ಪಿಯುಸಿ ಮರುಮೌಲ್ಯಮಾಪನ: ಕ್ರಿಯೇಟಿವ್ ಕಾಲೇಜಿನ ಸಾನ್ವಿ ರಾವ್ ರಾಜ್ಯಕ್ಕೆ ಪ್ರಥಮ

ಸಂಸ್ಕೃತ ಮತ್ತು ಇ.ಬಿ.ಎ.ಸಿ.ಯಲ್ಲಿ ತಲಾ 100ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದ ಸಾನ್ವಿ ರಾವ್, ಆಂಗ್ಲ ಭಾಷೆಯಲ್ಲಿ 95 ಅಂಕಗಳನ್ನು ಗಳಿಸಿದ್ದರು. ಇದೀಗ ಮರುಮೌಲ್ಯಮಾಪನ ಫಲಿತಾಂಶದಲ್ಲಿ 3 ಅಂಕಗಳನ್ನು ಹೆಚ್ಚುವರಿಯಾಗಿ ಗಳಿಸಿಕೊಂಡು 598 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.

KannadaprabhaNewsNetwork | Published : Apr 27, 2024 7:49 PM IST

ಕನ್ನಡಪ್ರಭ ವಾರ್ತೆ ಕಾರ್ಕಳ

ಶೈಕ್ಷಣಿಕ ಸಾಧನೆಯಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆಗೈದಿದೆ. ದ್ವಿತೀಯ ಪಿಯುಸಿ ಮರು ಮೌಲ್ಯಮಾಪನದ ಫಲಿತಾಂಶದ ಬಳಿಕ ವಾಣಿಜ್ಯ ವಿಭಾಗದ ಸಾನ್ವಿ ರಾವ್ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.ಸಂಸ್ಕೃತ ಮತ್ತು ಇ.ಬಿ.ಎ.ಸಿ.ಯಲ್ಲಿ ತಲಾ 100ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದ ಸಾನ್ವಿ ರಾವ್, ಆಂಗ್ಲ ಭಾಷೆಯಲ್ಲಿ 95 ಅಂಕಗಳನ್ನು ಗಳಿಸಿದ್ದರು. ಇದೀಗ ಮರುಮೌಲ್ಯಮಾಪನ ಫಲಿತಾಂಶದಲ್ಲಿ 3 ಅಂಕಗಳನ್ನು ಹೆಚ್ಚುವರಿಯಾಗಿ ಗಳಿಸಿಕೊಂಡು 598 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.

ಸಾನ್ವಿ ರಾವ್‌ ಅವರ ತಂದೆ ಜಗದೀಶ್ ರಾವ್ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದು, ತಾಯಿ ವಿನುತಾ ಭಟ್, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹೊನ್ನಾವರದಲ್ಲಿ ತರಬೇತಿ ಅಧಿಕಾರಿಯಾಗಿದ್ದಾರೆ. ಅಣ್ಣ ಸಮರ್ಥ್ ರಾವ್, ಅಂತಾರಾಷ್ಟ್ರೀಯ ಚೆಸ್ ಪಟು (ವಿಶೇಷ ಚೇತನ)ವಾಗಿದ್ದಾರೆ. ಸಾನ್ವಿ, ಭರತನಾಟ್ಯ, ಸಂಗೀತ, ಯಕ್ಷಗಾನ, ಏಕಪಾತ್ರಾಭಿನಯ, ಭಾಷಣ, ಪ್ರಬಂಧ, ಚರ್ಚಾ ಸ್ಪರ್ಧೆ, ಕವನ ಬರಹ, ಚೆಸ್ ಇತ್ಯಾದಿ ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ.

ಕನ್ನಡಪ್ರಭ ಜೊತೆ ಮಾತನಾಡಿದ ಸಾನ್ವಿ, ನಾನು ಈಗಾಗಲೇ ಸಿಎ ಫೌಂಡೇಷನ್‌ನಲ್ಲಿ ಕೋಚಿಂಗ್ ಪಡೆಯುತ್ತಿದ್ದು, ಲೆಕ್ಕ ಪರಿಶೋಧಕಿ ಆಗಬೇಕೆಂದಿದ್ದೇನೆ. ನನ್ನ ಎಲ್ಲ ಸಾಧನೆಗಳಲ್ಲಿ ಬೆನ್ನೆಲುಬಾಗಿ ನಿಂತಿರುವ ನನ್ನ ಅಪ್ಪ, ಅಮ್ಮ, ಕಾಲೇಜಿನ ಸಂಸ್ಥಾಪಕರು ಹಾಗೂ ಉಪನ್ಯಾಸಕರೇ ನನಗೆ ಪ್ರೇರಣೆ‌ ಎಂದರು.

ವಾಣಿಜ್ಯ ವಿಭಾಗದ ಭಕ್ತಿ ಕಾಮತ್, 596 ಅಂಕಗಳೊಂದಿಗೆ ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದಿದ್ದಾರೆ. ಅವರು ಮರುಮೌಲ್ಯ ಮಾಪನದಲ್ಲಿ ಎರಡು ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು ಎಕನಾಮಿಕ್ಸ್‌ನಲ್ಲಿ 100, ಬ್ಯುಸಿನೆಸ್‌ ಸ್ಟಡೀಸ್‌ನಲ್ಲಿ 100, ಅಕೌಂಟೆನ್ಸಿಯಲ್ಲಿ 100, ಕಂಪ್ಯೂಟರ್ ಸೈನ್ಸ್‌ನಲ್ಲಿ 99, ಇಂಗ್ಲಿಷ್‌ನಲ್ಲಿ 98, ಹಿಂದಿಯಲ್ಲಿ 97 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದಿದ್ದಾರೆ.

ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಬಾಲಕೃಷ್ಣ ಕಾಮತ್ ಹಾಗೂ ಭಾರತಿ ದಂಪತಿಯ ಮಗಳಾಗಿರುವ ಭಕ್ತಿ ಕಾಮತ್, ಸಿಎ ಕಲಿಯಬೇಕು ಎಂದು ತಿಳಿಸಿದ್ದಾರೆ.

ಇನ್ನು ವಿಜ್ಞಾನ ವಿಭಾಗದ ಸಾಗರ್ ಎಸ್.ಟಿ. 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ‍್ಯಾಂಕ್ ಹಾಗೆಯೇ ವಾಣಿಜ್ಯ ವಿಭಾಗದ ವಿನಯ್ ಪ್ರಶಾಂತ್ 589 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 10ನೇ ರ‍್ಯಾಂಕ್ ಗಳಿಸಿರುತ್ತಾರೆ.

ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಒಟ್ಟು 12 ವಿದ್ಯಾರ್ಥಿಗಳು ರಾಜ್ಯದ ಮೊದಲ 10 ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವುದು ಹೆಮ್ಮೆಯ ವಿಷಯವಾಗಿದ್ದು, ವಿದ್ಯಾರ್ಥಿಗಳ ಈ ವಿಶೇಷ ಸಾಧನೆಯನ್ನು ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು, ಬೋಧಕೇತರ ವರ್ಗದವರು ಶ್ಲಾಘಿಸಿ, ಅಭಿನಂದಿಸಿದ್ದಾರೆ.

Share this article