ರಾಜ್ಯ ಸರ್ಕಾರದ ಸಾಧನೆಗಳ ಶ್ವೇತ ಪತ್ರ ಪ್ರಕಟಿಸಲಿ

KannadaprabhaNewsNetwork | Published : Feb 21, 2025 11:49 PM

ಸಾರಾಂಶ

ಬಿಜೆಪಿ ಸರ್ಕಾರವು ಮಾಡಿರುವ ಅಭಿವೃದ್ದಿ ಕೆಲಸಗಳೇ ರಾಜ್ಯದಲ್ಲಿ ಮುಂದುವರೆಯುತ್ತಿವೆ. ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳನ್ನು ಮುಂದಿಟ್ಟು ಆಡಳಿತ ಚುಕ್ಕಾಣಿ ಹಿಡಿದು ಈಗ ಗ್ಯಾರಂಟಿಗಳನ್ನು ನೀಡಲಾಗದೆ ಮುಳುಗಿ ಹೋಗಿದೆ, ಅಭಿವೃದ್ಧಿ ಶೂನ್ಯವಾಗಿದೆ. ಅಭಿವೃದ್ಧಿಯನ್ನು ತಿಳಿಸಲು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ.

ಕನ್ನಡಪ್ರಭ ವಾರ್ತೆ ಕೋಲಾರಬಿಜೆಪಿ ಕೇಂದ್ರದಲ್ಲಿ ಮಾಡಿರುವ ಅಭಿವೃದ್ಧಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಈವರೆಗೆ ಮಾಡಿರುವ ಅಭಿವೃದ್ಧಿಗಳನ್ನು ತಿಳಿಯಲು ಶ್ವೇತ ಪತ್ರ ಬಿಡುಗಡೆ ಮಾಡಲಿ ಎಂದು ಸಂಸದ ಎಂ.ಮಲ್ಲೇಶ್ ಬಾಬು ಸವಾಲು ಹಾಕಿದರು. ನಗರದ ಬಿಜೆಪಿ ಕಚೇರಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕೂಟದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರವು ಮಾಡಿರುವ ಅಭಿವೃದ್ದಿ ಕೆಲಸಗಳೇ ರಾಜ್ಯದಲ್ಲಿ ಮುಂದುವರೆಯುತ್ತಿವೆ. ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳನ್ನು ಮುಂದಿಟ್ಟು ಆಡಳಿತ ಚುಕ್ಕಾಣಿ ಹಿಡಿದು ಈಗ ಗ್ಯಾರಂಟಿಗಳನ್ನು ನೀಡಲಾಗದೆ ಮುಳುಗಿ ಹೋಗಿದೆ, ಅಭಿವೃದ್ಧಿ ಶೂನ್ಯವಾಗಿದೆ ಎಂದರು.ಬಿಹಾರವೂ ಬಿಜೆಪಿ ಪಾಲಾಗಲಿದೆಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಾಲ ಸೀತಾರಾಮನ್ ಎನ್.ಡಿ.ಎ. ಪರವಾಗಿ ತಮ್ಮ ೧೧ನೇ ಬಜೆಟ್‌ ಅನ್ನು ಮಂಡಿಸಿರುವುದು ಬಡವರ ಸಾಮಾನ್ಯ ಜನ ಪರವಾಗಿದೆ, ಈ ಹಿನ್ನೆಲೆಯಲ್ಲಿ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು, ಮುಂದಿನ ಬಿಹಾರ ಚುನಾವಣೆಯಲ್ಲೂ ಬಿಜೆಪಿ ಪಕ್ಷವು ಆಡಳಿತದ ಚುಕ್ಕಾಣಿ ಹಿಡಿಯುವ ವಿಶ್ವಾಸವಿದೆ ಎಂದು ಹೇಳಿದರು. ಆತ್ಮನಿರ್ಭರ ಭಾರತ ಯೋಜನೆ

ಆತ್ಮನಿರ್ಭಾರ ಭಾರತ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಆಮದು ಕಡಿಮೆ ಮಾಡಿ ಸ್ಥಳೀಯವಾಗಿ ಉತ್ಪಾದನೆ ಮಾಡಲು ಹೆಚ್ಚಿನ ಒತ್ತು ನೀಡಬೇಕಾಗಿದೆ. ಇದರಿಂದ ಭಾರತದಲ್ಲಿನ ನಿರುದೋಗಿ ಸಮಸ್ಯೆ ಬಗೆಹರಿಸಬಹುದಾಗಿದೆ. ಸ್ವಯಂ ಉದ್ಯೋಗ ಸೃಷ್ಠಿಸಲು ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಸೂಕ್ಮ, ಅತಿಸೊಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಲು ಹಾಗೂ ಮೈಕ್ರೋ ಎಂಟರ್ ಪ್ರೈಸಸ್ಸ್ ಅಭಿವೃದ್ದಿಗೆ ಕ್ರಮ ಕೈಗೊಂಡಿದೆ ಎಂದರು.

