ಕೆಪಿಎಸ್‌ ಮ್ಯಾಗ್ನೆಟ್‌ ಯೋಜನೆ ವಿರೋಧಿಸಿ ಜನಸಮಾವೇಶ

KannadaprabhaNewsNetwork |  
Published : Apr 06, 2026, 03:15 AM IST
ಬೆಳಗಾವಿ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ 40,000 ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದರ ವಿರುದ್ಧ ಏ.10 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಬೃಹತ್ ಜನ ಸಮಾವೇಶಕ್ಕೆ ಬೆಳಗಾವಿಯ ವಿವಿಧ ಹಳ್ಳಿಗಳಲ್ಲಿ ಭರದ ತಯಾರಿ ನಡೆದಿದೆ. ಜಿಲ್ಲೆಯ ಹೊನ್ನಿಹಾಳ, ಕುಟ್ಟಲವಾಡಿ, ಬಾಳಗಮಟ್ಟಿ, ಮಲ್ಲಹೊಳಿ, ಹಾಲಬಾವಿ, ತಲ್ಲೂರು, ಕಜಗಲ್ ಮಾಡಮಗೇರಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಈಗಾಗಲೇ ಎಐಡಿಎಸ್ಓ ನೇತೃತ್ವದಲ್ಲಿ ಸಭೆ ನಡೆಸಿ ಗ್ರಾಮಸ್ಥರ ಮನೆ-ಮನೆಗೆ ತೆರಳಿ ಪೋಷಕರನ್ನು ಹೋರಾಟಕ್ಕೆ ಸಜ್ಜುಗೊಳಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ 40,000 ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದರ ವಿರುದ್ಧ ಏ.10 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಬೃಹತ್ ಜನ ಸಮಾವೇಶಕ್ಕೆ ಬೆಳಗಾವಿಯ ವಿವಿಧ ಹಳ್ಳಿಗಳಲ್ಲಿ ಭರದ ತಯಾರಿ ನಡೆದಿದೆ. ಜಿಲ್ಲೆಯ ಹೊನ್ನಿಹಾಳ, ಕುಟ್ಟಲವಾಡಿ, ಬಾಳಗಮಟ್ಟಿ, ಮಲ್ಲಹೊಳಿ, ಹಾಲಬಾವಿ, ತಲ್ಲೂರು, ಕಜಗಲ್ ಮಾಡಮಗೇರಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಈಗಾಗಲೇ ಎಐಡಿಎಸ್ಓ ನೇತೃತ್ವದಲ್ಲಿ ಸಭೆ ನಡೆಸಿ ಗ್ರಾಮಸ್ಥರ ಮನೆ-ಮನೆಗೆ ತೆರಳಿ ಪೋಷಕರನ್ನು ಹೋರಾಟಕ್ಕೆ ಸಜ್ಜುಗೊಳಿಸಲಾಗುತ್ತಿದೆ.

ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಿಂದ ಆರಂಭಗೊಂಡು ಕಳೆದ 4 ತಿಂಗಳಿನಿಂದ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ಜನ ಹೋರಾಟ ನಡೆದಿದೆ. ಎಐಡಿಎಸ್ಓ ನೇತೃತ್ವದಲ್ಲಿ ಹಳ್ಳಿ-ಹಳ್ಳಿಗಳಲ್ಲಿ ಪೋಷಕರು ಹಾಗೂ ಗ್ರಾಮಸ್ಥರು ಸಾರ್ವಜನಿಕ ಶಿಕ್ಷಣ ಉಳಿಸಿ ಹೋರಾಟ ಸಮಿತಿಗಳನ್ನು ರಚಿಸಿ ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಒಕ್ಕೊರಲಿನಿಂದ ಧ್ವನಿಯೆತ್ತಿದ್ದಾರೆ. ಜಿಲ್ಲೆಯ ಹಾಗೂ ನಾಡಿನ ಹೆಸರಾಂತ ಸಾಹಿತಿಗಳು, ಶಿಕ್ಷಣ ತಜ್ಞರು ಹಾಗೂ ಶಿಕ್ಷಣ ಪ್ರೇಮಿಗಳು ಬಡಮಕ್ಕಳನ್ನು ಶಿಕ್ಷಣದಿಂದ ಶಾಶ್ವತವಾಗಿ ದೂರ ತಳ್ಳುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ.

