ಕಾರ್ಖಾನೆ ವಿರುದ್ಧ ಜನಾಂದೋಲನ, ವರದಿ ಕೇಳಿದ ಸರ್ಕಾರ

KannadaprabhaNewsNetwork | Updated : Feb 17 2025, 12:31 AM IST

ಸಾರಾಂಶ

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೊಪ್ಪಳ ಬಳಿ 54 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವ ಉಕ್ಕು ಕಾರ್ಖಾನೆ ಪ್ರಾರಂಭಿಸುವುದಕ್ಕೆ ನೀಡಿರುವ ಅನುಮತಿಯ ವಿರುದ್ಧ ಕೊಪ್ಪಳದಲ್ಲಿ ನಡೆಯುತ್ತಿರುವ ಜನಾಂದೋಲನದ ಕುರಿತು ರಾಜ್ಯ ಸರ್ಕಾರ ಜಿಲ್ಲಾಡಳಿತದಿಂದ ಮಾಹಿತಿ ಕೇಳಿದೆ.

ಭೂಮಿ ಪೂಜೆಗೆ ಆಗಮಿಸಲು ನಿರಾಕರಿಸಿದ ಸಿಎಂ, ಗವಿಶ್ರೀಗಳು

ಕಾರ್ಖಾನೆ ಕೊಪ್ಪಳಕ್ಕೆ ಹೊಂದಿಕೊಂಡೆ ಪರವಾನಗಿ ನೀಡಿದ್ಯಾಕೆ?

ಸಾಲು ಸಾಲು ಹೋರಾಟಕ್ಕೆ ಸಜ್ಜಾಗುತ್ತಿರುವ ಕೊಪ್ಪಳ ಜನ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೊಪ್ಪಳ ಬಳಿ ₹54 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವ ಉಕ್ಕು ಕಾರ್ಖಾನೆ ಪ್ರಾರಂಭಿಸುವುದಕ್ಕೆ ನೀಡಿರುವ ಅನುಮತಿಯ ವಿರುದ್ಧ ಕೊಪ್ಪಳದಲ್ಲಿ ನಡೆಯುತ್ತಿರುವ ಜನಾಂದೋಲನದ ಕುರಿತು ರಾಜ್ಯ ಸರ್ಕಾರ ಜಿಲ್ಲಾಡಳಿತದಿಂದ ಮಾಹಿತಿ ಕೇಳಿದೆ. ಅಷ್ಟೇ ಅಲ್ಲ, ಕಾರ್ಖಾನೆ ಪ್ರಾರಂಭಿಸುವ ಸ್ಥಳ ಸೇರಿದಂತೆ ಜಿಲ್ಲಾ ಕೇಂದ್ರ ಕೊಪ್ಪಳ ನಗರದ ಜನವಸತಿ ಪ್ರದೇಶದ ಅಂತರದ ಮಾಹಿತಿ ಸಹ ಕೇಳಿದೆ ಎನ್ನಲಾಗಿದೆ.

ಪ್ರಗತಿಪರ ಸಂಘಟನೆಗಳು ಹಾಗೂ ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಸೇರಿದಂತೆ ತಾಲೂಕಿನ ಗಿಣಿಗೇರಿ ಗ್ರಾಮದ ಸಂಘಟನೆಗಳು ಪ್ರತಿಭಟನೆ ಮಾಡುತ್ತಿರುವ ಮಾಹಿತಿ ಅರಿತ ರಾಜ್ಯ ಸರ್ಕಾರ ವಾಸ್ತವ ಅರಿಯಲು ಸಮಗ್ರ ಮಾಹಿತಿಯನ್ನು ಕೇಳಿದೆ.

ಕಾರ್ಖಾನೆ ಈ ಹಿಂದೆ ಪ್ರಾರಂಭವಾದಾಗ ನಡೆದ ಸಭೆ, ಸಾರ್ವಜನಿಕರ ಅಭಿಪ್ರಾಯ, ಪರಿಸರ ಇಲಾಖೆ ನೀಡಿದ ಅನುಮತಿ ಸೇರಿದಂತೆ ಹಲವಾರು ಪ್ರಾಥಮಿಕ ಮಾಹಿತಿಯನ್ನು ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆ ಕೇಳಿದೆ.

ಅಲ್ಲದೇ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಕಾರ್ಖಾನೆ ಪ್ರಾರಂಭಿಸುವುದಕ್ಕೆ ಸ್ಥಳೀಯವಾಗಿ ಇರುವ ಅಭಿಪ್ರಾಯದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಕೊಪ್ಪಳ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ.

ಸಿಎಂ ಹಾಗೂ ಗವಿಶ್ರೀಗಳ ನಿರಾಕರಣೆ:

ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅನುಮತಿ ಪಡೆಯುವ ಮೊದಲೇ ಬಿಎಸ್‌ಪಿಎಲ್ ಕಂಪನಿಯ ಮಾಲೀಕ ರಾಹುಲ್ ಬಲ್ಡೋಟಾ ಅವರು ಕಾರ್ಖಾನೆ ಸ್ಥಾಪನೆಗೆ ಮಾ. 24ರಂದು ಭೂಮಿಪೂಜೆ ದಿನ ನಿಗದಿ ಮಾಡಿ, ಸಿಎಂ ಸಿದ್ದರಾಮಯ್ಯ ಹಾಗೂ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಅವರನ್ನು ಆಹ್ವಾನಿಸಿದ್ದರು. ಆದರೆ, ಇಬ್ಬರೂ ಬರಲು ಒಪ್ಪಿಗೆ ನೀಡಿರಲಿಲ್ಲ.