ಐದು ಲಕ್ಷ ಹೆಣ್ಣು ಮಕ್ಕಳಿಗೆ ಉದ್ಯೋಗ ಸೃಷ್ಠಿಗೆ ಯುವಕರಿಗೆ ಸ್ವಯಂ ಉದ್ಯೋಗ ಸೇರಿದಂತೆ ಗರ್ಭೀಣಿ ಮತ್ತು ಬಾಣಂತಿ ಮಹಿಳೆಯರಿಗೆ ವಿಶೇಷ ಯೋಜನೆಯ ಜೊತೆಗೆ ಕ್ಯಾನ್ಸರ್ ಮುಕ್ತಗೊಳಿಸಲು ಆಸ್ಪತ್ರೆ ನಿರ್ಮಾಣಕ್ಕೆ ಕೋಲಾರ ಜಿಲ್ಲೆಯನ್ನು ಪರಿಗಣಿಸಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಮಟ್ಟದ ಯೋಜನೆಗಳು

ಜಿಲ್ಲಾ ಮಟ್ಟದಲ್ಲಿ ರೈಲ್ವೆ ಅಭಿವೃದ್ದಿಗೆ ಸಂಬಂಧಿಸಿದಂತೆ ಟೇಕಲ್, ಬಂಗಾರಪೇಟೆ, ಮಾಲೂರು ಕುಪ್ಪಂ, ಮಾರಿಕುಪ್ಪಂ ಸೇರಿದಂತೆ ಹೊಸ ಮಾರ್ಗಗಳು, ಬೂದಿಕೋಟೆ, ಕಾಮಸಮುದ್ರ, ಸ್ಯಾನಿಟೋರಿಯಂ, ಟೇಕಲ್ ರಸ್ತೆ, ಮುಂತಾದ ಕಡೆ ಆರ್.ಓ.ಬಿ.(ಸೇತುವೆ) ಸ್ಟೇಷನ್‌ಗಳ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಉರಿಗಾಂ ಹಾಗೂ ಕೋರಮಂಗಲ ಸ್ಟೇಷನ್‌ಗಳ ಉದ್ಘಾಟನೆ ಸಚಿವ ವಿ.ಸೋಮಣ್ಣ ಮಾರ್ಚ್ ಮಾಹೆ ಮೊದಲವಾರದಲ್ಲಿ ನೆರವೇರಿಸಲಿದ್ದಾರೆ ಎಂದರು.

ಸೈನಡ್ ಗುಡ್ಡ ನಿಕ್ಷೇಪಕ್ಕೆ ಟೆಂಡರ್‌

ಕೈಗಾರಿಕೆಗಳಿಗೆ ಪೂರಕವಾದ ರಸ್ತೆ ಬೀದಿ ದೀಪ, ನೀರು ಮುಂತಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿರುವ ಹಿನ್ನಲೆಯಲ್ಲಿ ಕೈಗಾರಿಕೆಗಳು ಬರಲು ಹಿಂದೇಟು ಹಾಕುವಂತಾಗಿದೆ. ಶ್ರೀನಿವಾಸಪುರ. ಮುಳಬಾಗಿಲನ ಕಡೆ ಮುಖ ಮಾಡಿವೆ. ಬಿಜಿಎಂಎಲ್ ಸೈನಡ್ ಗುಡ್ಡದಲ್ಲಿ ಚಿನ್ನದ ನಿಕ್ಷೇಪ ಪಡೆಯಲು ಜೂನ್ ಅಥವಾ ಜುಲೈ ಮಾಹೆಯಲ್ಲಿ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ ಎಂದರು.

ಗಣಿ ಕಾರ್ಮಿಕರಿಗೆ ಬಾಕಿ ಇರುವ ವಿ.ಆರ್.ಎಸ್. ಹಣವನ್ನು ಒಂದೇ ಬಾರಿಗೆ ಪಾವತಿಸಲು ೨೫೦ ಕೋಟಿ ರೂ ಶೀಘ್ರದಲ್ಲೇ ಇತ್ಯರ್ಥಪಡಿಸಲಿದೆ. ಸೈನೆಡ್ ಚಿನ್ನದ ನಿಕ್ಷೇಪ ಪಡೆಯುವ ಕೆಲಸಕ್ಕೆ ೩ ಸಾವಿರ ಮಂದಿಗೆ ಉದ್ಯೋಗ ಅವಕಾಶ ೪ ವರ್ಷದವರಗೆ ಸಿಗುವ ಸಾಧ್ಯತೆ ಇದೆ. ಕಾರ್ಮಿಕರು ಈಗ ಇರುವ ವಸತಿಗಳಿಗೆ ಸಂಬಂಧಿಸಿದಂತೆ ಕೇಂದ್ರದ ಸಚಿವರು ಕೆ.ಜಿ.ಎಫ್‌ಗೆ ಭೇಟಿ ನೀಡಿ ಕಾರ್ಮಿಕರೊಂದಿಗೆ ಚರ್ಚಿಸಿ ನಿರ್ದರಿಸಲಿದ್ದಾರೆ ಎಂದರು.

ಗುತ್ತಿಗೆ ಕಾರ್ಮಿಕರ ಕಾಯಂ ಇಲ್ಲ

ಬೆಮೆಲ್ ಕಾರ್ಖಾನೆಯ ಗುತ್ತಿಗೆ ನೌಕರರಿಗೆ ಕಾಯಂ ಮಾಡುವ ಚಿಂತನೆ ಸದ್ಯಕ್ಕೆ ಇಲ್ಲ. ಅವರು ರಾಜ್ಯ ಸರ್ಕಾರಿ ನೌಕರರಗಿಂತ ಹೆಚ್ಚಿನ ವೇತನ ಪಡೆಯುತ್ತಿದ್ದಾರೆ. ಕಾಯಂ ಮಾಡಲು ಬೆಮೆಲ್ ೫ ವಿಭಾಗಗಳನ್ನು ಹೊಂದಿರುವುದರಿಂದ ಆರ್ಥಿಕ ಸಮಸ್ಯೆ ಹೆಚ್ಚಾಗಲಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ, ಮುಖಂಡರಾದ ಸಿ.ಎಂ.ಆರ್.ಶ್ರೀನಾಥ್, ಎಸ್.ಬಿ.ಮುನಿವೆಂಕಟಪ್ಪ, ಬಣಕನಹಳ್ಳಿ ನಟರಾಜ್ ಮತ್ತಿತರರು ಇದ್ದರು.

Share this article