ನು ವ್ಯಕ್ತಿಯೊಬ್ಬರು ಸೆರೆ ಹಿಡಿದು ಅದಕ್ಕೆ ಜನಪತ್ರಿನಿಧಿಗಳ ವಿರುದ್ಧ ಹಾಡನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದು ಆ ಹಾಡು ವೈರಲ್ ಆಗಿದ್ದು ಹಲವರು ಅದನ್ನು ತಮ್ಮ ಸ್ಟೇಟಸ್ ಹಾಕಿಕೊಂಡು ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಸ್ತೆ ಕೆಲಸ ನಿಧಾನವಾಗಿ ನಡೆಯುತ್ತಿದ್ದು ಜನರು ಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆ ಪೂರ್ತಿ ಕೆಸರು ತುಂಬಿಕೊಂಡು ಶಾಲಾ ಮಕ್ಕಳಿಗೆ ಜನರಿಗೆ ನಡೆದಾಡಲು ವಾಹನ ಓಡಿಸಲು ಕಷ್ಟವಾಗಿ ತುಂಬಾ ಜನ ಕೆಸರಿನಲ್ಲಿ ಜಾರಿ ಬೀಳುತ್ತಿದ್ದಾರೆ. ಅಲ್ಲದೆ ಕೆಲಸ ಕೂಡ ಕಳಪೆಯಾಗಿದೆ. ಚರಂಡಿ ಮೇಲೆ ಹಾಕಿದ ಸ್ಲಾಬ್ ಗಳು ಈಗಲೇ ತುಂಡಾಗಿದೆ. ಅದರಲ್ಲಿ ಸಿಮೆಂಟು ಕಬ್ಬಿಣ ಏನು ಹಾಕಿಲ್ಲ ಅನಿಸುತ್ತೆ ಎಂಸ್ಯಾಂಡ್ ಮಾತ್ರ ಹಾಕಿದ ಹಾಗೆ ಪುಡಿ ಪುಡಿಯಾಗಿ ಉದುರುತ್ತಿದೆ‌.। ಮನೋಹರ್. ಹೈಸ್ಕೂಲ್ ಪೈಸಾರಿ ನಿವಾಸಿ, ಸಿದ್ದಾಪುರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