ಜಿಲ್ಲೆಯಲ್ಲಿ ಮಾ.3ರಿಂದ 6ರವರೆಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

KannadaprabhaNewsNetwork | Published : Feb 24, 2024 2:35 AM

ಸಾರಾಂಶ

ಪೋಲಿಯೋ ನಿರ್ಮೂಲನೆಗೆ ಸಾರ್ವತ್ರಿಕ ಲಸಿಕಾಕರಣ ಬಹಳ ಪ್ರಮುಖವಾಗಿರುತ್ತದೆ. ಮಾ.3 ರಂದು ಜಿಲ್ಲೆಯ ಎಲ್ಲಾ ಲಸಿಕಾ ಬೂತ್‌ಗಳಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು ಹಾಗೂ ಮಾ.4 ರಿಂದ 6 ರವರೆಗೆ ಮೂರು ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಬೂತ್‌ನಲ್ಲಿ ಬಿಟ್ಟುಹೋದ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಮಾ.3ರಿಂದ 6ರ ವರೆಗೆ ನಡೆಯಲಿದ್ದು ಈ ಅವಧಿಯಲ್ಲಿ ಯಾವುದೇ ಮಕ್ಕಳು ಲಸಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತಾನಾಡಿ, ಪೋಲಿಯೋ ನಿರ್ಮೂಲನೆಗೆ ಸಾರ್ವತ್ರಿಕ ಲಸಿಕಾಕರಣ ಬಹಳ ಪ್ರಮುಖವಾಗಿರುತ್ತದೆ. ಮಾ.3 ರಂದು ಜಿಲ್ಲೆಯ ಎಲ್ಲಾ ಲಸಿಕಾ ಬೂತ್‌ಗಳಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು ಹಾಗೂ ಮಾ.4 ರಿಂದ 6 ರವರೆಗೆ ಮೂರು ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಬೂತ್‌ನಲ್ಲಿ ಬಿಟ್ಟುಹೋದ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು. ಲಸಿಕೆ ಹಾಕಿಸಲು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹೆಚ್ಚು ಕೆಲಸ ನಿರ್ವಹಿಸಬೇಕೆಂದರು.

ಪೋಲಿಯೋ ಲಸಿಕೆ ಹಾಕಲು ನಗರ ಪ್ರದೇಶದಲ್ಲಿ 53,764 ಹಾಗೂ ಗ್ರಾಮೀಣ ಭಾಗದಲ್ಲಿ 86,372 ಮಕ್ಕಳು ಸೇರಿ 1,40,136 ಮಕ್ಕಳಿಗೆ ಲಸಿಕೆ ಹಾಕಲು ಗುರಿ ಹೊಂದಲಾಗಿದೆ. ಲಸಿಕೆಗಾಗಿ 1,121 ಬೂತ್‌ಗಳು, 28 ಕಡೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳು, 16 ಮೊಬೈಲ್ ಬೂತ್‌ಗಳ ಸಿದ್ಧಪಡಿಸಲಾಗಿದ್ದು 2, 245 ಲಸಿಕಾ ಕಾರ್ಯಕರ್ತರು ಮತ್ತು 219 ಮೇಲ್ವಿಚಾರಕರ ಇದಕ್ಕಾಗಿ ನೇಮಿಸಲಾಗಿದೆ, ತಾಯಂದಿರು ಹಾಗೂ ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕೆಂದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ರೇಣುಕಾರಾಧ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ್ ಬಾರ್ಕಿ ಮತ್ತು ಎಲ್ಲಾ ತಾಲೂಕು ಆರೋಗ್ಯಾಧಿಕಾರಿಗಳಿದ್ದರು.

Share this article