ಅಗ್ನಿ ಅವಘಡ ತಡೆಗೆ ಸಾರ್ವಜನಿಕರು ಜಾಗೃತಿ ಹೊಂದಲಿ

KannadaprabhaNewsNetwork |  
Published : Apr 20, 2025, 02:05 AM IST
ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಅಗ್ನಿಶಾಮಕ ದಳದಿಂದ  ಅವಘಡ ತಡೆಗಟ್ಟುವಿಕೆಯಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅಣಕು ಪ್ರದರ್ಶನ ಜರುಗಿತು. ಅಗ್ನಿಶಾಮಕ ಸಿಬ್ಬಂದಿ ಹಾಗೂ ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು.  | Kannada Prabha

ಸಾರಾಂಶ

ಆಸ್ಪತ್ರೆಗಳು ಅತ್ಯಂತ ಸೂಕ್ಷ್ಮ ಸ್ಥಳಗಳಾಗಿದ್ದು, ಆರೋಗ್ಯ ಸಿಬ್ಬಂದಿಗಳು ಅಗ್ನಿ ಅವಘಡಗಳ ಕುರಿತು ಹೆಚ್ಚು ಜಾಗರೂಕತೆ ಹೊಂದಿರಬೇಕು.

ಬಳ್ಳಾರಿ: ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಶನಿವಾರ ಅಗ್ನಿ ಅವಘಡ ತಡೆಗಟ್ಟುವಿಕೆಯಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಜಾಗೃತಿ ಮೂಡಿಸುವ ಕುರಿತು ಅಣಕು ಪ್ರದರ್ಶನ ನಡೆಯಿತು.

ಚಾಲನೆ ನೀಡಿ ಮಾತನಾಡಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಕೆ.ತಿಮ್ಮಾರೆಡ್ಡಿ, ಸಾರ್ವಜನಿಕರು ತಮ್ಮ ಸುತ್ತ-ಮುತ್ತ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದಲ್ಲಿ ಅದರ ತಡೆಗಟ್ಟುವಿಕೆ ಕುರಿತು ಅರಿವು ಹೊಂದಬೇಕು.

ಆಸ್ಪತ್ರೆಗಳು ಅತ್ಯಂತ ಸೂಕ್ಷ್ಮ ಸ್ಥಳಗಳಾಗಿದ್ದು, ಆರೋಗ್ಯ ಸಿಬ್ಬಂದಿಗಳು ಅಗ್ನಿ ಅವಘಡಗಳ ಕುರಿತು ಹೆಚ್ಚು ಜಾಗರೂಕತೆ ಹೊಂದಿರಬೇಕು. ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಬೆಂಕಿ ನಂದಿಸುವ ಸಾಧನಗಳು ಸುವ್ಯವಸ್ಥೆಯಲ್ಲಿ ಇಟ್ಟುಕೊಳ್ಳಬೇಕು. ಅಗ್ನಿಶಾಮಕ ದಳದವರು 24 ಗಂಟೆಯೂ ಸೇವೆ ನೀಡುತ್ತಾರೆ. ಅಗ್ನಿ ದುರಂತ, ತುರ್ತು ಸೇವೆಗಳಿಗಾಗಿ ಸದಾ ಸನ್ನದ್ಧರಾಗಿರುತ್ತಾರೆ. ಆದರೆ, ಅವಘಡ ನಡೆದ ಕೂಡಲೇ ಮಾಹಿತಿ ನೀಡುವುದರಿಂದ ಹೆಚ್ಚಿನ ಅನಾಹುತ ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮನಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಪ್ರತಿ ವರ್ಷ ಏ.14 ರಿಂದ 20 ರ ವರೆಗೆ ದೇಶದಾದ್ಯಂತ ಅಗ್ನಿಶಾಮಕ ಸೇವಾ ಸಪ್ತಾಹ ಆಚರಿಸಿ ಸಾರ್ವಜನಿಕರಿಗೆ ಅಗ್ನಿ ಸುರಕ್ಷತೆ ಕುರಿತು ತಿಳಿವಳಿಕೆ ನೀಡಿ ಅಣಕು ಪ್ರದರ್ಶನ ನಡೆಸಲಾಗುತ್ತದೆ. ಇದರಿಂದ ಅಗ್ನಿ ಅವಘಡ ಸಂಭವಿಸಿದಾಗ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಅಣಕು ಪ್ರದರ್ಶನದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದಲ್ಲಿ ಬಳಸಬಹುದಾದ ಬೆಂಕಿ ನಂದಿಸುವ ಸಾಧನಗಳು, ಅಗ್ನಿ ಸಂಭವಿಸಿದ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸುವುದು, ಪ್ರಥಮ ಚಿಕಿತ್ಸೆ ಹಾಗೂ ಇತರೆ ಕ್ರಮಗಳ ಕುರಿತು ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಯಿತು. ಬಳಿಕ ಅಗ್ನಿಶಾಮಕ ಅಧಿಕಾರಿಗಳ ತಂಡ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎನ್.ಬಸರೆಡ್ಡಿ ನೇತೃತ್ವದಲ್ಲಿ ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳ ತಂಡ ರಚಿಸಿ ಕುತೂಹಲಕಾರಿಯಾಗಿ ಅಣಕು ಪ್ರದರ್ಶನ ನಡೆಸಲಾಯಿತು. ಇದೇ ವೇಳೆ ಬೆಂಕಿ ನಂದಿಸುವ ಕಾರ್ಯಾಚರಣೆ ಕುರಿತು ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು, ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ಗುರುನಾಥ ಬಿ.ಚೌವ್ಹಾಣ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪರಿವೀಕ್ಷಕ ಪರಮೇಶ್ವರ್, ಅಗ್ನಿಶಾಮಕ ಠಾಣಾಧಿಕಾರಿ ದಯಾನಂದ ಗೌಡ, ಜಿಲ್ಲಾಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಗುಮಾಸ್ತೆ ದೇಸಾಯಿ, ಶೂಶ್ರುಷಣಾ ಅಧೀಕ್ಷಕಿ ವಿಮಲಾಕ್ಷಿ ಸೇರಿದಂತೆ ಜಿಲ್ಲಾಸ್ಪತ್ರೆಯ ತಜ್ಞ ವೈದ್ಯರು, ವೈದ್ಯಾಧಿಕಾರಿಗಳು, ಶೂಶ್ರುಷಕರು, ಅಧೀನ ಸಿಬ್ಬಂದಿ ಮತ್ತು ಸಾರ್ವಜನಿಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