ಕಂಪ್ಲಿ: ಇಲ್ಲಿನ ಕೋಟೆಗೆ ತೆರಳುವ ಹಾದಿಯಲ್ಲಿನ ಬೆನಕನ ಕಾಲುವೆ ಎದುರಿಗೆ ಮಹಾಸತಿ ಕಲ್ಲು ಪತ್ತೆಯಾಗಿದೆ.
ಬಿಳಿಕಾಡು ಕಲ್ಲಿನಲ್ಲಿ ಸುಂದರ ಉಡುಗೆ ತೊಟ್ಟ ಮಹಿಳೆಯೊಬ್ಬಳ ಚಿತ್ರ ಕೆತ್ತಲಾಗಿದೆ. ಆಕೆಯ ಸೊಂಟದಲ್ಲಿ ಬಾಕು (ಕಿರುಗತ್ತಿ) ಸಿಕ್ಕಿಸಿಕೊಂಡ ವೀರನ ಚಿತ್ರವಿದೆ. ಇದು ಮಹಾಸತಿ ಕಲ್ಲು ಎನ್ನಲಾಗುತ್ತಿದೆ. ಮಹಾಸತಿ ಕಲ್ಲಿನ ಮೇಲ್ಭಾಗದಲ್ಲಿ ಸತಿಯ ಬಲಗೈ ತುಂಡಾಗಿದೆ. ಯಾವುದೇ ಅಕ್ಷರಗಳು ಕಂಡುಬಂದಿಲ್ಲ. ಇದು 17ನೇ ಶತಮಾನದ ಮಹಾಸತಿ ಕಲ್ಲಾಗಿದೆ.ವಿಜಯನಗರೋತ್ತರ ಕಾಲದ ಮಹಾಸತಿ ಕಲ್ಲಿನಲ್ಲಿ ಅಕ್ಷರಗಳಿರುವುದಿಲ್ಲ. ಇದರಲ್ಲಿ ಮಹಾಸತಿಯನ್ನು ಚಿತ್ರಿಸಲಾಗಿದೆ. ತುರುಬು ಕಟ್ಟಿದ ಆಕರ್ಷಕ ಕೇಶಾಲಂಕಾರ, ದೊಡ್ಡ ಕಿವಿಯ ಆಭರಣ ತೊಟ್ಟಿದ್ದಾಳೆ. ಉತ್ತಮ ಉಡುಪು ಧರಿಸಿದ್ದಾಳೆ. ಬಳಿ ಕಡಗ, ತೋಳು ಕಡಗ ತೊಟ್ಟಿದ್ದಾಳೆ. ಕೊರಳಲ್ಲಿ ಹಾರ ಧರಿಸಿದ್ದಾಳೆ. ಬಲಗೈ ಎತ್ತಿ ಹರಸುತ್ತಿದ್ದಾಳೆ. ಎಡಗೈಯಲ್ಲಿ ನಿಂಬೆಹಣ್ಣು ಹಿಡಿದಿದ್ದು ಶುಭಸೂಚಕವಾಗಿದೆ. ವೀರನೊಬ್ಬ ಹೋರಾಟದಲ್ಲಿ ಮರಣ ಹೊಂದಿದ್ದರಿಂದ ಪತ್ನಿ ಮಹಾಸತಿಯಾದ ಸನ್ನಿವೇಶವಿರಬಹುದು ಎಂದು ಹಂಪಿ ಕನ್ನಡ ವಿವಿಯ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಇದು ವಿಜಯನಗರ ಕಾಲದ ಮಹಾಸತಿಕಲ್ಲಾಗಿದ್ದು, ಮಹಾಸತಿಯನ್ನು ಪ್ರಧಾನವಾಗಿ ಚಿತ್ರಿಸಿದೆ. ವೀರ(ಪತಿ)ನ ಚಿತ್ರ ಚಿಕ್ಕದಿರುವುದರಿಂದ ಸತಿಯ ಅನುಗಮನದ ಸಂಕೇತವಾಗಿದ್ದು, ಪತಿ ಮರಣ ಆನಂತರ ಪತಿಯ ಸ್ಮರಣೆಗಾಗಿ ಯಾವುದಾದರೊಂದು ವಸ್ತು ಹಿಡಿದು ಏಕಾಂಗಿಯಾಗಿ ಆತ್ಮಾರ್ಪಣೆಗೊಂಡಿರಬಹುದು. ಇದು ಒಳ್ಳೆ ಪ್ರಕಾರದ ಅಪರೂಪದ ಮಹಾಸತಿ ಕಲ್ಲಾಗಿದೆ. ದೇವಸ್ಥಾನದಲ್ಲಿ ಅಥವಾ ಕೋಟೆ ಮಹಾದ್ವಾರ ಬಳಿ ಸಂರಕ್ಷಿಸಬೇಕಿದೆ ಎಂದು ಗಂಗಾವತಿಯ ಸಂಶೋಧಕ ಶರಣಬಸಪ್ಪ ಕೋಲ್ಕಾರ ತಿಳಿಸಿದ್ದಾರೆ.ಮಹಾಸತಿ ಕಲ್ಲು ಇತಿಹಾಸ ಪರಂಪರೆಯನ್ನು ಬಿಂಬಿಸುತ್ತಿದ್ದು, ಇದನ್ನು ಸಂರಕ್ಷಿಸಬೇಕಿದೆ. ಇದನ್ನು ಸಂರಕ್ಷಿಸುವಲ್ಲಿ ಪುರಸಭೆ ಆಡಳಿತ ಮುಂದಾಗಬೇಕು ಎಂದು ಕನ್ನಡ ಹಿತರಕ್ಷಕ ಸಂಘದ ಗೌರವ ಅಧ್ಯಕ್ಷ ಕ.ಮ. ಹೇಮಯ್ಯಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಮತ್ತಿತರರು ಒತ್ತಾಯಿಸಿದ್ದಾರೆ.
ಮಹಾಸತಿ ಕಲ್ಲನ್ನು ಸುರಕ್ಷಿತ ಸ್ಥಳದಲ್ಲಿ ಸಂರಕ್ಷಿಸಲಾಗುವುದು. ಸರ್ಕಾರಿ ಶಾಲೆ ಇಲ್ಲವೆ ಸನಿಹದ ಸ್ಥಳದಲ್ಲಿ ಸುರಕ್ಷಿತವಾಗಿಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಕೆ. ದುರುಗಣ್ಣ ತಿಳಿಸಿದ್ದಾರೆ.