ಲಕ್ಕಮ್ಮನಹಳ್ಳಿ ಗ್ರಾಮದಲ್ಲಿ ಆಯೋಜನೆ । ಹಳೇ ಸಮಸ್ಯೆಗಳ ಅರ್ಜಿಗಳ ಶೀಘ್ರ ವಿಲೇವಾರಿಗೆ ಸೂಚನೆ
ಗ್ರಾಮೀಣ ಭಾಗದ ಜನಸಂಪರ್ಕ ಸಭೆಗಳು ಗ್ರಾಮಸ್ಥರ ಮೂಲ ಸೌಕರ್ಯಕ್ಕೆ ಸ್ಪಂದಿಸುವ ಸಭೆಗಳಾಗಬೇಕು. ಕಾಟಾಚಾರದ ಸಭೆಗಳಾದರೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುವುದಿಲ್ಲ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ತಾಲೂಕಿನ ಲಕ್ಕಮ್ಮನಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ಧ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮೀ ಯೋಜನೆ, ವಿದ್ಯುತ್ ಸಮಸ್ಯೆ, ನೀರಾವರಿ ಸೌಲಭ್ಯಗಳ ಕೊರತೆ ಎದುರಾದಲ್ಲಿ ರೈತರು ತಾಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದರೆ, ಮುಂದಿನ ಸಭೆಯೊಳಗೆ ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಸಭೆ ನಡೆಸಿ ಪ್ರಯೋಜನವಿಲ್ಲ. ಹೀಗಾಗಿ ಹಳೇ ಅರ್ಜಿಗಳನ್ನು ಶೀಘ್ರವೇ ವಿಲೇವಾರಿಗೊಳಿಸಬೇಕು ಎಂದರು.
ಜನಸಂಪರ್ಕ ಸಭೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಾಟಾಚಾರದ ಸಭೆಗಳಾಗಬಾರದು. ಜನ ಸಾಮಾನ್ಯರ ಅರ್ಜಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ಮುಂದಿನ ಸಭೆಯೊಳಗೆ ಹಿಂದಿನ ಅರ್ಜಿಗಳು ವಿಲೇಗೊಳಿಸಲು ಮುಂದಾಗಬೇಕು. ಹೊಸ ಅರ್ಜಿಗಳು ದಾಖಲಾಗುವಂತೆ ವ್ಯವಸ್ಥೆ ನಿರ್ಮಾಣಗೊಂಡರೆ ಶೇ.80 ರಷ್ಟು ಸಮಸ್ಯೆಗಳಿಗೆ ಪರಿಹಾರ ಲಭಿಸಿದಂತೆ ಎಂದು ಹೇಳಿದರು.
ಗ್ರಾಪಂ ವ್ಯಾಪ್ತಿಯ ಕಟ್ಟೆಹೊಳೆಗೆ ನೀರು ತುಂಬಿಸುವ ಕಾರ್ಯಕ್ಕೆ ಹಲವಾರು ಮನವಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರದಿಂದ ಆಡಳಿತಾತ್ಮಕ ಮಂಜೂರಾತಿ ದೊರಕಿದ್ದು ಮುಂಬರುವ ದಿನಗಳಲ್ಲಿ 1.5 ಕೋಟಿ ರು. ಅನುದಾನದಲ್ಲಿ ಹೊಳೆ ತುಂಬಿಸುವ ಕಾರ್ಯಕ್ಕೆ ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಸ್ಥಳೀಯ ಗ್ರಾಮಸ್ಥರು ಮಾತನಾಡಿ, ವಿದ್ಯುತ್ ಲೈನ್ ಹಾಗೂ ವೋಲ್ಟೇಜ್ ಸಮಸ್ಯೆಯಿದೆ. ಅನೇಕ ವರ್ಷಗಳಿಂದ ಅರ್ಜಿ ಸಲ್ಲಿಸಿದರೂ ಮೆಸ್ಕಾಂ ಸ್ಪಂದಿಸುತ್ತಿಲ್ಲ ಹಾಗೂ ಸ್ಥಳೀಯ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಶಾಸಕರಿಗೆ ತಿಳಿಸಿದಾಗ, ಸ್ಥಳದಲ್ಲಿದ್ದ ಕೆಇಬಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಮುಂದಿನ ಮಾರ್ಚ್ ಅಂತ್ಯದೊಳಗೆ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.