ಸಾರ್ವಜನಿಕರ ಮನವಿಗೆ ಸಕಾಲದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಬೇಕು: ಡಾ.ಮಂತರ್ ಗೌಡ

KannadaprabhaNewsNetwork |  
Published : Nov 17, 2026, 02:30 AM IST
ಸಾರ್ವಜನಿಕರ ಮನವಿಗೆ ಸಕಾಲದಲ್ಲಿ ಜನಪ್ರತಿನಿಧಿಳು ಮತ್ತು ಅಧಿಕಾರಿಗಳು ಸ್ಫಂದಿಸಬೇಕು-ಶಾಸಕ ಡಾ.ಮಂತರ್ ಗೌಡ ಸಲಹೆ | Kannada Prabha

ಸಾರಾಂಶ

ಜನಪ್ರತಿನಿಧಿಗಳ ಜೊತೆಗೆ ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡಬೇಕು. ಸಾರ್ವಜನಿಕರ ಮನವಿಗೆ ಸಕಾಲದಲ್ಲಿ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರದ ಆಶಯ ಮತ್ತು ಪ್ರಜಾಸೇವೆಗೆ ಅರ್ಥವಿರುವುದಿಲ್ಲ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯಪಟ್ಟರು.

ಸೋಮವಾರಪೇಟೆ : ಜನಪ್ರತಿನಿಧಿಗಳ ಜೊತೆಗೆ ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡಬೇಕು. ಸಾರ್ವಜನಿಕರ ಮನವಿಗೆ ಸಕಾಲದಲ್ಲಿ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರದ ಆಶಯ ಮತ್ತು ಪ್ರಜಾಸೇವೆಗೆ ಅರ್ಥವಿರುವುದಿಲ್ಲ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯಪಟ್ಟರು.

ತಾಲೂಕಿನ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಪ್ರಜಾಸೇವಾ ಅಭಿಯಾನದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತಾದ 30 ಕ್ಕೂ ಹೆಚ್ಚು ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿ ಅವರು ಮಾತನಾಡಿದರು.

ಕಂದಾಯ, ಆಹಾರ, ಅರಣ್ಯ, ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ, ಶಿಕ್ಷಣ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮತ್ತಿತರ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಅರ್ಜಿ ಸಲ್ಲಿಸಿದರು.ಕಾಡಾನೆ ದಾಳಿಯಿಂದ ಉಂಟಾಗಿರುವ ಬೆಳೆ ಹಾನಿಗೆ ಇನ್ನೂ ಪರಿಹಾರ ದೊರೆತಿಲ್ಲ.ಶಾಂತಳ್ಳಿ ಹೋಬಳಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ದುರಸ್ತಿ ಕಾರ್ಯಗಳು ನಡೆಯುತ್ತಿಲ್ಲ.ಲೋಕೋಪಯೋಗಿ ಇಲಾಖೆಯವರು ರಸ್ತೆ ಬದಿಯ ಕಾಡುಗಳನ್ನು ಕಡಿಯದೆ ಹೆಚ್ಚಿನ ವಾಹನ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಗುಂಡಿ ಮುಚ್ಚಲು 7 ಕೋಟಿ ರು..ಬಿಡುಗಡೆಯಾಗಿದ್ದರೂ ಯಾವ ರಸ್ತೆ ದುರಸ್ತಿಯಾಗಿದೆ. ಬಿಡುಗಡೆ ಆಗಿರುವ ಹಣ ಎಲ್ಲಿಗೆ ಹೋಗಿದೆ? ಎಂದು ಗ್ರಾಮಸ್ಥರೋರ್ವರು ಪ್ರಶ್ನಿಸಿದರು. ಕೆಂಚಮ್ಮನ ಬಾಣೆಯಲ್ಲಿ ಮನೆ ನಿರ್ಮಾಣಕ್ಕೆ ಬೇಳೂರು ಗ್ರಾಮ ಪಂಚಾಯಿತಿಯ ಸದಸ್ಯರೋರ್ವರು 12, 000 ರು. ಲಂಚ ಪಡೆದಿದ್ದಾರೆ. ಆದರೆ ಇನ್ನೂ ಮನೆ ನಿರ್ಮಾಣ ಕಾರ್ಯ ಆಗಿಲ್ಲ ಎಂದು ಫಲಾನುಭವಿಯೋರ್ವರು ಶಾಸಕರಿಗೆ ತಿಳಿಸಿದರು. ಆಹಾರ ಇಲಾಖೆಯ ನಿರೀಕ್ಷಕರು ಪಡಿತರ ಚೀಟಿಯ ಸಮಸ್ಯೆ ಕೇಳಲು ಹೋದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಆರೋಗ್ಯ ಸಮಸ್ಯೆಗೆ ಸಂಬಂದಿಸಿದಂತೆ ಬಿಪಿಎಲ್ ಕಾರ್ಡ್ ಅರ್ಹತೆ ಇದ್ದರೂ, ಇದರ ಬಗ್ಗೆ ವಿಚಾರಿಸಲು ತೆರಳಿದರೆ ಕಚೇರಿಯಲ್ಲಿ ಗದರಿಸುತ್ತಾರೆ ಎಂದು ಬೇಳೂರು ಪಂಚಾಯಿತಿ ವ್ಯಾಪ್ತಿಯ ಮಹಿಳೆಯೋರ್ವರು ದೂರು ನೀಡಿದರು. ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಖಾಸಗಿ ತೋಟಗಳಿಗೆ ಓಡಿಸುತ್ತಿದ್ದಾರೆ. ಇದರಿಂದ ಫಸಲಿಗೆ ಬಂದ ಕಾಫಿ ಗಿಡಗಳು ನಷ್ಟಗೊಂಡಿದೆ ಎಂದು ಐಗೂರು ಗ್ರಾಮದ ಕಾಫಿ ಬೆಳೆಗಾರರೋರ್ವರು ದೂರು ನೀಡಿದರು. ಮೂವತೊಕ್ಲು ಗ್ರಾಮದಲ್ಲಿ 20 ಮನೆಗಳಿಗೆ ಹಕ್ಕುಪತ್ರ ನೀಡಿದ್ದು, ಉಳಿದ 5 ಮನೆಗಳಿಗೆ ನೀಡುತ್ತಿಲ್ಲ ಎಂದು ಗ್ರಾಮದ ಫಲಾನುಭವಿಗಳು ಸಭೆಗೆ ತಿಳಿಸಿದರು.

