- ಅಖಿಲ ಭಾರತ ಹಕ್ಕುಗಳ ಆಂದೋಲನದ ರಾಜ್ಯಾಧ್ಯಕ್ಷ ಡಾ. ಕೆ.ಎಸ್. ಜನಾರ್ದನ ಹೇಳಿಕೆ । ಸರ್ಕಾರಕ್ಕೆ ಶೀಘ್ರ ಹಕ್ಕೊತ್ತಾಯ
- - - ಕನ್ನಡಪ್ರಭ ವಾರ್ತೆ ದಾವಣಗೆರೆಗ್ರಾಮೀಣ, ನಗರ ಪ್ರದೇಶದಲ್ಲಿರುವ ಸಾರ್ವಜನಿಕ ಆಸ್ತಿಗಳನ್ನು ದಲಿತರಿಗೆ ಸಮಾನವಾಗಿ ದೊರೆಯುವಂತೆ ಅಗತ್ಯ ಕಾಯ್ದೆ ರಚಿಸಬೇಕು. ಈ ಕಾಯ್ದೆ ಕಟ್ಟುನಿಟ್ಟಿನ ಜಾರಿಗೊಳಿಸಬೇಕು. ದಾವಣಗೆರೆ- ಹರಿಹರದಲ್ಲಿ ನಡೆದ ಅಖಿಲ ಭಾರತ ಹಕ್ಕುಗಳ ಆಂದೋಲನದ ಕರ್ನಾಟಕದ ರಾಜ್ಯ ಪ್ರಥಮ ಸಮ್ಮೇಳನದಲ್ಲಿ ಕೆಲ ಹಕ್ಕೊತ್ತಾಯ ನಿರ್ಣಯ ಕೈಕೊಂಡು, ಸರ್ಕಾರಕ್ಕೆ ಮಂಡಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಆಂದೋಲನದ ಕರ್ನಾಟಕದ ನೂತನ ರಾಜ್ಯಾಧ್ಯಕ್ಷ ಡಾ. ಕೆ.ಎಸ್. ಜನಾರ್ದನ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಆರೋಗ್ಯ ಮತ್ತು ರಕ್ಷಣೆ ಖಚಿತಪಡಿಸಲು, ಮಹಿಳೆಯರ ಹಕ್ಕುಗಳಿಗೆ ರಕ್ಷಣೆ ಮತ್ತು ಜೀವನ ಕ್ರಮವನ್ನು ಸಮಾನವಾಗಿಸಲು ಕಾರ್ಯಕ್ರಮ ರೂಪಿಸುವಂತೆ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಲಾಗುವುದು ಎಂದರು.ಪರಿಶಿಷ್ಟ ಜಾತಿಗೆ ಮೂಲಸೌಕರ್ಯ, ಆರೋಗ್ಯ, ಚಿಕಿತ್ಸೆ, ಸಾಮಾಜಿಕ ಭದ್ರತೆ, ಸಾಮಾಜಿಕ ಸೇವೆಗಳು, ಸಾರ್ವಜನಿಕ ಸೌಕರ್ಯಗಳು, ಗ್ರಾಮೀಣ ಭೂರಹಿತರಿಗೆ ಜೀವನ ಅವಶ್ಯಕ ಕೂಲಿ ಮತ್ತು ದಲಿತರಿಗೆ 5 ಎಕರೆ ಭೂ ಒಡೆತನ ನೀಡಬೇಕು. ಕೊಳವೆಬಾವಿ ಸೌಲಭ್ಯ ಒದಗಿಸಬೇಕು. ಸರ್ಕಾರದ ಎಲ್ಲ ಖರೀದಿ ಮತ್ತು ಗುತ್ತಿಗೆಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಸರಿಯಾದ ಮೀಸಲಾತಿ ಒದಗಿಸಬೇಕು. ಖಾಸಗಿ ಸಂಸ್ಥೆಗಳಲ್ಲಿ ಸರಬರಾಜು ವೈವಿಧ್ಯತೆ ಹಾಗೂ ವ್ಯಾಪಾರ ವೈವಿಧ್ಯತೆ ಜಾರಿಗೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಆಂದೋಲನದ ಪ್ರಧಾನ ಕಾರ್ಯದರ್ಶಿ ಡಾ.ಮಹೇಶಕುಮಾರ ರಾಥೋಡ್ ಮಾತನಾಡಿ, ಜ.5ರಿಂದ ಮೂರು ದಿನಗಳ ಕಾಲ ತೆಲಂಗಾಣದ ಹೈದರಾಬಾದ್‌ನಲ್ಲಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದಿಂದ ಈಚೆಗೆ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಪ್ರಥಮ ರಾಜ್ಯ ಸಮ್ಮೇಳನ ಪ್ರತಿನಿಧಿಗಳ ಅಧಿವೇಶನದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.