ಸ್ವಚ್ಛತೆ ಪಾಲನೆಗೆ ಸಾರ್ವಜನಿಕರ ಸಹಭಾಗಿತ್ವ ಮುಖ್ಯ: ಜಿಲ್ಲಾಧಿಕಾರಿ

KannadaprabhaNewsNetwork |  
Published : Sep 20, 2024, 01:41 AM IST
ಚಿತ್ರ : 19ಎಂಡಿಕೆ1 : ಸ್ವಚ್ಛತಾಹೀ ಸೇವಾ ಪಾಕ್ಷಿಕ ಅಭಿಯಾನಕ್ಕೆ ಜಿಲ್ಲಾಧಿಕಾರಿ ಚಾಲನೆ ನೀಡಿದರು.  | Kannada Prabha

ಸಾರಾಂಶ

ಪ್ರತಿ ವರ್ಷದಂತೆ ಈ ವರ್ಷವೂ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೆ.17 ರಿಂದ ಅ.2 ರ ವರೆಗೂ ಈ ಕಾರ್ಯಕ್ರಮ ನಡೆಯಲಿದೆ. ‘ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ’ ಘೋಷ ವಾಕ್ಯದೊಂದಿಗೆ ಈ ಬಾರಿಯ ಸ್ವಚ್ಛತಾ ಹೀ ಸೇವಾ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವೆಂಕಟರಾಜ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪರಿಸರದ ಸ್ವಚ್ಛತೆ ಕಾಪಾಡುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಪ್ರಮುಖ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದ್ದಾರೆ.

ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಗಿಡ ನೆಡುವ ಮೂಲಕ ಸ್ಚಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೆ.17 ರಿಂದ ಅ.2 ರ ವರೆಗೂ ಈ ಕಾರ್ಯಕ್ರಮ ನಡೆಯಲಿದೆ. ‘ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ’ ಘೋಷ ವಾಕ್ಯದೊಂದಿಗೆ ಈ ಬಾರಿಯ ಸ್ವಚ್ಛತಾ ಹೀ ಸೇವಾ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಅವರು ತಿಳಿಸಿದರು.

ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ಈ ಅಭಿಯಾನವೂ ಸ್ವಚ್ಛತೆಗಾಗಿ ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕರ ಸಹಭಾಗಿತ್ವ ಮತ್ತು ಸಮುದಾಯದ ಭಾಗವಹಿಸುವಿಕೆಗೆ ಅನುಕೂಲ ಮಾಡಿಕೊಡುತ್ತದೆ ಎಂದರು.

ಎಲ್ಲೆಂದರಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಸಮುದಾಯದ ಭಾಗವಹಿಸುವಿಕೆಯೊಂದಿಗೆ ಈ ಸ್ಥಳ ಸ್ವಚ್ಛಗೊಳಿಸಲಾಗುತ್ತದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ. ಜೊತೆಗೆ ಈ ರೀತಿಯಾಗಿ ಅಕ್ರಮವಾಗಿ ತ್ಯಾಜ್ಯ ಸುರಿಯುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಮತ್ತು ಜಿಲ್ಲಾ ಪಂಚಾಯರ್ ಉಪ ಕಾರ್ಯದರ್ಶಿ ಜಿ.ಧನರಾಜು ಅವರು ದೀಪ ಬೆಳಗಿಸುವ ಮೂಲಕ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವ ಉದ್ದೇಶದಿಂದ, ಎಲ್ಲರ ಆರೋಗ್ಯದ ಹಿತ ದೃಷ್ಟಿಯಿಂದ, ಒಮ್ಮೆ ಉಪಯೋಗಿಸುವ ಪ್ಲಾಸ್ಟಿಕ್ ಬಳಕೆ ತ್ಯಜಿಸುತ್ತೇನೆ. ದಿನನಿತ್ಯ ಪ್ಲಾಸ್ಟಿಕ್‌ ಬಳಸದೇ ಪರಿಸರ ಸ್ನೇಹಿ ಕೈಚೀಲ ವಸ್ತುಗಳನ್ನು ಉಪಯೋಗಿಸುತ್ತೇನೆ ಎಂದರು.

ಮನೆಯ ಕಸವನ್ನು ಹಸಿ ಮತ್ತು ಒಣ ಕಸವನ್ನಾಗಿ ವಿಂಗಡಿಸಿ, ವಿಲೇವಾರಿ ಮಾಡುತ್ತೇನೆ. ಎಲ್ಲೆಂದರಲ್ಲಿ ಕಸ ಬಿಸಾಡದಂತೆ ಜನರಲ್ಲಿ ಜಾಗೃತಿ ಮೂಡಿಸಿ ನಮ್ಮ ಗ್ರಾಮವನ್ನು ಸ್ವಚ್ಛ, ಸುಂದರವನ್ನಾಗಿಸಲು ಶ್ರಮಿಸುತ್ತೇನೆ ಎಂದು ಪ್ರತಿಜ್ಞೆ ಬೋಧಿಸಿದರು.ನಮ್ಮ ಸುತ್ತ-ಮುತ್ತಲ ಪರಿಸರದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಸಹಕರಿಸುತ್ತೇನೆ. ನೆರೆ ಹೊರೆಯವರಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ, ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿ ರೂಪಿಸಲು ಶ್ರಮಿಸುತ್ತೇನೆ. ಈ ಎಲ್ಲಾ ಕ್ರಮಗಳನ್ನು ಪಾಲಿಸುವಂತೆ ಇತರರನ್ನು ಪ್ರೇರೇಪಿಸುವಂತಾಗಬೇಕು ಎಂದು ಹೇಳಿದರು.

ಗ್ರಾಮವನ್ನು ಸ್ವಚ್ಛ-ಸುಂದರ ಹಾಗೂ ಆರೋಗ್ಯವಂತವಾಗಿಸಿ, ಜವಾಬ್ದಾರಿಯುತ ನಾಗರಿಕನಾಗಿ ಸೇವೆ ಮಾಡುವುದಾಗಿ ದೃಢ ಪ್ರತಿಜ್ಞೆ ಮಾಡುತ್ತೇನೆ. ಸ್ವಚ್ಚ ಮೇವ ಜಯತೇ ಎಂದು ಜಿ.ಪಂ.ಉಪ ಕಾರ್ಯದರ್ಶಿ ಪ್ರತಿಜ್ಞಾ ವಿಧಿ ಬೋಧಿಸಿದರು.

ತಾಯಿಯ ಹೆಸರಲ್ಲಿ ಒಂದು ವೃಕ್ಷ (ಏಕ್ ಪೇಡ್ ಮಾ ಕೇ ನಾಮ್) ಅಭಿಯಾನದ ಭಾಗವಾಗಿ ಸಸಿ ನೆಟ್ಟು ನೀರೆರೆಯಲಾಯಿತು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ್, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ನಾಯಕ್, ಸಹಾಯಕ ಯೋಜನಾಧಿಕಾರಿ ಜೀವನ್ ಕುಮಾರ್, ಸ್ವಚ್ಛ ಭಾರತ್ ಮಿಷನ್ ಯೋಜನೆಯ ಜಿಲ್ಲಾ ಸಮಾಲೋಚಕರಾದ ಹರ್ಷಿತ, ಪೆಮ್ಮಯ್ಯ, ಸೂರಜ್, ವಾಸುದೇವ್ ಇತರರು ಇದ್ದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