ಬಿಪಿಎಲ್ ಕಾರ್ಡ್ ರದ್ದತಿ, ಗೃಹಲಕ್ಷ್ಮಿ ಹಣ ಖಾತೆಗೆ ಪಾವತಿಯಾಗದೆ ಇರುವುದು, ವಿದ್ಯುತ್ ಸೌಲಭ್ಯ, ಪಿಂಚಣಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ತಕ್ಷಣವೇ ಪರಿಹಾರ ಮಾಡಿಕೊಡಬೇಕು ಎಂದು ಶಾಸಕರು ಇಲಾಖಾಧಿಕಾರಿಗಳಿಗೆ, ಜನರಿಗೆ ಬೇಕಿರುವುದು ಮೂಲಭೂತ ಸೌಲಭ್ಯಗಳು. ಇವುಗಳನ್ನು ಈಡೇರಿಸದಿದ್ದರೆ ಸರ್ಕಾರದ ಹೊಸ ಯೋಜನೆ ಯಾವ ರೀತಿಯಲ್ಲಿ ಜನರಿಗೆ ಮುಟ್ಟಲು ಸಾಧ್ಯ. ಸರ್ಕಾರದ ಯಾವುದೇ ಯೋಜನೆಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳಿಂದ ಲಂಚ ಪಡೆಯುತ್ತಿರುವುದು ಗೊತ್ತಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಮಲೆನಾಡು ಅಭಿವೃದ್ದಿ ಮಂಡಳಿ ನಿರ್ದೇಶಕ ಕೆ.ಎಂ.ಲೋಕೇಶ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಬಿ.ಬಿ.ಸತೀಶ್, ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೃಕ್ಷಮಾತೆ ಡಾ ಸಾಲುಮರದ ತಿಮ್ಮಕ್ಕ ಸ್ಮರಣೆ ಕಾರ್ಯಕ್ರಮ
ಗಾಳಿಬೀಡು ರಸ್ತೆ ಕಾಮಗಾರಿ ವಿಳಂಬ: ಗ್ರಾಮಸ್ಥರ ಪ್ರತಿಭಟನೆ