ಎಸ್ಸಿ-ಎಸ್ಟಿ ದೌರ್ಜನ್ ತಡೆ ಕಾಯ್ದೆ ಸಮರ್ಪಕವಾಗಿ ಜಾರಿಗೊಳ್ಳಬೇಕು. ಕೇಂದ್ರ ಬಜೆಟ್‌ನಲ್ಲಿ ಎಸ್ಸಿ-ಎಸ್ಟಿಗಳ ಉಪ ಯೋಜನೆಗಾಗಿ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಮೊತ್ತ ಒದಗಿಸಬೇಕು. ಬೇರೆ ಉದ್ದೇಶಕ್ಕಾಗಿ ಹಣ ಬಳಸುವುದಾಗಲೀ, ನಿಗದಿತ ಮೊತ್ತ ಬಳಸದಿರುವುದಾಗಲಿ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಬೇಕು. ಕೂಡಲೇ ಜಾತಿ ಗಣತಿ ಮಾಡಬೇಕು. 2021ರಲ್ಲಿ ಆಗಬೇಕಾದ ಜನಗಣತಿಯೊಂದಿಗೆ ಜಾತಿ ಆಧಾರಿತ ಗಣತಿ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಆಂದೋಲನದ ಆವರಗೆರೆ ಚಂದ್ರು, ಹಲಗಿ ಸುರೇಶ, ಲಕ್ಷ್ಮಣ, ಸುರೇಶ್ ಯರಗುಂಟೆ, ರಾಜು ಕೆರೆಯಾಗಳಹಳ್ಳಿ, ಸಿ.ರಮೇಶ, ಜಯಣ್ಣ, ನರೇಗಾ ರಂಗನಾಥ, ಸರೋಜ, ಶೇಖರನಾಯ್ಕ ಇತರರು ಇದ್ದರು.- - -
ಬಾಕ್ಸ್ * ಬೇಡಿಕೆಗಳೇನೇನು? - ನೂತನ ಶಿಕ್ಷಣ ನೀತಿ ಕೈ ಬಿಟ್ಟು, ಎಲ್ಲ ದಲಿತರಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ಖಚಿತಪಡಿಸಬೇಕು- ಸಮಯಕ್ಕೆ ಸರಿಯಾಗಿ, ಕ್ರಮಬದ್ಧವಾಗಿ ವಿದ್ಯಾರ್ಥಿ ವೇತನ ನೀಡಬೇಕು
- ಎಲ್ಲ ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಸ್ಥಾನಗಳನ್ನು ಭರ್ತಿ ಮಾಡಬೇಕು- ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ನಿಷೇಧಿಸುವ ಕಾಯ್ದೆ ಜಾರಿಗೆ ತರಬೇಕು
- ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕಡ್ಡಾಯಗೊಳಿಸಬೇಕು- ಸರ್ಕಾರಿ ಕ್ಷೇತ್ರದ ಬ್ಯಾಕ್ ಲಾಗ್ ಹುದ್ದೆ ತಕ್ಷಣ ಭರ್ತಿ ಮಾಡಬೇಕು, ಬಡ್ತಿಯಲ್ಲಿ ಮೀಸಲಾತಿ ಜಾರಿಗೆ ತರಬೇಕು
- ಮಲ ಹೊರುವ ಹಾಗೂ ಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾಡುವುದನ್ನು ರದ್ದುಪಡಿಸಬೇಕು, ಈ ಆದೇಶ ಪಾಲಿಸದವರನ್ನು ಅಪರಾಧಿಗಳೆಂದು ಪರಿಗಣಿಸಿ, ಶಿಕ್ಷೆಗೆ ಒಳಪಡಿಸಬೇಕು- ನರೇಗಾ ಯೋಜನೆ ಯಾವುದೇ ಷರತ್ತು ವಿಧಿಸದೇ, ಯಾವುದೇ ಅಡೆತಡೆ ಹೇರದೆ ಜಾರಿಗೆ ತರಬೇಕು,
- ನರೇಗಾ ಕೆಲಸದ ದಿನಗಳನ್ನು 200 ದಿನಕ್ಕೆ ಹೆಚ್ಚಿಬೇಕು, ಬಾಕಿ ವೇತನ ತಕ್ಷಣ ಸಂದಾಯ ಮಾಡಬೇಕು- ದಿನವೊಂದರ ವೇತನ ₹600ಕ್ಕೆ ಹೆಚ್ಚಿಸಬೇಕು, ನಗರ ಪ್ರದೇಶದಲ್ಲೂ ಉದ್ಯೋಗ ಖಾತ್ರಿ ಯೋಜನೆ ವಿಸ್ತರಿಸಬೇಕು
- ಉದ್ಯೋಗ ಖಾತ್ರಿ ಯೋಜನೆಯಡಿ 55 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು- - - -10ಕೆಡಿವಿಜಿ1:
ದಾವಣಗೆರೆಯಲ್ಲಿ ಭಾನುವಾರ ಅಖಿಲ ಭಾರತ ಹಕ್ಕುಗಳ ಆಂದೋಲನದ ಕರ್ನಾಟಕದ ನೂತನ ರಾಜ್ಯಾಧ್ಯಕ್ಷ ಡಾ. ಕೆ.ಎಸ್. ಜನಾರ್ದನ, ಪ್ರಧಾನ ಕಾರ್ಯದರ್ಶಿ ಡಾ.ಮಹೇಶ ಕುಮಾರ ರಾಥೋಡ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.