ನಾಡಿನ ಜನತೆಯ ತೀವ್ರ ವಿರೋಧದ ನಡುವೆಯೂ ಸರ್ಕಾರ ಶಾಲೆಗಳನ್ನು ಮುಚ್ಚುವ ಕೆಲಸವನ್ನು ಮುಂದುವರಿಸಿದೆ. ಸರ್ಕಾರವು ಈಗಾಗಲೇ ಯಾವ-ಯಾವ ಶಾಲೆಗಳನ್ನು ವಿಲೀನಗೊಳಿಸಬೇಕೆಂದು ಮ್ಯಾಪಿಂಗ್ ನಡೆಸಿದೆ. ಅಧಿಕಾರಿಗಳಿಂದ ಮ್ಯಾಗ್ನೆಟ್ ಶಾಲೆಯ ಸಮೀಕ್ಷೆ ಮಾಡಿಸಲಾಗುತ್ತಿದೆ. ವಿಲೀನಗೊಳ್ಳುವ ಶಾಲೆಗಳ ಮುಖ್ಯಶಿಕ್ಷಕರಿಗೆ ಮೌಖಿಕವಾಗಿ ಆದೇಶ ನೀಡಲಾಗಿದೆ. ಏ.8 ಮತ್ತು 9 ರಂದು ನಡೆಯಲಿರುವ ಪೋಷಕರ ಸಭೆಗಳಲ್ಲಿ , ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಮ್ಮ ಮಕ್ಕಳನ್ನು KPS ಶಾಲೆಗೆ ಕಳುಹಿಸುವಂತೆ ಒತ್ತಾಯಿಸಲು ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಈ ಯೋಜನೆಯನ್ನು ಶತಾಯಗತಾಯ ಅನುಷ್ಠಾನಗೊಳಿಸಲು ಏಪ್ರಿಲ್ ಒಂದರಂದು ಜಿಲ್ಲೆಯ ಡಿಡಿಪಿಐ ಹಾಗೂ ಬಿಇಓಗಳ ಸಭೆಯನ್ನು ನಡೆಸಿ ಶಾಲೆ ಮುಚ್ಚಲು ಕುತಂತ್ರ ನಡೆಸಿದೆ ಎಂದು ಎಐಡಿಎಸ್ಓ ಆರೋಪಿಸಿದೆ.

ನಾಡಿನ ಹಿರಿಯ ಸಾಹಿತಿಗಳಾದ ಡಾ. ಹಂಪ ನಾಗರಾಜಯ್ಯ, ಡಾ. ಕೆ ಮರುಳಸಿದ್ದಪ್ಪ, ಪ್ರೊ ಎಸ್ ಜಿ ಸಿದ್ದರಾಮಯ್ಯ, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯಾಧ್ಯಕ್ಷರು ಹಾಗೂ ಸಾಹಿತಿಗಳಾದ ಡಾ. ಅಲ್ಲಮಪ್ರಭು ಬೆಟ್ಟದೂರು, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಎ ಮುರಿಗೆಪ್ಪ, ಹಿರಿಯ ಹೋರಾಟಗಾರರಾದ ಶ್ರೀ ರಾಘವೇಂದ್ರ ಕುಷ್ಟಗಿ, ಹಿರಿಯ ನ್ಯಾಯವಾದಿಗಳಾದ ಶ್ರೀಮತಿ ಹೇಮಲತಾ ಮಹಿಷಿ, ಶಿಕ್ಷಣ ತಜ್ಞರಾದ ನಿರಂಜನರಾಧ್ಯ ವಿ ಪಿ, ದಲಿತ ಸಂಘರ್ಷ ಸಮಿತಿಯ ನಾಯಕರಾದ ಗುರುಪ್ರಸಾದ್ ಕೆರೆಗೋಡು, ಮಾವಳ್ಳಿ ಶಂಕರ್, ಅಕ್ಕಮಹಾದೇವಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ ಸಬಿಹಾ ಭೂಮಿಗೌಡ ಹಲವರು ರಾಜ್ಯಮಟ್ಟದ ಜನಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಪ್ರದಾಯ ತಿರಸ್ಕರಿಸದಿದ್ರೆ ಪ್ರಗತಿಶೀಲತೆ ಪ್ರಬಲವಾಗದು
ಸೋಮಾರಿಗಳಾಗದೆ ಕ್ರಿಯಾಶೀಲರಾಗಲಿ