ಹೋರಾಟಕ್ಕೆ ಗವಿಶ್ರೀ ನೇತೃತ್ವ?:

ಈಗ ಎಲ್ಲೆಡೆಯೂ ಕೇಳಿ ಬರುತ್ತಿರುವ ಕೂಗು ಒಂದೇ, ಕೊಪ್ಪಳವನ್ನು ಕಾಪಾಡಲು ಮತ್ತು ಬಿಎಸ್‌ಪಿಎಲ್ ಕಾರ್ಖಾನೆ ತೊಲಗಿಸಲು ಹೋರಾಟದ ನೇತೃತ್ವವನ್ನು ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ವಹಿಸಬೇಕು ಎನ್ನುವುದು.

ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆಯ ಪೂರ್ವಭಾವಿ ಸಭೆಯಲ್ಲಿಯೂ ಈ ಬಗ್ಗೆ ಅನೇಕರು ಬಹಿರಂಗವಾಗಿಯೇ ಮನವಿ ಮಾಡಿದ್ದರು. ಶ್ರೀಗಳು ನೇತೃತ್ವ ವಹಿಸಿದರೆ ಮಾತ್ರ ಈ ಹೋರಾಟ ಯಶಸ್ವಿಯಾಗಲು ಸಾಧ್ಯ. ಹೀಗಾಗಿ, ಎಲ್ಲರೂ ಒಗ್ಗೂಡಿ ಹೋಗಿ, ಅವರನ್ನೇ ನೇತೃತ್ವನ್ನು ವಹಿಸಿಕೊಳ್ಳುವಂತೆ ಕೋರೋಣ ಎಂದು ಸಹ ಹೇಳಿದ್ದಾರೆ.

ಹೀಗಾಗಿ, ಫೆ. 24ರಂದು ಕರೆ ನೀಡಿರುವ ಕೊಪ್ಪಳ ಬಂದ್ ವೇಳೆಯಲ್ಲಿಯೇ ಶ್ರೀಗಳನ್ನು ಹೋರಾಟಕ್ಕೆ ಕರೆತರುವುದಕ್ಕೆ ತಯಾರಿ ನಡೆದಿದೆ.

ಭಾಗವಹಿಸುತ್ತಾರೆಯೇ ಸಚಿವ, ಶಾಸಕರು?:

ಹೋರಾಟಗಾರರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಶಾಸಕ ರಾಘವೇಂದ್ರ ಹಿಟ್ನಾಳ, ಸಚಿವ ಶಿವರಾಜ ತಂಗಡಗಿ ಸಹ ಕೊಪ್ಪಳ ಬಳಿ ಪ್ರಾರಂಭವಾಗಲಿರುವ ಬಿಎಸ್‌ಪಿಎಲ್ ಕಾರ್ಖಾನೆಯನ್ನು ತೊಲಗಿಸುವಂತೆ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸುವ ಸಾಧ್ಯತೆ ನಿಚ್ಚಳವಾಗಿದೆ.

ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಿ, ತಾವು ಸಹ ಜನಪರ ಹೋರಾಟದೊಂದಿಗೆ ಇದ್ದೇವೆ ಎನ್ನುವುದನ್ನು ತೋರಿಸಿಕೊಡಲಿದ್ದಾರೆ ಎನ್ನುತ್ತಾರೆ ಅವರ ಆಪ್ತರು.

ಇಂದು ಪತ್ರ ಚಳವಳಿ:

ಬಿಎಸ್‌ಪಿಎಲ್ ಕಾರ್ಖಾನೆಯನ್ನು ಕೊಪ್ಪಳ ಬಳಿ ಸ್ಥಾಪನೆ ಮಾಡುವುದನ್ನು ವಿರೋಧಿಸಿ ಫೆ. 17ರಂದು ನಗರದ ಪ್ರಧಾನ ಅಂಚೆ ಕಚೇರಿ ಎದುರು ಬೆಳಗ್ಗೆ 11 ಗಂಟೆಗೆ ಪತ್ರ ಚಳವಳಿ ಹಮ್ಮಿಕೊಂಡಿರುವುದಾಗಿ ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯ ಸಂಚಾಲಕ ವಿಜಯ ಕವಲೂರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ನಿರಂತರವಾಗಿ ಚಳವಳಿ ಮಾಡುವುದಾಗಿ ತಿಳಿಸಿದ್ದಾರೆ.

ವಿಚಾರ ಸಂಕಿರಣ:

ಬಿಎಸ್‌ಪಿಎಲ್ ಕಾರ್ಖಾನೆಯನ್ನು ವಿರೋಧಿಸಿ ಫೆ. 22ರಂದು ಪ್ರಗತಿಪರ ಸಂಘನೆಗಳ ವತಿಯಿಂದ ಕೊಪ್ಪಳದಲ್ಲಿ ವಿಚಾರ ಸಂಕಿರಣ ಹಮ್ಮಿಕೊಂಡಿದ್ದು, ಖ್ಯಾತ ಪರಿಸರವಾದಿ ನಾಗೇಶ ಹೆಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Share this article