ಜನರ ಬಳಿಗೆ ಹೋಗಿ ಸಂಕಷ್ಟ ಆಲಿಸಿದಾಗ ಮಾತ್ರ ಸಮಸ್ಯೆಯ ಅರಿವು

KannadaprabhaNewsNetwork | Published : Jan 21, 2025 12:30 AM

ಸಾರಾಂಶ

ಶಾಸಕನಾಗಿ ಜನರ ಸಂಕಷ್ಟವನ್ನು ಆಲಿಸಿ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಜವಾಬ್ದಾರಿ

ಕನ್ನಡಪ್ರಭ ವಾರ್ತೆ ನಂಜನಗೂಡುಜನರ ಬಳಿಗೆ ಹೋಗಿ ಅವರ ಸಂಕಷ್ಟ ಆಲಿಸಿದಾಗ ಮಾತ್ರ ಸಮಸ್ಯೆಗಳ ನಿಜಾಂಶ ತಿಳಿಯಲಿದ್ದು, ಜೊತೆಗೆ ಸಮಸ್ಯೆಗಳನ್ನು ಸ್ಥಳದಲ್ಲಿ ಪರಿಹರಿಸಲು ಪ್ರತಿ ಸೋಮವಾರ ಅಧಿಕಾರಿಗಳೊಂದಿಗೆ ಕೂಡಿ ಜನಸಂಪರ್ಕ ಸಭೆ ನಡೆಸಿ, ಜನರ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ಪಟ್ಟಣದ ತಾಪಂ ಕಚೇರಿಯ ಶಾಸಕರ ಕೊಠಡಿಯಲ್ಲಿ ಸೋಮವಾರ ಜನಸಂಪರ್ಕ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಕ್ಷೇತ್ರದ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ನಮ್ಮ ಮನೆಗೆ ಅಲೆದಾಟ ನಡೆಸುವುದನ್ನು ತಪ್ಪಿಸಲು, ಕಳೆದ ಒಂದೂವರೆ ವರ್ಷಗಳಿಂದ ಪ್ರತಿ ಸೋಮವಾರ ನಂಜನಗೂಡಿನಲ್ಲಿ ಒಂದು ವಾರ, ಹುಲ್ಲಹಳ್ಳಿ ಗ್ರಾಮದಲ್ಲಿ ಇನ್ನೊಂದು ದಿನ ಜನ ಸಂಪರ್ಕ ಸಭೆ ನಡೆಸುತ್ತಿದ್ದಾನೆ, ಜನ ಸಂಪರ್ಕ ಸಭೆಗೆ ಉತ್ತಮ ಸ್ಪಂದನೆ ಕೂಡ ವ್ಯಕ್ತವಾಗುತ್ತಿದೆ, ಜೊತೆಗೆ ಶಾಸಕನಾಗಿ ಜನರ ಸಂಕಷ್ಟವನ್ನು ಆಲಿಸಿ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಜವಾಬ್ದಾರಿ, ಈ ನಿಟ್ಟಿನಲ್ಲಿ ದಿನದ 24 ಗಂಟೆಯಲ್ಲೂ ಸಹ ದೂರವಾಣಿ ಕರೆ ಮೂಲಕ ಸಮಸ್ಯೆ ಹೇಳಿಕೊಂಡರೂ ಅವರ ಸಮಸ್ಯೆಗಳನ್ನು ಪರಿಹರಿಸಲು ಬದ್ಧನಾಗಿದ್ದೇನೆ ಎಂದರು.ಜನ ಸಂಪರ್ಕ ಸಭೆಯ ವೇಳೆ ಕಂದಾಯ ಇಲಾಖೆಯಿಂದ ಆಗಬೇಕಾಗಿರುವ ಕೆಲಸಗಳಿಗಾಗಿ ಹೆಚ್ಚಿನ ಮಂದಿ ಬರುತ್ತಾರೆ, ಸಾಮಾಜಿಕ ಭದ್ರತಾ ಯೋಜನೆಯ ಪಿಂಚಿಣಿ, ಪೌತಿ ಖಾತೆ, ಜಮೀನು ಸರ್ವೆ, ಜಮೀನುಗಳಿಗಳಿಗೆ ಬಂಡಿದಾರಿ ವಿಚಾರವಾಗಿ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿ ಪರಿಹರಿಸಲಾಗುವುದು, ಸರ್ಕಾರ ಕೆರೆ, ಸ್ಮಶಾನ ಒತ್ತುವರಿ ತೆರವು ಪ್ರಕರಣವನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ತಹಸೀಲ್ದಾರ್ ಅವರಿಗೆ ಅಧಿಕಾರ ನೀಡಿದ್ದು, ಈ ವಿಚಾರವಾಗಿ ಬಂದ ದೂರುಗಳನ್ನು ಕಾಲಮಿತಿಯಲ್ಲಿ ಪರಿಹರಿಸುವಂತೆ ತಾಕೀತು ಮಾಡಲಾಗಿದೆ. ವಿವಿಧ ಇಲಾಖೆಗಳಲ್ಲಿ ನನೆಗುದಿಗೆ ಬಿದ್ದ ಜನರ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಪರಿಹರಿಸಲಾಗುವುದು ಎಂದು ಅವರು ಹೇಳಿದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ. ಮಾರುತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಂಕರ್, ನಗರಸಭಾ ಸದಸ್ಯ ಪ್ರದೀಪ್, ಮುಖಂಡರಾದ ರಾಜು, ನಾಗರಾಜಯ್ಯ, ವಿಜಯಕುಮಾರ್, ಶ್ರೀನಿವಾಸಮೂರ್ತಿ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪ್ರದೀಪ್, ತಾಪಂ ಇಒ ಜೆರಾಲ್ಡ್ ರಾಜೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Share this article